ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಂಗಳವಾರದಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಆರಂಭಗೊಂಡಿದ್ದು, ಬೂತ್‌ ಮಟ್ಟದ ಅಧಿಕಾರಿಗಳು ಮನೆ-ಮನೆ ಭೇಟಿ ನೀಡಿ ಎನುಮೆರೇಷನ್‌ ಫಾರಂ ಅನ್ನು ಮತದಾರರಿಗೆ ವಿತರಣೆ ಮಾಡುವುದು ಕಂಡು ಬಂತು. ಮೊಬೈಲ್‌ ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಕೆಲವು ಕಡೆ ಸಾಂಕೇತಿಕವಾಗಿ ಮಂಗಳವಾರ ಶುರು ಮಾಡಲಾಗಿದೆ.

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 9.60 ಲಕ್ಷ ಮತದಾರರಿದ್ದು, 1,230 ಮತಗಟ್ಟೆ ಇವೆ. ಈ ಮತಗಟ್ಟೆಗಳಿಗೆ ತಲಾ ಒಬ್ಬರನ್ನು ಬೂತ್ ಮಟ್ಟದ ಅಧಿಕಾರಿಗಳಿದ್ದು, ಈ ಬೂತ್‌ ಮಟ್ಟದ ಅಧಿಕಾರಿಗಳ ಮೂಲಕ ಭಾರತ ಚುನಾವಣಾ ಆಯೋಗ ಎನುಮೆರೇಷನ್‌ ಫಾರಂ ವಿತರಿಸುವ ಕಾರ್ಯ ಆರಂಭಿಸಲಾಗಿದೆ. ಮಂಗಳವಾರದಿಂದ ಜು.29 ವರೆಗೆ ವಿತರಣೆ ಮತ್ತು ಭರ್ತಿ ಮಾಡಿದ ಫಾರಂ ವಾಪಾಸ್‌ ಪಡೆಯುವ ಕಾರ್ಯ ನಡೆಯಲಿದೆ.

ಎನುಮೆರೇಷನ್‌ ಫಾರಂ ವಿತರಣೆ ಮೊದಲ ದಿನ ಬೂತ್‌ ಮಟ್ಟದ ಅಧಿಕಾರಿಗಳು ಫಾರಂಗಳನ್ಜು ವಿಂಗಡಣೆ ಮಾಡಿಕೊಂಡು ವಿತರಣೆ ಕಾರ್ಯ ಶುರು ಮಾಡಿದ್ದಾರೆ. ಎಸ್‌ಐಆರ್‌ ಕಾರ್ಯದ ಬಗ್ಗೆ ಜನಜಾಗೃತಿಯ ಉದ್ದೇಶದಿಂದ ಶಾಸಕರು, ವಿಧಾನ ಪರಿಷತ್‌ ಸದಸ್ಯ, ವಿವಿಧ ಪಕ್ಷದ ಮುಖಂಡರು, ಗಣ್ಯವ್ಯಕ್ತಿಗಳಿಗೆ ವಿತರಿಸಿದರು.

ಆ್ಯಪ್‌ದಲ್ಲಿ ದಾಖಲು


ಬೂತ್‌ ಮಟ್ಟದ ಅಧಿಕಾರಿಗಳು ಯಾವ ಯಾವ ಮತದಾರರಿಗೆ ಎನುಮೆರೇಷನ್‌ ಫಾರಂ ವಿತರಣೆ ಮಾಡಲಾಗಿದೆ ಎಂಬುದನ್ನು ಆ್ಯಪ್‌ ಮೂಲಕ ಭಾರತ ಚುನಾವಣಾ ಆಯೋಗಕ್ಕೆ ದಾಖಲಿಸಬೇಕಿದೆ. ಒಂದು ವೇಳೆ ಫಾರಂ ಭರ್ತಿ ಮಾಡಿ ಸ್ಥಳದಲ್ಲಿಯೇ ಮತದಾರರು ವಾಪಸ್ ನೀಡುವುದಾಗಿ ತಿಳಿಸಿದರೆ, ಪಡೆದುಕೊಳ್ಳುವ ಕಾರ್ಯ ಮಾಡಿದ್ದಾರೆ.

ಫಾರಂ ಭರ್ತಿ ಬಗ್ಗೆ ಮಾಹಿತಿ

ಮತದಾರರಿಗೆ ಎನುಮೆರೇಷನ್‌ ಫಾರಂ ಭರ್ತಿ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಸಹ ಮಂಗಳವಾರ ಮಾಡಿದರು. ಜತೆಗೆ, ಎನುಮೆರೇಷನ್‌ ಫಾರಂ ಭರ್ತಿ ಮಾಡುವುದಕ್ಕೆ ಬೇಕಾದ ಮಾಹಿತಿಯ ಬಗ್ಗೆಯು ಸಹ ತಿಳಿಸಿಕೊಡುವ ಕಾರ್ಯವನ್ನು ಬೂತ್‌ಮಟ್ಟದ ಅಧಿಕಾರಿಗಳು ಮಾಡಿದ್ದಾರೆ.

ಆನ್‌ಲೈನ್‌ನಲ್ಲಿಯೂ ಭರ್ತಿಗೆ ಅವಕಾಶ

ಮತದಾರರಿಗೆ ಆನ್‌ಲೈನ್‌ ಮೂಲಕವೇ ಎನುಮೆರೇಶನ್‌ ಫಾರಂ ಡೌನ್‌ ಲೋಡ್‌ ಮಾಡಿಕೊಂಡು ಭರ್ತಿ ಮಾಡಿ ಆನ್‌ಲೈಲ್‌ ಮೂಲಕವೇ ಸಲ್ಲಿಸುವುದಕ್ಕೂ ಅವಕಾಶ ನೀಡಲಾಗಿದೆ. ಚುನಾವಣಾ ಆಯೋಗದ ವೆಬ್‌ ಸೈಟ್‌ನಲ್ಲಿ ಮತ್ತು ಈಸಿನೆಟ್‌ ಮೊಬೈಲ್‌ಆ್ಯಪ್‌ ಮೂಲಕವೂ ಭರ್ತಿ ಮಾಡಿ ಸಲ್ಲಿಕೆ ಮಾಡಬಹುದಾಗಿದೆ. ಸಲ್ಲಿಕೆ ಮಾಡಿದ ಫಾರಂ ಸಂಬಂಧಪಟ್ಟ ಬಿಎಲ್‌ಒಗೆ ಹೋಗಲಿದೆ. ಬಿಎಲ್‌ಒ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.