ಕೋಡಿಮೋಳೆ ಸರ್ಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

---

ಕನ್ನಡಪ್ರಭ ವಾರ್ತೆ ಚಾಮರಾಜನಗರ

ತಾಲೂಕಿನ ಕೋಡಿಮೋಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವಿಶ್ವಪರಿಸರ ದಿನಾಚರಣೆ ಅಂಗವಾಗಿ ಕೋಡಿಮೋಳೆ ಭಗತ್ ಸಿಂಗ್ ಯುವಸೇನೆ ಹಾಗೂ ಗ್ರಾಮದ ಯುವಕರ ಸಂಘದ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು.

ಇದೇ ವೇಳೆ ಭಗತ್ ಸಿಂಗ್ ಯುವಸೇನೆ ಅಧ್ಯಕ್ಷ ಕಾಂತರಾಜು ಮಾತನಾಡಿ, ಹೆಚ್ಚುತ್ತಿರುವ ಜನಸಂಖ್ಯೆಯ ಪರಿಣಾಮ, ಪರಿಸರ ವಿನಾಶದ ಅಂಚು ತಲುಪಿದೆ. ಆಧುನೀಕತೆಯ ನಾಗಲೋಟದಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕಾಡು ನಾಶ ಮಾಡುತ್ತಿರುವುದು ಕಾನೂನುಬಾಹಿರ. ಅರಣ್ಯದಂಚಿನಲ್ಲಿ ನಾಯಿಕೊಡೆಗಳಂತೆ ತಲೆಎತ್ತುತ್ತಿರುವ ಹೋಂಸ್ಟೇ, ರೆಸಾರ್ಟ್‌ಗಳು ಅರಣ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿವೆ. ಸರ್ಕಾರ ಇವುಗಳಿಗೆ ಕಡಿವಾಣ ಹಾಕುವ ಮೂಲಕ ಕಾಲಕಾಲಕ್ಕೆ ಮಳೆ. ಶುದ್ಧಗಾಳಿ, ಅಂತರ್ಜಲ ಹೆಚ್ಚಳಕ್ಕೆ ಗಿಡನೆಡುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕಿದೆ ಎಂದರು.


ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪೋಷಣೆ ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಇದೇ ವೇಳೆ ಸಿಲ್ವರ್‌, ಹೊಂಗೆ, ನೇರಳೆ, ಅಗಸೆ, ಮಹಾಗನಿ ಸೇರಿದಂತೆ ೫೦ ಗಿಡಗಳನ್ನು ನೆಟ್ಟು ನೀರೆರೆಯಲಾಯಿತು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ರತ್ನಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಪುಟ್ಟರಾಜು, ಭಗತ್ ಸಿಂಗ್ ಯುವಸೇನೆ ಮನು, ಮಣೀಶ್, ಮನು, ಶಾಂತರಾಜ್, ಶಾಲಾ ಮಕ್ಕಳು ಹಾಜರಿದ್ದರು.

---