ಸಾರಾಂಶ
ಮನುಷ್ಯ ಅಭಿವೃದ್ಧಿ ಪಥದತ್ತ ಹೋಗುತ್ತಾ ಮರಗಳನ್ನು ನಾಶ ಮಾಡುತ್ತಾ ಸಾಗಿದಂತೆ ನೀರಿನ ಅಭಾವ ಎದುರಾಗುತ್ತಿದೆ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಇಂದಿನ ದಿನಗಳಲ್ಲಿ ಮಾನವನ ಅತಿ ಬುದ್ದಿವಂತಿಕೆಯಿಂದಾಗಿ ಪರಿಸರ ನಾಶವಾಗುತ್ತಾ ಸಾಗಿದೆ ಎಂದು ತಾಲೂಕು ಯೋಜನಾಧಿಕಾರಿ ಭಾಸ್ಕರ್ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ನಂಜನಾಯಕನಹಳ್ಳಿಪಾಳ್ಯ ಗ್ರಾಮದಲ್ಲಿನ ಅಂಗನವಾಡಿ ಆವರಣದಲ್ಲಿ ಬುಧವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನಿಂದ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪರಿಸರ ಮಾಹಿತಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಮನುಷ್ಯ ಅಭಿವೃದ್ಧಿ ಪಥದತ್ತ ಹೋಗುತ್ತಾ ಮರಗಳನ್ನು ನಾಶ ಮಾಡುತ್ತಾ ಸಾಗಿದಂತೆ ನೀರಿನ ಅಭಾವ ಎದುರಾಗುತ್ತಿದೆ, ಅಲ್ಲದೇ ಈ ಬಾರಿ ನಿಗದಿಗಿಂತ ತಡವಾಗಿ ಮಳೆ ಆರಂಭವಾಗಿದ್ದರಿಂದಾಗಿ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿ ಜೀವಿಸಲು ತೊಂದರೆ ಎದುರಾಗಿತ್ತು, ಮುಂದಿನ ದಿನಗಳಲ್ಲಿ ಈ ರೀತಿಯ ಹವಾಮಾನ ವೈಪರಿತ್ಯಗಳು ಮರುಕಳಿಸದ ರೀತಿ ನೋಡಿಕೊಳ್ಳಬೇಕೆಂದೆರೆ ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡ ಪ್ರಮೋದ್ ಮಾತನಾಡಿ, ಮನೆಗೊಂದು ಮರ ಊರಿಗೊಂದು ವನ ಎಂಬ ಘೋಷಾವಾಕ್ಯದಂತೆ ಜೀವನ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ, ಹಿಂದಿನ ದಿನಗಳಲ್ಲಿ ಮನೆಯಂಗಳದಲ್ಲಿ ಹತ್ತಾರು ಮರಗಿಡಗಳು ಇರುತ್ತಿದ್ದವು, ಆದರೀಗ ಮರಗಳ ಹನನ ಯಥೇಚ್ಛವಾಗಿ ನಡೆದಿರುವ ಹಿನ್ನಲೆ ನಾವು ಗಿಡಗಳನ್ನು ನೆಡಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ವಿದ್ಯಾರ್ಥಿಗಳಿಗೆ ವಿವಿಧ ತಳಿಯ ಗಿಡಗಳನ್ನು ವಿತರಿಸಲಾಯಿತು.ಅಣ್ಣೂರು ಒಕ್ಕೂಟದ ಅಧ್ಯಕ್ಷರಾದ ಸಾಕಮ್ಮ, ಅಂಗನವಾಡಿ ಕಾರ್ಯಕರ್ತೆ ದೇವಮ್ಮಣಿ, ಮುಖ್ಯ ಶಿಕ್ಷಕಿ ದಿರ್ಶದ್ ಬೇಗಂ, ಸಹ ಶಿಕ್ಷಕಿ ಪೂರ್ಣಿಮಾ, ಮೇಲ್ವಿಚಾರಕಿ ಪವಿತ್ರ, ಸೇವಾ ಪ್ರತಿನಿಧಿ ಜಯಮ್ಮ ಇದ್ದರು.