ಅನ್ನಭಾಗ್ಯ ಯೋಜನೆಯಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ

ಹೊಸಪೇಟೆ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುವಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಸರ್ಕಾರದ ಗ್ಯಾರಂಟಿ ಭರವಸೆ ಸಾಕಾರಗೊಳಿಸಲು ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಮತ್ತು ವಿಶೇಷವಾಗಿ ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗುವ ಪಡಿತರ ಅಕ್ಕಿ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಬೇಕೆಂದು ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಪಿ.ಟಿ. ಪರಮೇಶ್ವರ ನಾಯ್ಕ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆಹಾರ ಇಲಾಖೆಯ ಉಪ ನಿರ್ದೇಶಕ ರಿಯಾಜ್ ಮಾತನಾಡಿ, ಅನ್ನಭಾಗ್ಯ ಯೋಜನೆಯಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅನ್ನಭಾಗ್ಯ ಯೋಜನೆಯ ದುರುಪಯೋಗ ತಡೆಯಲು ಸಾರ್ವಜನಿಕರ ಮಾಹಿತಿ ಆಧರಿಸಿ ನಿರಂತರವಾಗಿ ರೆಡ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಅಕ್ರಮವಾಗಿ ಪಡಿತರ ಸಾಗಾಟ ಮಾಡುತ್ತಿದ್ದ ವಾಹನ ಗುರುತಿಸಿ 35 ಪ್ರಕರಣ ದಾಖಲಿಸಲಾಗಿದೆ. 19 ಜನರನ್ನು ಬಂಧಿಸಲಾಗಿದ್ದು, 25 ವಾಹನಗಳು ಹಾಗೂ 13,078 ಕೆ.ಜಿ. ಪಡಿತರ ಜಪ್ತಿ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಗೃಹಲಕ್ಷ್ಮಿ ಯೋಜನೆಯ 14ನೇ ಕಂತು ವಿವಿಧ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು. ಆದರೆ ದಸರಾ ಹಬ್ಬದ ಹಿನ್ನೆಲೆ ಮುಂಗಡವಾಗಿ ಒಂದು ಕಂತಿನ ಹಣ ಪಾವತಿಸಲಾಗಿದೆ. ದೀಪಾವಳಿ ಹಿನ್ನೆಲೆಯಲ್ಲಿ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಮೂರು ಕಂತುಗಳ ಬಾಕಿ ಅನುದಾನ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಡಿಬಿಟಿ ಮೂಲಕ ಹಣ ಜಮೆಯಾಗಲಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾರಿಗೆ ಸಂಪರ್ಕ ವ್ಯವಸ್ಥೆ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 500 ಹೊಸ ಬಸ್‌ ಒದಗಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ನೂತನ ಬಸ್‌ಗಳ ಪೂರೈಕೆ ಆಗಲಿದೆ ಎಂದು ತಿಳಿಸಿದರು.

ಜಿಲ್ಲೆಯ 2,99,999 ಅರ್ಹ ಕುಟುಂಬಗಳ 11,59,797 ಫಲಾನುಭವಿಗಳಿಗೆ ಪಡಿತರ ವಿತರಿಸಲಾಗುತ್ತಿದೆ. 2023ರ ಜುಲೈನಿಂದ 2024ರ ಡಿಸೆಂಬರ್‌ವರೆಗೆ ಒಟ್ಟು ₹285.92 ಕೋಟಿ ಮೊತ್ತ ಡಿಬಿಟಿ ಮೂಲಕ ಅರ್ಹ ಫಲಾನುಭವಿಗಳಿಗೆ ಪಾವತಿಸಲಾಗಿದೆ.ತದ ನಂತರ ಹಣದ ಬದಲಾಗಿ ಪ್ರತಿ ಫಲಾನುಭವಿಗೆ ಐದು ಕೆಜಿ ಅಕ್ಕಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಒಟ್ಟು 3,22,204 ಸ್ಥಾವರಗಳ ಪೈಕಿ 3,01,244 ಸ್ಥಾವರಗಳು ಯೋಜನೆಯಡಿ ನೋಂದಣಿಯಾಗಿವೆ. ನೋಂದಾಯಿತ ಸ್ಥಾವರಗಳಿಗೆ ಸಂಬಂಧಿಸಿದಂತೆ ₹531.32 ಕೋಟಿ ಮೊತ್ತ ಇಲಾಖೆಯಿಂದ ಭರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 3,02,616 ಕುಟುಂಬ ಯಜಮಾನಿಯರಿದ್ದು, ಈ ಪೈಕಿ 3,02,490 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ನೋಂದಾಯಿತ ಅರ್ಹ ಫಲಾನುಭವಿಗಳಿಗೆ ಜುಲೈ ಅಂತ್ಯದವರೆಗೆ ₹1,893.82 ಕೋಟಿ ಅನುದಾನ ಭರಿಸಲಾಗಿದೆ. ಪ್ರಸ್ತುತ ಆಗಸ್ಟ್‌ನಿಂದ ಅಕ್ಟೋಬರ್‌ವರೆಗಿನ ಮೂರು ತಿಂಗಳ ಕಂತುಗಳಿಗೆ ₹170 ಕೋಟಿ ಅನುದಾನ ಲಭ್ಯವಿದ್ದು, ಶೀಘ್ರದಲ್ಲೇ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದರು.

ಶಕ್ತಿ ಯೋಜನೆಯಡಿ 2026ರ ಅಕ್ಟೋಬರ್‌ವರೆಗೆ ಜಿಲ್ಲೆಯಲ್ಲಿ ₹11.83 ಕೋಟಿ ವಯಸ್ಕ ಪ್ರಯಾಣಿಕರು ಹಾಗೂ 53.98 ಲಕ್ಷ ಮಕ್ಕಳು ಸೇರಿದಂತೆ ಒಟ್ಟು ₹12.36 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಇವರ ಪ್ರಯಾಣಕ್ಕೆ ಸರ್ಕಾರದಿಂದ ₹497.68 ಕೋಟಿ ಮೊತ್ತ ಭರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಯುವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ 13,754 ಪದವೀಧರರು ಹಾಗೂ 342 ಡಿಪ್ಲೊಮಾ ಪದವೀಧರರು ಸೇರಿದಂತೆ ಒಟ್ಟು 14,096 ಯುವಕರು ನೋಂದಣಿಯಾಗಿದ್ದಾರೆ. 2024ರ ಜನವರಿಯಿಂದ 2026ರ ಆಗಸ್ಟ್ವರೆಗೆ ಫಲಾನುಭವಿಗಳಿಗೆ ₹32.93 ಕೋಟಿ ಅನುದಾನ ಪಾವತಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗರಿಮಾ ಪನ್ವಾರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಶಿವಮೂರ್ತಿ, ಮುಖ್ಯ ಯೋಜನಾಧಿಕಾರಿ ಜೆ.ಎಂ. ಅನ್ನದಾನಸ್ವಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.