ಬೋರ್‌ವೆಲ್‌ ಕೊರೆಸಿ-ತಕ್ಷಣವೇ ವಿದ್ಯುತ್‌ ಸಂಪರ್ಕ ಕಲ್ಪಿಸಿ । ಜನರಿಗೆ ಸಮಸ್ಯೆಯಾದರೆ ಸಹಿಸಲ್ಲ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಪ್ರತಿ ತಾಲೂಕಿಗೆ 1 ಕೋಟಿ ರು. ನೀಡಲಾಗುತ್ತಿದೆ. ಜನರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಆದ್ಯತೆಯ ಮೇರೆಗೆ ಬರ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಕೆಲಸ‌ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ.ಪರಮೇಶ್ವರ ಹೇಳಿದರು.ಬುಧವಾರ ಜಿಲ್ಲಾ ಪಂಚಾಯಿತಿಯ ಸರ್ ಎಂವಿ ಸಭಾಂಗಣದಲ್ಲಿ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರನ್ನುದ್ದೇಶಿಸಿಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳ ಪಿಡಿ ಅಕೌಂಟ್‌ನಲ್ಲಿ 11 ಕೋಟಿ ರು. ಇದೆ. ಸಂದರ್ಭಕ್ಕೆ ಅನುಸಾರವಾಗಿ ಜನ ಮತ್ತು ಜಾನುವಾರುಗಳ ಕುಡಿಯುವ ನೀರಿಗಾಗಿ ಹಣ ಖರ್ಚು ಮಾಡುವಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ರೈತರಿಗೆ ಸಮರ್ಪಕವಾಗಿ ಮೇವಿನ ಕಿಟ್ ವಿತರಿಸುವ ಕೆಲಸ ಮಾಡಿದ್ದಾರೆ. ರೈತರು ಹೆಚ್ಚು ಮೇವು ಬೆಳೆದರೆ, ಅವರಿಗೆ ಹಣ ಕೊಟ್ಟು ಖರೀದಿಸಲಾಗುವುದು ಎಂದು ತಿಳಿಸಿದರು.

ವಿಬಿ ಜಿ ರಾಮ್ ಜಿ ಯೋಜನೆಗೆ ಹಣ ಕೊಡುತ್ತೇವೆ. ಇದಕ್ಕೆ ಯಾವುದೇ ರೀತಿಯ ಹಣದ ಕೊರತೆ ಇಲ್ಲ. ಜಿಲ್ಲೆಯಲ್ಲಿ ಹೆಚ್ಚಿನ ರೀತಿಯಲ್ಲಿ ರೇಷ್ಮೆ, ಹೂ ತೋಟ ಸೇರಿದಂತೆ ತೋಟಗಾರಿಕೆ ಬೆಳೆ ಇದೆ. ಇದಕ್ಕೆ ಪ್ರೋತ್ಸಾಹಿಸಲು ಸಭೆಯಲ್ಲಿ ತಿಳಿಸಲಾಗಿದೆ ಎಂದು‌ ಮಾಹಿತಿ ನೀಡಿದರು.

ವಿವಿಧ ನೀರಾವರಿ ವ್ಯಾಲಿ ಯೋಜನೆಗಳಿಂದ ಜಿಲ್ಲೆಯ 80 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಟರ್ಷಿಯರಿ ಟ್ರೀಟ್ಮೆಂಟ್ ಮಾಡಿ ನೀರು ಪೂರೈಸುವಂತೆ ಶಾಸಕರು ಸಲಹೆ ನೀಡಿದ್ದಾರೆ. ಈ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆಯಾಗುತ್ತಿದ್ದು, ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.


ಬರ ಪರಿಸ್ಥಿತಿಯನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಿ, ಕೆಲಸ ಮಾಡಬೇಕು. ಬೆಳೆ ವಿಮೆ ನೋಂದಣಿ‌ ಮಾಡಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ರಾಜ್ಯದ ಪರಿಸ್ಥಿತಿಯ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಕೇಂದ್ರದ ಗೃಹ ಸಚಿವರು ಹಾಗೂ ಕೃಷಿ ಸಚಿವರಿಗೆ ಪತ್ರ ಬರೆದು, ಒತ್ತಾಯಿಸಿದ್ದೇನೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಬರ ಘೋಷಣೆ ಮಾಡಲು ಕೆಲವು ನಿಯಮಗಳನ್ನು ಮಾಡಿದ್ದಾರೆ. ಅದನ್ನು ಸಡಿಲಿಕೆ ಮಾಡಬೇಕು. ದೇಶದ ಎಲ್ಲ ರಾಜ್ಯಗಳಲ್ಲಿ ಬರಗಾಲವಿದೆ. ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ಹಾಗೂ ಎನ್‌ಡಿಆರ್‌ಎಫ್ ಹಣವನ್ನು ಶೀಘ್ರ ಬಿಡುಗಡೆ ಮಾಡಲು ಪತ್ರದ ಮೂಲಕ ಒತ್ತಾಯಿಸಿದ್ದೇನೆ. ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಎಷ್ಟು ಪ್ರಮಾಣದಲ್ಲಿ ನಷ್ಟವಾಗಿದೆ. ಎಷ್ಟು ಬರ ಪರಿಹಾರ ನೀಡಬೇಕು ಎಂಬುದರ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು‌ ವಿವರಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 35 ಸಾವಿರ ಇ-ಪೌತಿ ಪ್ರಕರಣಗಳು ಬಾಕಿ ಇವೆ. ಎರಡು ತಿಂಗಳೊಳಗಾಗಿ ಪೂರ್ಣಗೊಳಿಸಬೇಕು. 1.9 ಲಕ್ಷ ಕಂದಾಯ ಗ್ರಾಮದ ಹಕ್ಕು ಪತ್ರಗಳನ್ನು ವಿತರಿಸಬೇಕು. ಹಕ್ಕು ಪತ್ರ ವಿತರಣೆಗೆ ಮುಖ್ಯಮಂತ್ರಿಗಳು ಆಗಮಿಸಲಿದ್ದು, ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.‌

ಸಭೆಯಲ್ಲಿ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಡಾ. ಬಿ.ಸಿ. ಮುದ್ದು ಗಂಗಾಧರ್, ಕರ್ನಾಟಕ ರಾಜ್ಯ ಬೀಜ ನಿಗಮ ಅಧ್ಯಕ್ಷ ಆಂಜಿನಪ್ಪ, ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾ ಮಂಡಳಿಯ ಅಧ್ಯಕ್ಷ ಬಿ.ಜೆ. ಗಣೇಶ್, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಶಾಸಕರಾದ ಪ್ರದೀಪ್‌ ಈಶ್ವರ್, ಕೆ.ಎಚ್.ಪುಟ್ಟಸ್ವಾಮಿಗೌಡ, ಬಿ.ಎನ್. ರವಿಕುಮಾರ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಎನ್.ಮಂಜುಳಾ, ರಾಜ್ಯ ವಿಪತ್ತು ನಿರ್ವಹಣೆ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ. ನವೀನ್ ಭಟ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ಜಿಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಯಲುವಹಳ್ಳಿ ರಮೇಶ್, ಮತ್ತಿತರರು ಇದ್ದರು.

ಸಿಕೆಬಿ-4 ಜಿಲ್ಲಾ ಪಂಚಾಯತ್ ನ ಸರ್ ಎಂ ವಿ ಸಭಾಂಗಣದಲ್ಲಿ ಜಿಲ್ಲೆಯ ಬರ ಪರಿಸ್ಥಿತಿ ಹಾಗೂ ಕಂದಾಯ ವಿಷಯಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಡಿಸಿಎಂ ಡಾ.ಜಿ.ಪರಮೇಶ್ವರ ಮಾತನಾಡಿದರು