ಜಾತಿ ವೀರಶೈವ ಲಿಂಗಾಯತ ಎಂದೇ ನಮೂದಿಸಿ

| Published : Sep 29 2025, 03:02 AM IST

ಸಾರಾಂಶ

ಲಿಂಗಾಯತ ಸಮಾಜ ಬಾಂಧವರೆಲ್ಲರೂ ಗೊಂದಲ ಮಾಡಿಕೊಳ್ಳದೆ ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿ, ಜಾತಿಯ ಕಾಲಂನಲ್ಲಿ ವೀರಶೈವ ಲಿಂಗಾಯತ ನಮೂದಿಸಿ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯು ಸೆ.22ರಿಂದ ಪ್ರಾರಂಭವಾಗಿದ್ದು, ಅ.7ರವರೆಗೆ ನಡೆಯಲಿದೆ. ಲಿಂಗಾಯತ ಸಮಾಜ ಬಾಂಧವರೆಲ್ಲರೂ ಗೊಂದಲ ಮಾಡಿಕೊಳ್ಳದೆ ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಿ, ಜಾತಿಯ ಕಾಲಂನಲ್ಲಿ ವೀರಶೈವ ಲಿಂಗಾಯತ ನಮೂದಿಸಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ತಿಳಿಸಿದ್ದಾರೆ.

ಪಟ್ಟಣದ ದಿ.ಎಂ.ಕೆ.ಕವಟಗಿಮಠ ಸಭಾಗೃಹದಲ್ಲಿ ಆಯೋಜಿಸಿದ ಸಭೆಯಲ್ಲಿ ಮಾತನಾಡಿದ ಅವರು, ಈ ಸಮೀಕ್ಷೆ ಸಾಮಾಜಿಕ ಶೈಕ್ಷಣಿಕ ಉದ್ದೇಶಕ್ಕಾಗಿ ಸಮಾಜದ ನೈಜ ಸಂಖ್ಯೆ ತಿಳಿಯಲು ಇದೊಂದು ಸುವರ್ಣಾವಕಾಶವಾಗಿದೆ. ನಮ್ಮ ಸಮಾಜಕ್ಕೆ ಅನ್ಯಾಯವಾಗದಂತೆ ಸಮಾಜದ ಸ್ಥಿತಿ-ಗತಿ ಮತ್ತು ನಿಖರ ಸಂಖ್ಯೆ ತಿಳಿಯಬಹುದು ಎಂದರು.

ವೀರಶೈವ ಮತ್ತು ಲಿಂಗಾಯತ ಇವು ಸಮನಾರ್ಥಕ ಪದಗಳಾಗಿದ್ದು, ವೀರಶೈವ ಲಿಂಗಾಯತ ಜನಾಂಗವು ಈ ರಾಜ್ಯದ ಒಂದು ಪ್ರಮುಖ ಜನಾಂಗವಾಗಿದೆ. ಕಾನೂನು ಪ್ರಕಾರ ಇಂದಿಗೂ ವೀರಶೈವ ಲಿಂಗಾಯತ ಜನಾಂಗ ಹಿಂದು ಧರ್ಮದ ಭಾಗವಾಗಿದೆ. ಸನಾತನ ಹಿಂದೂ ಧರ್ಮದಲ್ಲಿರುವ ಪ್ರತಿಯೊಂದು ವೃತ್ತಿ ಮಾಡುವ ಎಲ್ಲ ಜಾತಿಯವರು ವೀರಶೈವ ಲಿಂಗಾಯತ ಜನಾಂಗದಲ್ಲಿದ್ದಾರೆ. ಮಹಾತ್ಮಾ ಬಸವೇಶ್ವರರು ಮತ್ತು ಅವರ ಸಮಕಾಲಿನ ಶರಣರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಒಪ್ಪಿ ಹಿಂದೂ ಧರ್ಮದ ಎಲ್ಲಾ ಜಾತಿಗಳ ಜನರು ವೀರಶೈವ ಲಿಂಗಾಯತರಾಗಿದ್ದಾರೆ. ವೀರಶೈವ ಲಿಂಗಾಯತಕ್ಕೆ ಸರ್ಕಾರ ಪ್ರತ್ಯೇಕ ಧರ್ಮ ಎಂಬ ಮಾನ್ಯತೆ ನೀಡಿಲ್ಲ. ಆದರೆ ವೀರಶೈವ ಲಿಂಗಾಯತ ನಿಶ್ಚಿತವಾಗಿಯೂ ಒಂದು ಜಾತಿಯಲ್ಲ. ಅದನ್ನು ಹಿಂದೂ ಧರ್ಮದ ಒಂದು ಪರಂಪರೆ, ಸಂಪ್ರದಾಯ, ಪಂಥ ಎಂದು ಪರಿಗಣಿನಿಸುವುದು ಸರಿಯಾದ ಕ್ರಮವಾಗಿದೆ. ವೀರಶೈವ ಲಿಂಗಾಯತ ಪರಂಪರೆ, ಸಂಪ್ರದಾಯ, ಪಂಥದಲ್ಲಿ ಹಿಂದೂ ಧರ್ಮದ ನೂರಕ್ಕೂ ಹೆಚ್ಚು ಜಾತಿಗಳು ಸೇರಿರುತ್ತವೆ. ಇವುಗಳಲ್ಲಿ ಹೆಚ್ಚಿನ ಜಾತಿಗಳು ಸಮಾಜದ ತಳ ಸಮುದಾಯಗಳಿಗೆ ಸೇರಿದ ಜಾತಿಗಳಾಗಿವೆ ಎಂದರು.

ದಾವಣಗೆರೆಯಲ್ಲಿ ಇತ್ತೀಚಿಗೆ ನಡೆದ ಐತಿಹಾಸಿಕ ಸಭೆಯಲ್ಲಿ ವೀರಶೈವ ಲಿಂಗಾಯತ ಹಿಂದೆ ಇಂದು ಮತ್ತು ಮುಂದೆ ಎಂದೆಂದೂ ಒಂದೇ ಎಂಬ ಘೋಷಣೆಯನ್ನು ಅಖಿಲ ಭಾರತ ವೀರಶೈವ ಮಹಾಸಭೆ ಮುಕ್ತ ಕಂಠದಿಂದ ಎಲ್ಲರೂ ಅಪ್ಪಿಕೊಂಡಿದ್ದಾರೆ. ಎಲ್ಲರೂ ಧರ್ಮದ ಕಾಲಂ 8ರಲ್ಲಿ ಹಿಂದೂ ಎಂತಲೂ ಜಾತಿಯ ಕಾಲಂ 9ರಲ್ಲಿ ವೀರಶೈವ ಲಿಂಗಾಯತ (ಎ-1524) ಮತ್ತು ಉಪಜಾತಿ ಕಾಲಂ 10ರಲ್ಲಿ ಅವರವರ ಉಪಜಾತಿಗಳ ವಿವರ ನಮೂದಿಸಬೇಕೆಂದು ಕರ್ನಾಟಕ ರಾಜ್ಯದ ಅಖಂಡ ವೀರಶೈವ ಲಿಂಗಾಯತ ಸಮಾಜ ಕೈಗೊಂಡ ನಿರ್ಣಯದಂತೆ ಎಲ್ಲರೂ ನಡೆಯೋಣ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಶ್ರೀ ಸಂಪಾದನಾ ಸ್ವಾಮೀಜಿ, ಪುರಸಭೆ ಮಾಜಿ ಅಧ್ಯಕ್ಷರಾದ ಜಗದೀಶ ಕವಟಗಿಮಠ, ಮಹೇಶ ಭಾತೆ, ಮಂಜು ರೊಟ್ಟಿ ಮಾತನಾಡಿದರು. ಸುಭಾಷ ಕವಲಾಪುರೆ, ಶ್ರೀಕಾಂತ ಚೆನ್ನವರ, ವೀಣಾ ಕವಟಗಿಮಠ ಉಪಸ್ಥಿತರಿದ್ದರು. ಮಿಥುನ ಅಂಕಲಿ ಪ್ರಾಸ್ಥಾವಿಕವಾಗಿ ಮತನಾಡಿದರು. ಸಾಗರ ಬಿಸ್ಕೋಪ್ ನಿರೂಪಿಸಿದರು.