ಸಾರಾಂಶ
ದಾವಣಗೆರೆ ಹೊಂಡದ ರಸ್ತೆಯಲ್ಲಿರುವ ಜನತಾ ವಿದ್ಯಾಲಯದಲ್ಲಿ ಪರಿಸರ ಸ್ನೇಹಿ ಮತಗಟ್ಟೆ ನಿರ್ಮಿಸಿರುವುದು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಮೇ 7ರಂದು ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲಾಡಳಿತ, ಜಿಪಂ, ಸ್ವೀಪ್ ಸಮಿತಿ ಸಹಯೋಗದಲ್ಲಿ ಸಖಿ, ಪಿಂಕ್, ವಿಶೇಷ ಚೇತನರಿಂದ ನಿರ್ವಹಿಸಲ್ಪಡುವ ಮತಗಟ್ಟೆಗಳಲ್ಲಿ ಪರಿಸರ ಸ್ನೇಹಿ ಬೂತ್ ನಿರ್ಮಿಸಲಾಗುತ್ತಿದೆ.ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಶಿವಲಿಂಗಪ್ಪ ಎಂ.ಕುಂಬಾರ್ ಮಾತನಾಡಿ, ಕಳೆದ 3-4 ದಿನಗಳಿಂದ ಕಲಾವಿದರು ಪರಿಸರ ಸ್ನೇಹಿ ಮತಗಟ್ಟೆ ನಿರ್ಮಿಸುತ್ತಿದ್ದು, ಉದ್ದೇಶವೆಂದರೆ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವುದು, ಪ್ಲಾಸ್ಟಿಕ್ ಬಳಕೆ ಬಗ್ಗೆ ಜಾಗೃತಿ ಮೂಡಿಸುವುದು, ನೀರಿನ ಸದ್ಭಳಕೆ, ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದರು.
ಹಿಂದಿನ ನಮ್ಮ ಹಿರಿಯರು ಪ್ಲಾಸ್ಟಿಕ್ ಬಳಕೆ ಮಾಡದೇ ಹೇಗೆ ಜೀವನ ನಡೆಸುತ್ತಿದ್ದರು, ಆಗ ಬಿದಿರಿನ ಬುಟ್ಟಿ, ಬಟ್ಟೆ ಕೈಚೀಲ, ಮಣ್ಣಿನ ಮಡಿಕೆ, ಮಣ್ಣಿನ ಪಾತ್ರೆ ಬಳಸುತ್ತಿದ್ದರು. ಹೂ ಹಣ್ಣು, ತರಕಾರಿಗಳನ್ನು ಬಿದಿರಿನ ಬುಟ್ಟಿ ತೆಗೆದುಕೊಂಡು ಹೋಗಿ ತರುತ್ತಿದ್ದರು. ಮಕ್ಕಳು ಮಣ್ಣಿನ ಆಟಿಕೆ ಸಾಮಾನು ಬಳಸಿ ಆಟ ಆಡುತ್ತಿದ್ದ ಹಾಗೂ ಮಣ್ಣಿನ ಹೂ ಕುಂಡಲಗಳು ಸೇರಿ ಇತರೆ ಅನೇಕ ಮಣ್ಣಿನ ವಸ್ತುಗಳು, ಬಿದಿರಿನಿಂದ ತಯಾರಿಸಿದ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ ಎಂದು ತಿಳಿಸಿದರು.ಪರಿಸರ ಸ್ನೇಹಿ ಮತಗಟ್ಟೆಯನ್ನು ಮಹಾನಗರ ಪಾಲಿಕೆ ವ್ಯಾಪ್ತಿಯ 18ನೇ ವಾರ್ಡ್ ಜಾಲಿನಗರದ ಬೂತ್ ನಂ.169ರ ಹೊಂಡದ ರಸ್ತೆಯಲ್ಲಿರುವ ಜನತಾ ವಿದ್ಯಾಲಯದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಶಿವಲಿಂಗಪ್ಪ ಎಂ.ಕುಂಬಾರ್ ನೇತೃತ್ವದಲ್ಲಿ ನಗರದ ಹಿರಿಯ ಕಲಾವಿದ ಶಾಂತಯ್ಯ ಪರಡಿಮಠ, ರವಿ ಹುದ್ದಾರ್, ಎ.ಶಿವಕುಮಾರ, ಶೇಷಾಚಲ ಸೇರಿ ಪರಿಸರ ಸ್ನೇಹಿ ಮತಗಟ್ಟೆ ನಿರ್ಮಿಸಿದ್ದಾರೆ.
ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಸ್ವೀಪ್ ಸಮಿತಿ ಸಹಕಾರದಿಂದ ಈ ಪರಿಸರ ಸ್ನೇಹಿ ಮತಗಟ್ಟೆ ನಿರ್ಮಿಸಿರುವುದಾಗಿ ತಿಳಿಸಿದರು.