ಕೊಪ್ಪಳ: ಈಗಾಗಲೇ ಬೇಸಿಗೆ ಆರಂಭವಾಗಿರುವುದರಿಂದ ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗಳಾಗದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿದರು.

ಅವರು ಸೋಮವಾರ ಕೊಪ್ಪಳ ಜಿಪಂ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಅಮೃತ 2.0 ಯೋಜನಾ ಕಾಮಗಾರಿಗಳ ಪ್ರಗತಿ ಮತ್ತು ಜಲಜೀವನ ಮಿಷನ್ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

ಜಿಲ್ಲೆಯ 7 ತಾಲೂಕಿನಲ್ಲಿ ನೀರಿನ ಸಮಸ್ಯೆಗಳಾಗದಂತೆ ನೋಡಿಕೊಳ್ಳಲು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಜೆಇಗಳು.ಎ.ಡಬ್ಲೂಗಳು ತಮ್ಮ ವ್ಯಾಪ್ತಿಯ ಪಂಚಾಯತಿ- ಪಂಚಾಯತಿಯ ಎಲ್ಲ ಕಡೆ ಭೇಟಿ ನೀಡಿ ಎಲ್ಲಿ ನೀರಿನ ಸಮಸ್ಯೆಗಳಾಗಬಹುದು ಎನ್ನುವ ಕುರಿತು ಮುಂಚಿತವಾಗಿ ಮಾಹಿತಿ ಪಡೆಯಬೇಕು. ಸಮಸ್ಯೆಗಳಾದರೆ ಜನ ನಮಗೆ ಕರೆ ಮಾಡುತ್ತಾರೆ ಹಾಗಾಗಿ ಜಿಲ್ಲೆಯ ಯಾವ ಒಂದು ಊರಿನಲ್ಲಿ ನೀರಿನ ಸಮಸ್ಯೆಯಾಗಬಾರದು ಎಂದು ಹೇಳಿದರು.

ಯಾವ ತಾಲೂಕಿನಲ್ಲಿ ನೀರಿನ ಸಮಸ್ಯೆಯಾಗಬಹುದೆಂದು ಗುರುತಿಸಿ ಈಗಿನಿಂದಲೇ ಆಯಾ ತಾಲೂಕಿನ ಶಾಸಕರ ಮುಖಾಂತರ ಸಿಇಓಗೆ ಮಾಹಿತಿ ನೀಡಿ ಈ ಕುರಿತು ನಾನು ಬರುವ ಅಧಿವೇಶನದಲ್ಲಿ ಮಾತನಾಡುತ್ತೇನೆ. ಕುಷ್ಟಗಿ ಮತ್ತು ಯಲಬುರ್ಗಾ ತಾಲೂಕುಗಳಿಗೆ ಕೃಷ್ಣಾ ನದಿಯಿಂದ ನೀರು ಬರುತ್ತವೆ ಅಲ್ಲಿ ನೀರಿನ ಕಾಮಗಾರಿ ಸಮರ್ಪಕವಾಗಿ ಆದರೆ ನೀರಿನ ಸಮಸ್ಯೆಗಳೆ ಬರುವದಿಲ್ಲ. ನಮ್ಮ ಜಿಲ್ಲೆಯಲ್ಲಿ ಕುಡಿಯುವ ನೀರಿನ ಎಲ್ಲ ಕಾಮಗಾರಿ ಮುಗಿದರೆ ನೀರಿನ ಸಮಸ್ಯೆ ಇರುವುದಿಲ್ಲ. ಕುಡಿಯುವ ನೀರಿನ ಕೆಲಸ ಮತ್ತು ಕಾಮಗಾರಿ ಅಧಿಕಾರಿಗಳು ಮುತುವರ್ಜಿ ವಹಿಸಿ ಫಾಲೋ ಮಾಡಬೇಕು.

ಕಾಲ ಮಿತಿಯಲ್ಲಿ ಕೆಲಸ ಮಾಡದ ಗುತ್ತಿಗೆದಾರರಿಗೆ ದಂಡ ಹಾಕಬೇಕು. ಇಲ್ಲದಿದ್ದರೆ ಆ ಕೆಲಸ ಸರಿಯಾಗಿ ಮಾಡುವ ಮತ್ತೊಬ್ಬ ಗುತ್ತಿಗೆದಾರರಿಗೆ ಕೊಡಬೇಕೆಂದು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಸಭೆಯಲ್ಲಿ ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ. ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ. ವಿಪ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಜಿಲ್ಲೆಯ ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿ, ಎ.ಡಬ್ಲೂ.ಹಾಗೂ ಜೆಇಗಳು ಮತ್ತು ಗುತ್ತಿಗೆದಾರರು ಸೇರಿದಂತೆ ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.