ಸಾರಾಂಶ
ಕೊಪ್ಪಳ: ಕೊನೆಗೂ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅ. 18ರಂದು ಈ ಕುರಿತು ಅಧಿಕೃತ ಆದೇಶ ಹೊರಬಿದ್ದಿದ್ದು, ಬಹುದಿನಗಳ ವಿವಾದಕ್ಕೆ ತೆರೆ ಬಿದ್ದಂತೆ ಆಗಿದೆ.ಅಭಿವೃದ್ಧಿ ಪ್ರಾಧಿಕಾರದ ಅಧೀನ ಕಾರ್ಯದರ್ಶಿ ಅವರು ಆದೇಶವನ್ನು ಹೊರಡಿಸಿ, ಸದಸ್ಯರನ್ನು ನೇಮಕ ಮಾಡಿದ್ದಾರೆ.
ಮಾರ್ಕೇಂಡೇಶ್ವರ ಕಲ್ಲಣ್ಣವರ, ಚನ್ನಬಸಯ್ಯ ಚನ್ನಒಡೆಯರ, ಅಬ್ದುಲ್ ಲತೀಫ್ ಖತೀಬ್, ಕಾಳಮ್ಮ ಶಿವಶರಣಬಸವರಾಜ ಅವರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.ಕೊನೆಗೂ ನೇಮಕ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷ ಸ್ಥಾನಕ್ಕೆ ವಿಪರೀತ ಪೈಪೋಟಿ ಇದ್ದಿದ್ದರಿಂದ ಸರ್ಕಾರ ರಚನೆಯಾಗಿ ಒಂದೂವರೆ ವರ್ಷವಾಗಿದ್ದರೂ ನೇಮಕ ಮಾಡಿರಲಿಲ್ಲ. ಯಾರನ್ನೇ ಮಾಡಿದರೂ ವಿವಾದ ಭುಗಿಲೆಳುತ್ತದೆ. ಸ್ಪರ್ಧೆಯಲ್ಲಿ ಹಲವರು ಇದ್ದರು. ಆದರೆ, ಈಗ ಲೋಕಸಭಾ ಚುನಾವಣೆಯೂ ಮುಗಿದಿರುವ ಹಿನ್ನೆಲೆಯಲ್ಲಿ ಹಿಟ್ನಾಳ ಕುಟುಂಬ ಅಳೆದು ತೂಗಿ, ಭಾಗ್ಯನಗರದ ನಿವಾಸಿಯಾಗಿರುವ ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ ಅವರ ಹೆಸರನ್ನು ಸೂಚಿಸಿದೆ. ಕಾಂಗ್ರೆಸ್ ಕಟ್ಟಾಳಿನಂತೆ ಇರುವ ಶ್ರೀನಿವಾಸ ಗುಪ್ತಾ ಅವರು ಇದುವರೆಗೂ ಅಧಿಕಾರದಿಂದ ದೂರವೇ ಇದ್ದರು. ಹೀಗಾಗಿ, ಅವರ ನೇಮಕ ಸೂಕ್ತ ಎನ್ನುವ ಮಾತು ಈಗ ಕಾಂಗ್ರೆಸ್ ಪಾಳಯದಲ್ಲಿ ಕೇಳಿಬರುತ್ತಿದೆ.
ಅಭಿವೃದ್ಧಿಗೆ ಒತ್ತು: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಇದುವರೆಗೂ ಇದ್ದು ಇಲ್ಲದಂತೆ ಇದೆ. ಅಭಿವೃದ್ಧಿ ಮಾಡುವುದಕ್ಕೆ ಸಾಕಷ್ಟು ಅವಕಾಶಗಳು ಇದ್ದರೂ ಮಾಡದೆ ಇರುವುದು ತೀವ್ರ ಟೀಕೆಗೆ ಗುರಿಯಾಗಿದೆ.ಇದುವರೆಗೂ ಒಂದೇ ಒಂದು ಲೇ ಔಟ್ ಮಾಡಿ, ನಿವೇಶನ ಹಂಚಿಕೆ ಮಾಡಿದ ಉದಾಹರಣೆ ಇಲ್ಲ. ಮಾಡಿದ ಒಂದು ಲೇ ಔಟ್ ಮೆಡಿಕಲ್ ಕಾಲೇಜು ಪಾಲಾಗಿದ್ದರಿಂದ ಉಳಿದ ಒಂದಷ್ಟು ನಿವೇಶನ ಹಂಚಿದ್ದೆ ದೊಡ್ಡ ಸಾಧನೆ.
₹26 ಕೋಟಿ: ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ₹26 ಕೋಟಿ ಇದ್ದು, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ದೊಡ್ಡ ಅವಕಾಶ ಇದೆ. ಕೊಪ್ಪಳ ನಗರದಲ್ಲಿ ಯಾವುದೇ ವೃತ್ತಗಳು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಯೇ ಇಲ್ಲ. ಹೀಗಾಗಿ, ಈಗ ನೂತನ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಮನಸ್ಸು ಮಾಡುವರೇ ಎನ್ನುವುದು ಜನರ ಬಹುದೊಡ್ಡ ನಿರೀಕ್ಷೆಯಾಗಿದೆ.ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸರ್ಕಾರ ನೇಮಕ ಮಾಡಿದ್ದು ನನಗೆ ಖುಷಿ ತಂದಿದೆ. ನನ್ನನ್ನು ನೇಮಕ ಮಾಡಲು ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಹಿರಿಯರಾದ ಬಸವರಾಜ ಹಿಟ್ನಾಳ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸೇರಿದಂತೆ ಕಾಂಗ್ರೆಸ್ ಎಲ್ಲ ನಾಯಕರಿಗೆ ನಾನು ಋಣಿಯಾಗಿದ್ದೇನೆ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಹೇಳಿದರು.ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ಹಲವು ದಿನಗಳಿಂದ ಖಾಲಿ ಇತ್ತು. ಈಗ ನೇಮಕ ಮಾಡಲಾಗಿದ್ದು, ಅಭಿವೃದ್ಧಿಯನ್ನು ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.