ಸಾರಾಂಶ
ಯಾವುದೇ ರಾಷ್ಟ್ರ ಮಹಿಳೆಯರ ಅಭಿವೃದ್ಧಿಯನ್ನು ಕಡೆಗಣಿಸಿದರೆ, ಆ ರಾಷ್ಟ್ರದ ಪ್ರಗತಿ ಕುಂಠಿತವಾಗುತ್ತದೆ.
ಕನ್ನಡಪ್ರಭ ವಾರ್ತೆ ಹಾವೇರಿ
ಯಾವುದೇ ರಾಷ್ಟ್ರ ಮಹಿಳೆಯರ ಅಭಿವೃದ್ಧಿಯನ್ನು ಕಡೆಗಣಿಸಿದರೆ, ಆ ರಾಷ್ಟ್ರದ ಪ್ರಗತಿ ಕುಂಠಿತವಾಗುತ್ತದೆ. ಮಹಿಳೆಯರ ಸ್ವಾವಲಂಬನೆ ಹಾಗೂ ಆರ್ಥಿಕ ಪ್ರಗತಿಗೆ ಧರ್ಮಸ್ಥಳ ಸಂಸ್ಥೆ ಒಂದು ವರದಾನವಾಗಿದೆ ಎಂದು ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಡಾ. ಮುತ್ತಣ್ಣ ಯಲಿಗಾರ ಹೇಳಿದರು.ಸ್ಥಳೀಯ ಶ್ರೀ ಕೃಷ್ಣ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏರ್ಪಡಿಸಿದ್ದ ತಾಲೂಕಾ ಮಹಿಳಾ ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡ ಪ್ರಾದೇಶಿಕ ಕಚೇರಿಯ ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿ ಮಲ್ಲಿಕಾ, ಜ್ಞಾನ ವಿಕಾಸ ಕಾರ್ಯಕ್ರಮಗಳ ಆಶಯ, ಉದ್ದೇಶ ಹಾಗೂ ವಾತ್ಸಲ್ಯ ಕಾರ್ಯಕ್ರಮಗಳ ಕುರಿತು ವಿವರಿಸಿದರು.ತಾಲೂಕಾ ಯೋಜನಾಧಿಕಾರಿ ನಾರಾಯಣ ಜಿ. ಮಾತನಾಡಿ, ದುರ್ಬಲ ವರ್ಗದ ಮಹಿಳೆಯರಲ್ಲಿ ಕುಟುಂಬ ನಿರ್ವಹಣೆ, ಹಣಕಾಸು ವ್ಯವಹಾರ ಜ್ಞಾನ ಹಾಗೂ ಮಕ್ಕಳ ಶಿಕ್ಷಣ ಮುಂತಾದ ಗುರಿಗಳನ್ನು ಇಟ್ಟುಕೊಂಡು ಯೋಜನೆಯನ್ನು ರೂಪಿಸಿದ್ದು, ಮಹಿಳೆಯರಿಗೆ ಜ್ಞಾನಾರ್ಜನೆ ಮಾಡಲು ಸಹಕಾರಿಯಾಗಿದೆ ಎಂದರು.
ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ಪರಿಮಳಾ ಜೈನ ಮಾತನಾಡಿ, ಒಂದು ಜನಾಂಗ ಎಷ್ಟು ಮುಂದುವರೆದಿದೆ ಎಂಬುದನ್ನು ನೋಡಬೇಕಾದರೆ ಆ ಜನಾಂಗ ಮಹಿಳೆಯರನ್ನು ಯಾವ ದೃಷ್ಟಿಯಲ್ಲಿ ನೋಡುವರೆಂಬುದೇ ಒರೆಗಲ್ಲು. ಪುರುಷನ ಉನ್ನತಿ, ಅವನತಿ ಮಹಿಳೆಯರ ಕೈಯಲ್ಲಿದೆ ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಸಹಾಯಕ ಯೋಜನಾಧಿಕಾರಿ ಶಿಲ್ಪಾ ಮಾತನಾಡಿ, ಇಂದು ಮಹಿಳೆ ಅಬಲೆಯಲ್ಲ, ಸಬಲೆ ಎಂಬುದನ್ನು ಸಾಬೀತುಪಡಿಸಿದ್ದಾಳೆ. ಸ್ತ್ರೀಶಕ್ತಿ ಜಾಗೃತವಾಗಿದೆ ಎಂದರು.
ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ಡಾ. ಮಹಾದೇವಿ ಕಣವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನೆಯ ಸಂಸ್ಕೃತಿಯಲ್ಲಿಯೇ ಮಕ್ಕಳ ಸಂಸ್ಕಾರ ಅಡಗಿರುವುದರಿಂದ ತಾಯ್ತಂದೆಯರು ಮಕ್ಕಳಿಗೆ ಅನುಕರಣೀಯವಾಗಿರಬೇಕು. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬಿತ್ತಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆ ತಾಯ್ತಂದೆಯರ ಕೈಯಲ್ಲಿದೆ ಎಂದು ಹೇಳಿದರು.ಒಕ್ಕೂಟದ ಅಧ್ಯಕ್ಷೆ ಪ್ಯಾರಿಜಾನ ವೇದಿಕೆಯಲ್ಲಿದ್ದರು. ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಯೋಜನಾಧಿಕಾರಿ ನಾರಾಯಣ ಗೊಂಡ ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕಿ ಸುಲೋಚನಾ ವಂದಿಸಿದರು.