ಸಾರಾಂಶ
ಯಾದಗಿರಿ ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕುಡಿಯುವ ನೀರು ನಿರ್ವಹಣೆ ಕುರಿತು ತಾಲೂಕು ಮಟ್ಟದ ಟಾಸ್ಕ್ ಫೊರ್ಸ್ ಸಮಿತಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಗಾಮೀಣ ಪ್ರದೇಶದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನಿಗಾ ವಹಿಸಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಅವರು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.ಯಾದಗಿರಿ ನಗರದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಕುಡಿಯುವ ನೀರು ನಿರ್ವಹಣೆ ಕುರಿತು ನಡೆದ ತಾಲೂಕು ಮಟ್ಟದ ಟಾಸ್ಕ್ ಫೊರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇಸಿಗೆ ದಿನಗಳಲ್ಲಿ ಗ್ರಾಮೀಣ ಭಾಗದ ಪ್ರತಿ ಹಳ್ಳಿಗಳಲ್ಲಿ ತಲೆದೂರುವ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗಳಿಂದ ಸಮಸ್ಯೆಗಳನ್ನು ಆಲಿಸಿ, ಗ್ರಾಮಗಳಲ್ಲಿರುವ ಓವರ್ ಹೆಡ್ ಟ್ಯಾಂಕ್‌ಗಳನ್ನು ಪ್ರತಿವಾರ ಸ್ವಚ್ಛಗೊಳಿಸಲು ತಿಳಿಸಿದರು.ಖಾಸಗಿ ಬೋರವೆಲ್‌ನಿಂದ ನೀರು ಪಡೆಯುವುದನ್ನು ಕಡಿಮೆ ಮಾಡಲು, ಸಾರ್ವಜನಿಕ ಬೋರವೆಲ್‌ಗಳನ್ನು ರಿಪೇರಿ ಮಾಡಿಸಿ, ಕೆಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಬೋರವೆಲ್‌ಗೆ ನಿರಂತರ ವಿದ್ಯುತ್ ಜ್ಯೋತಿ ಕಲೆಕ್ಷನ್ ಕೊಡಲು ಸೂಚಿಸಿದ ಅವರು, ಬೋರವೆಲ್ ಪ್ರೆಸ್ಸಿಂಗ್ ಅನ್ನು ಆದ್ಯತೆ ಮೇರೆಗೆ ಮಾಡಿಸಲು ಸೂಚಿಸಿದರು.
15ನೇ ಹಣಕಾಸು ಯೋಜನೆಯ ಅನುದಾನವನ್ನು ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಗೆ ಬಳಸಿ, ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.ಹೊಸ ಬೋರವೆಲ್ ಕೊರೆಸುವಾಗ ಸ್ಥಳ ಪರಿಶೀಲನೆ ಮಾಡಿ, ಸಾರ್ವಜನಿಕರು ಉಪಯೋಗದ ಕುರಿತು ಪರಿಶೀಲಿಸಿ. ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿಗಳಿಗೆ ನಿರಂತರವಾಗಿ ನೀರಿನ ವ್ಯವಸ್ಥೆ ಕಲ್ಪಿಸಲು ಅಗತ್ಯ ಕ್ರಮವಹಿಸಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಯಾದಗಿರಿ ತಾಪಂ ಅಧಿಕಾರಿ ಬಸವರಾಜ ಶರಬೈ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಪಂಚಾಯ್ತಿ ರಾಜ್ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಬಸಲಿಂಗಪ್ಪ ಐರೆಡ್ಡಿ, ಸಹಾಯಕ ನಿರ್ದೇಶಕ ರಾಮಚಂದ್ರ ಬಸೂದೆ, ವಿಜಯಲಕ್ಷ್ಮಿ ಶಾಬಾದಿ, ವ್ಯವಸ್ಥಾಪಕ ಶಿವರಾಯ ಸೇರಿದಂತೆ ಇತರರಿದ್ದರು.