ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಅ.2 ರಂದು ನಡೆಯುವ ಭೂಮಾಪಕರ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ ಹಾಗೂ ಅ.4 ರಂದು ನಡೆಸಲ್ಪಡುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಅ.2 ರಂದು ನಡೆಯುವ ಭೂಮಾಪಕರ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ ಹಾಗೂ ಅ.4 ರಂದು ನಡೆಸಲ್ಪಡುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಭೂಮಾಪಕರ ಹುದ್ದೆಗಳ ಹಾಗೂ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿ ಪರೀಕ್ಷೆ ನಡೆಸುವ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಪರೀಕ್ಷೆಗಳ ಸಂದರ್ಭ ಯಾವುದೇ ಲೋಪಗಳಿಗೆ ಅವಕಾಶ ನೀಡದೆ ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ ಪರೀಕ್ಷೆಗಳ ನಡೆಸಬೇಕು. ಬೆಳಗ್ಗೆ ಹಾಗೂ ಮಧ್ಯಾಹ್ನ ಎರಡು ಅವಧಿಗಳಲ್ಲಿ ಈ ಪರೀಕ್ಷೆ ನಡೆಯುವದರಿಂದ ಸಮಯ ಪರಿಪಾಲನೆಯೊಂದಿಗೆ ಪರೀಕ್ಷೆ ನಡೆಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲೆಯಲ್ಲಿ ಭೂಮಾಪಕರ ಹುದ್ದೆಗಳಿಗೆ 5 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಸಿದ್ದು, 2259 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದರಂತೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ 25 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, 9104 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರಗಳ ಪರೀಕ್ಷಾ ಮೇಲ್ವಿಚಾರಕರು, ಉಪಮುಖ್ಯ ಅಧೀಕ್ಷಕರು ಮತ್ತು ಪ್ರಶ್ನೆಪತ್ರಿಕೆ ನಿರ್ವಹಿಸುವವರು ಯಾವುದೇ ಲೋಪಕ್ಕೆ ಅವಕಾಶ ನೀಡದೇ ವ್ಯವಸ್ಥಿತ ರೀತಿಯಲ್ಲಿ ನಿಭಾಯಿಸಬೇಕು. ಗೌಪ್ಯ ಸಾಮಗ್ರಿಗಳನ್ನು ನೀಡುವಾಗ ಹಾಗೂ ಪಡೆಯುವಾಗ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಆಸನಗಳ ವ್ಯವಸ್ಥೆ ಸರಿಯಾಗಿರಬೇಕು. ಸಿಸಿಟಿವಿ ಕಾರ್ಯನಿರ್ವಹಿಸುತ್ತಿರಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲೂ 200 ಮೀ. ಪ್ರದೇಶ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಕೊಠಡಿ ಮೇಲ್ವಿಚಾರಕರು ಎಲ್ಲ ಮಾರ್ಗಸೂಚಿಗಳನ್ನು ಅರಿತು, ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪರೀಕ್ಷೆ ಗಳಲ್ಲಿ ಕೈಗಡಿಯಾರ, ಕ್ಯಾಲ್ಕುಲೇಟರ್, ಬ್ಲುಟೂಥ್ ಡಿವೈಸ್, ಮೊಬೈಲ್, ಪೆನ್ ಡ್ರೈವ್ಗಳು, ಇಯರ್ ಫೋನ್, ಮೈಕ್ರೋಫೋನ್ ಸಾಧನಗಳನ್ನು ಬಳಸುವುದಕ್ಕೆ ನಿಷೇಧವಿದ್ದು, ಈ ಕುರಿತು ತೀವ್ರ ನಿಗಾ ಇಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಇತ್ತೀಚೆಗೆ ಪೋಲಿಸ್ ಇಲಾಖೆಯ ಕಾನ್‌ಸ್ಟೇಬಲ್‌ಗಳ ನೇಮಕಾತಿ ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಸಿದಂತೆ ಈ ಬಾರಿಯೂ ನಡೆಸಬೇಕು ಎಂದು ಶ್ಲಾಘಿಸಿದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಪೃಥ್ವಿಕ್ ಶಂಕರ್ ಮಾತನಾಡಿ, ಪರೀಕ್ಷೆ ಸುಸೂತ್ರವಾಗಿ ನಡೆಯಲು ಎಲ್ಲ ಪರೀಕ್ಷಾ ಕೇಂದ್ರಗಳ ಸುತ್ತಲೂ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಲಾಗುವುದು. ಪರೀಕ್ಷಾ ಕೇಂದ್ರಗಳ ಸಿಸಿಟಿವಿ ಸುಸ್ಥಿತಿಯಲ್ಲಿರುವ ಬಗ್ಗೆ ಮುಂಚಿತವಾಗಿ ಖಾತ್ರಿಪಡಿಸಿಕೊಳ್ಳಬೇಕು. ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀ ಸುದೀಪ್ ಮಾತನಾಡಿ, ಓಎಂಆರ್ ಉತ್ತರ ಪತ್ರಿಕೆ ಹಾಗೂ ಪ್ರಶ್ನೆ ಪತ್ರಿಕೆ ನಿರ್ವಹಣೆ, ಅಭ್ಯರ್ಥಿಗಳ ಪ್ರವೇಶ ಪತ್ರ ಪರಿಶೀಲಿಸಲು ಮೇಲ್ವಿಚಾರಕರಿಗೆ ತಿಳಿಸಲಾಗಿದೆ. ಪರೀಕ್ಷೆಯಲ್ಲಿ ಆಹಾರ ಪದಾರ್ಥ, ವಾಟರ್ ಬಾಟಲ್, ಶೂಗಳ ನಿಷೇಧವಿದೆ. ಅಭ್ಯರ್ಥಿಗಳ ವಿವರಗಳನ್ನು QR Code Scan ಮೂಲಕ ಪಡೆಯುವ ವ್ಯವಸ್ಥೆ ರೂಪಿಸಿದೆ. ವಸ್ತ್ರ ಸಂಹಿತೆ ಪಾಲಿಸಲು ತಿಳಿಸಿದೆ. ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪರೀಕ್ಷೆಯ ರಹಸ್ಯ ಬಂಡಲ್ ಸಾಗಿಸಲು ತ್ರಿ ಸದಸ್ಯ ಸಮಿತಿ ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ಜಾಮರ್ಸ್ ಅಳವಡಿಕೆ ಸಹಿತ ಇನ್ನಿತರ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ಉಪಸ್ಥಿತರಿದ್ದರು.