ಸಾರಾಂಶ
ಆಟಗಾರರನ್ನು ಹುರಿದುಂಬಿಸಿದ ಕ್ರೀಡಾಭಿಮಾನಿಗಳು
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ ಉದ್ಯಮಿ ವಿಶ್ವನಾಥ್ ಗದ್ದೆಮನೆ ಸಹಯೋಗದಲ್ಲಿ ಕೊಪ್ಪ ರಸ್ತೆಯ ಎಂ.ಎಸ್.ಅರುಣೇಶ್ ಅವರ ಕೃಷಿ ಕ್ಷೇತ್ರದಲ್ಲಿ ಆಯೋಜಿಸಿದ್ದ ದರ್ಪಣ ಕೆಸರುಗದ್ದೆ ಆಟೋಟ ಸ್ಪರ್ಧೆಗಳು ಕ್ರೀಡಾಭಿಮಾನಿಗಳ ಮನರಂಜಿಸಿದವು.ಕ್ರೀಡಾಕೂಟ ಆರಂಭಗೊಳ್ಳುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಸಾವಿರಾರು ಕ್ರೀಡಾಭಿಮಾನಿಗಳು ಸ್ಪರ್ಧೆಗಳು ಮುಕ್ತಾಯ ಗೊಳ್ಳುವವರೆಗೂ ವೀಕ್ಷಿಸಿ ಆಟಗಾರರನ್ನು ಹುರಿದುಂಬಿಸಿದರು. ಕಿಕ್ಕಿರಿದು ತುಂಬಿದ್ದ ಕ್ರೀಡಾಸಕ್ತರ ಹರ್ಷೋದ್ಘಾರ, ಕೇಕೆ, ಸಿಳ್ಳೆ ಗಳು ಆಟಗಾರರನ್ನು ಮತ್ತಷ್ಟು ಪ್ರೇರೆಪಿಸಿತು. ಸ್ಪರ್ಧೆಯ ಹಗ್ಗಜಗ್ಗಾಟ ಹಾಗೂ ವಾಲಿಬಾಲ್, ಮಹಿಳೆಯರ ಥ್ರೋಬಾಲ್, ಟಿ2 ಕ್ರಿಕೆಟ್ ಪಂದ್ಯಾವಳಿ ಪ್ರೇಕ್ಷಕರನ್ನು ರೋಮಾಂಚನಗೊಳಿಸಿದವು. ಸ್ಪರ್ಧಾಳುಗಳು ಎದುರಾಳಿ ತಂಡಕ್ಕೆ ತೀವ್ರ ಸ್ಪರ್ಧೆ ನೀಡಿದರು. ಸ್ಪರ್ಧೆಯಲ್ಲಿ ಯಾವ ತಂಡಗಳು ಜಯಗಳಿಸುವುವು ಎಂಬ ಕುತೂಹಲ ನೋಡುಗರ ಸೆಳೆಯಿತು. ಸ್ಪರ್ಧಿಗಳು ಕೆಸರಿನಲ್ಲಿ ಮಿಂದೆದ್ದು, ಗೆಲುವಿಗಾಗಿ ತಮ್ಮ ಎದುರಾಳಿಗಳೊಂದಿಗೆ ಸೆಣಸಿದರು. ಯುವಕರು, ಮಕ್ಕಳೂ ಸಹ ಕೆಸರಿನ ಸ್ನಾನ ಮಾಡಿ ಸಂಭ್ರಮದಿಂದ ಆನಂದಿಸಿದರು.
ಸಮಾರಂಭದಲ್ಲಿ ಜೇಸಿ ವಲಯಾಧ್ಯಕ್ಷ ವಿಜಯಕುಮಾರ್ ಮಾತನಾಡಿ, ಸ್ವಾತಂತ್ರ್ಯೋತ್ಸವದ ಅಂಗವಾಗಿ ಜೇಸಿ ಸಂಸ್ಥೆ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಿ ದೇಶಾಭಿಮಾನ ಮೆರೆಯುತ್ತಿರುವುದು ಸಂತಸ ತಂದಿದೆ. ಆಧುನಿಕತೆ ಭರಾಟೆಯಲ್ಲಿ ಗ್ರಾಮೀಣ ಸೊಗಡಿನ ಕ್ರೀಡಾಕೂಟಗಳು ಮರೆಯಾಗುತ್ತಿವೆ. ಜೇಸಿ ಸಂಸ್ಥೆ ಕಾರ್ಯ ಶ್ಲಾಘನೀಯ. ನಗರ ಪ್ರದೇಶದ ಜನ ಮುಂದುವರಿದ ಕ್ರೀಡೆಗಳಿಗೆ ಗಮನ ನೀಡುವ ಸಮಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಮೀಣ ಕ್ರೀಡೆ ಆಯೋಜಿಸಿರುವುದು ಉತ್ತಮ ಎಂದರು.ಗ್ರಾಪಂ ಸದಸ್ಯ ಎಂ.ಎಸ್.ಅರುಣೇಶ್ ಮಾತನಾಡಿ, ಕ್ರೀಡೆಗಳು ಮಾನಸಿಕ, ದೈಹಿಕ ಸ್ಥಿರತೆಗೆ ಪೂರಕವಾಗಿದ್ದು, ಕೃಷಿಯೆಡೆಗೆ ಆಸಕ್ತಿ ಕಡಿಮೆಯಾಗುತ್ತಿರುವ ದಿನಗಳಲ್ಲಿ ಕೆಸರುಗದ್ದೆ ಆಟಗಳು ಯುವಕರಿಗೆ ಹೊಸ ಅನುಭವ ನೀಡಲಿದೆ. ಆರೋಗ್ಯದ ದೃಷ್ಟಿ ಯಿಂದಲೂ ಕೆಸರಿನಲ್ಲಿ ಮಿಂದೇಳುವುದು ಉತ್ತಮ ಎಂದರು.ಜೇಸಿ ಅಧ್ಯಕ್ಷ ಇಬ್ರಾಹಿಂ ಶಾಫಿ ಅಧ್ಯಕ್ಷತೆ ವಹಿಸಿದ್ದರು. ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ, ಪ್ರಮುಖರಾದ ಡಾ.ನವೀನ್ ಮಿಸ್ಕಿತ್, ಎನ್.ಶಶಿಧರ್, ಎ.ಆರ್.ಸುರೇಂದ್ರ, ಮಹಮ್ಮದ್ ಹನೀಫ್, ಓ.ಟಿ.ಅಶೋಕ್, ಪ್ರಕಾಶ್ ಮುದುಗುಣಿ, ಸಿ.ವಿ. ಸುನೀಲ್, ಬಿ.ಸಿ.ಅವಿನಾಶ್, ಯು.ಸಿ.ಪ್ರದೀಪ್, ಎಂ.ಸಿ.ಅಭಿಷೇಕ್, ಚೈತನ್ಯ ವೆಂಕಿ, ಸುಧಾಕರ್ ಉಪಸ್ಥಿತರಿದ್ದರು.೧೭ಬಿಹೆಚ್‌ಆರ್ ೧:ಬಾಳೆಹೊನ್ನೂರಿನ ಜೇಸಿಐ ಸಂಸ್ಥೆಯಿಂದ ಕೊಪ್ಪ ರಸ್ತೆ ಎಂ.ಎಸ್.ಅರುಣೇಶ್ ಅವರ ಗದ್ದೆಯಲ್ಲಿ ಕೆಸರುಗದ್ದೆ ಆಟೋಟ ಸ್ಪರ್ಧೆಗಳು ನಡೆಯಿತು. ೧೭ಬಿಹೆಚ್‌ಆರ್ ೨:
ಬಾಳೆಹೊನ್ನೂರಿನ ಜೇಸಿಐ ಸಂಸ್ಥೆ ಆಯೋಜಿಸಿದ್ದ ಕೆಸರುಗದ್ದೆ ಆಟೋಟ ಸ್ಪರ್ಧೆಗಳನ್ನು ಜೇಸಿ ವಲಯಾಧ್ಯಕ್ಷ ವಿಜಯಕುಮಾರ್ ಉದ್ಘಾಟಿಸಿದರು. ಎಂ.ಎಸ.ಅರುಣೇಶ್, ರವಿಚಂದ್ರ, ಇಬ್ರಾಹಿಂ ಶಾಫಿ, ಮಹಮ್ಮದ್ ಹನೀಫ್ ಇದ್ದರು.