ಹಾವೇರಿ: ತಾಲೂಕಿನಲ್ಲಿ ಕೃಷಿಯೇ ಪ್ರಧಾನವಾಗಿದ್ದು, ಶೀಘ್ರದಲ್ಲಿ ಮುಂಗಾರು ಹಂಗಾಮು ಆರಂಭವಾಗಲಿದೆ. ರೈತರಿಗೆ ಗುಣಮಟ್ಟದ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ನಿಗದಿತ ದರದಲ್ಲಿ ಪೂರೈಸುವುದು ಪ್ರತಿಯೊಬ್ಬ ಮಾರಾಟಗಾರರ ಮತ್ತು ತಾಲೂಕು ಆಡಳಿತದ ಆದ್ಯ ಕರ್ತವ್ಯವಾಗಿದೆ ಎಂದು ವಿಧಾನಸಭೆಯ ಉಪಸಭಾಧ್ಯಕ್ಷ, ಸ್ಥಳೀಯ ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಲ್ಲಿ ಪ್ರಸ್ತುತ ಸಾಕಷ್ಟು ರಸಗೊಬ್ಬರ ದಾಸ್ತಾನಿದೆ. 1594 ಟನ್ ಯೂರಿಯಾ, 758 ಟನ್ ಡಿಎಪಿ, 167 ಟನ್ ಪೊಟ್ಯಾಶ್, 2394 ಕಾಂಪ್ಲೆಕ್ಸ್ ಸೇರಿ ತಾಲೂಕಿನಲ್ಲಿ ಪ್ರಸ್ತುತ ಒಟ್ಟು 5079 ಟನ್ ರಸಗೊಬ್ಬರ ದಾಸ್ತಾನು ಲಭ್ಯವಿದ್ದು, ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆಯಾಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.ಮಾರಾಟಗಾರರು ರೈತರ ಆಧಾರ್ ಸಂಖ್ಯೆ ಪಡೆದು ಕಡ್ಡಾಯವಾಗಿ ಯಂತ್ರದ ಮೂಲಕವೇ ರಸಗೊಬ್ಬರ ಮಾರಾಟ ಮಾಡಬೇಕು. ರಸಗೊಬ್ಬರಗಳನ್ನು ಕೇವಲ ಅಧಿಕೃತ ಸ್ಥಳಗಳಲ್ಲಿ ಮಾತ್ರ ದಾಸ್ತಾನು ಮಾಡಬೇಕು. ಅನಧಿಕೃತ ಜಾಗದಲ್ಲಿ ದಾಸ್ತಾನು ಪತ್ತೆಯಾದಲ್ಲಿ ತಕ್ಷಣವೇ ಜಪ್ತು ಮಾಡಲಾಗುವುದು. ಕಳಪೆ ಬೀಜ ಅಥವಾ ಗೊಬ್ಬರ ಮಾರಾಟ ಮಾಡುವವರ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಜರುಗಿಸಲಿದ್ದಾರೆ. ಮಳಿಗೆಗಳಲ್ಲಿ ದಾಸ್ತಾನು ವಿವರ ಹಾಗೂ ಎಂಆರ್‌ಪಿ (ಗರಿಷ್ಠ ಮಾರಾಟ ದರ) ಪಟ್ಟಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು. ರೈತರಿಗೆ ರಸಗೊಬ್ಬರ ನೀಡಿದ ಆನಂತರ ಕಡ್ಡಾಯವಾಗಿ ಅಧಿಕೃತ ರಶೀದಿ ನೀಡಬೇಕು ಎಂದು ಸೂಚಿಸಿದರು. ರಸಗೊಬ್ಬರ ಮತ್ತು ಬಿತ್ತನೆ ಬೀಜಗಳು ಅಗತ್ಯ ವಸ್ತುಗಳಾಗಿವೆ. ಇವುಗಳ ವಿತರಣೆಯಲ್ಲಿ ಯಾವುದೇ ಅಕ್ರಮ ಅಥವಾ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಈ ವೇಳೆ ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಗೋವಿಂದ್ ನಾಯಕ್, ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ, ಮುಖಂಡರಾದ ರುದ್ರಪ್ಪ ಹಾದಿಮನಿ ಹಾಜರಿದ್ದರು.