ಪೈಪ್‌ಲೈನ್‌ ಮಾರ್ಗ ಬಗ್ಗೆ ಖಾತರಿಪಡಿಸಿಕೊಳ್ಳಿ

| Published : Jul 09 2024, 12:59 AM IST / Updated: Jul 09 2024, 11:29 AM IST

ಸಾರಾಂಶ

ಕುಡಿಯುವ ನೀರನ್ನು ವ್ಯರ್ಥ ಮಾಡಬಾರದು. ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ನೀರು ಪೂರೈಕೆ ಪೈಪ್‌ಲೈನ್‌ ಮಾರ್ಗ ಸರಿಯಾಗಿರುವ ಬಗ್ಗೆ ನಿರಂತರ ಖಾತರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ವಿಜಯ ಅಜೂರ ಸೂಚಿಸಿದರು.

 ವಿಜಯಪುರ :  ಕುಡಿಯುವ ನೀರನ್ನು ವ್ಯರ್ಥ ಮಾಡಬಾರದು. ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದ ನೀರು ಪೂರೈಕೆ ಪೈಪ್‌ಲೈನ್‌ ಮಾರ್ಗ ಸರಿಯಾಗಿರುವ ಬಗ್ಗೆ ನಿರಂತರ ಖಾತರಿಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ವಿಜಯ ಅಜೂರ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಯೋಗದಲ್ಲಿ 9 ನಿಯತಾಂಕಗಳ ಮೂಲಕ ನೀರಿನ ಮಾದರಿ ಎಫ್‌ಟಿಕೆ ಕಿಟ್ ಮೂಲಕ ಪರೀಕ್ಷಿಸುವ ವಿಧಾನದ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರಿನ ಮಾದರಿಯನ್ನು ಪ್ರಾಥಮಿಕ ಹಂತದಲ್ಲಿ ಗ್ರಾಮ ಪಂಚಾಯತಿಗಳಿಗೆ ಈಗಾಗಲೇ ನೀಡಲಾದ ಎಫ್‌ಟಿಕೆ ಕಿಟ್ ಮೂಲಕ ಪರೀಕ್ಷೆ ಮಾಡುವ ವಿಧಾನದ ಕುರಿತು ಜಿಲ್ಲೆಯ ಎಲ್ಲ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು 2 ಹಂತದಲ್ಲಿ ಆಯೋಜಿಸಲಾಗಿತ್ತು. 

ದುರಸ್ತಿ ಕಾರ್ಯಗಳಿದ್ದರೇ ಆದ್ಯತೆಯ ಮೇರೆಗೆ ತೆಗೆದುಕೊಳ್ಳಬೇಕು. ವಿಳಂಬ ಮಾಡಕೂಡದು. ಜಲ ಮೂಲಗಳ ಹತ್ತಿರ ನೀರು ಒಂದೆಡೆ ಸಂಗ್ರಹ ಆಗದಂತೆ ಸ್ವಚ್ಛತೆ ಕಾಪಾಡಿಕೊಳ್ಳವುದು ಗ್ರಾಮ ಪಂಚಾಯತಿಯ ಜವಾಬ್ದಾರಿಯಾಗಿದೆ ಎಂದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಕುಂಬಾರ ಮಾತನಾಡಿ, ಕುಡಿಯುವ ನೀರು ಪರೀಕ್ಷೆ ಬಹು ಮುಖ್ಯವಾಗಿದ್ದು, ಕಲುಷಿತ ನೀರು ಪೂರೈಕೆಯಾಗದಂತೆ ಮುನ್ನೆಚ್ಚರಿಕಾ ಕ್ರಮ ವಹಿಸುವುದು ಅತೀ ಅವಶ್ಯವಾಗಿದೆ. ಗ್ರಾಮ ಪಂಚಾಯತಿಯಡಿ ಬರುವ ಜಲ ಮೂಲಗಳನ್ನು ನಿಯಮಿತವಾಗಿ ಹಾಗೂ ಕಡ್ಡಾಯವಾಗಿ ಪರೀಕ್ಷಿಸಬೇಕು ಎಂದು ತಿಳಿಸಿದರು.

ಜಿ.ಪಂ.ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.