ಮೀನುಗಾರರ ಬೆಂಬಲಕ್ಕೆ ನಿಂತ ಪರಿಸರ ಹೋರಾಟಗಾರ್ತಿ

| Published : Nov 05 2025, 03:00 AM IST

ಮೀನುಗಾರರ ಬೆಂಬಲಕ್ಕೆ ನಿಂತ ಪರಿಸರ ಹೋರಾಟಗಾರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಕಾಸರಕೋಡ ಟೊಂಕಕ್ಕೆ ಖ್ಯಾತ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಭೇಟಿ ನೀಡಿದ್ದು, ಇದರಿಂದ ವಾಣಿಜ್ಯ ಬಂದರು ವಿರೋಧಿ ಹೋರಾಟಕ್ಕೆ ಹೊಸ ತಿರುವು ಸಿಕ್ಕಿದೆ. ಇಲ್ಲಿನ ಮೀನುಗಾರರು, ಹೋರಾಟದ ಪ್ರಮುಖರನ್ನು ಭೇಟಿ ಮಾಡಿ ವಿಸ್ತೃತ ಚರ್ಚೆ ನಡೆಸುವ ಮೂಲಕ ವಸ್ತುಸ್ಥಿತಿ ಅರಿಯುವ ಪ್ರಯತ್ನ ಮಾಡಿದರು.

ವಾಣಿಜ್ಯ ಬಂದರು ವಿರೋಧಿ ಹೋರಾಟಕ್ಕೆ ಹೊಸ ತಿರುವು

ಜೀಯೇಂಗೇ, ಔರ್ ಜೀತೆಂಗೆ ಘೋಷಣೆಯೊಂದಿಗೆ ಹೋರಾಟಕ್ಕೆ ಮರುಹುಟ್ಟುಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಕಾಸರಕೋಡ ಟೊಂಕಕ್ಕೆ ಖ್ಯಾತ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಭೇಟಿ ನೀಡಿದ್ದು, ಇದರಿಂದ ವಾಣಿಜ್ಯ ಬಂದರು ವಿರೋಧಿ ಹೋರಾಟಕ್ಕೆ ಹೊಸ ತಿರುವು ಸಿಕ್ಕಿದೆ. ಇಲ್ಲಿನ ಮೀನುಗಾರರು, ಹೋರಾಟದ ಪ್ರಮುಖರನ್ನು ಭೇಟಿ ಮಾಡಿ ವಿಸ್ತೃತ ಚರ್ಚೆ ನಡೆಸುವ ಮೂಲಕ ವಸ್ತುಸ್ಥಿತಿ ಅರಿಯುವ ಪ್ರಯತ್ನ ಮಾಡಿದರು.

ಪರಿಸರ ಸೂಕ್ಷ್ಮ ಕಾಸರಕೋಡ ಟೊಂಕದಲ್ಲಿ ಖಾಸಗಿ ಮೂಲದ ವಾಣಿಜ್ಯ ಬಂದರು ಯೋಜನೆಯ ಅನುಷ್ಠಾನದ ವಿರುದ್ಧ ನಡೆದ ಸ್ಥಳೀಯರ ಶಾಂತಿಯುತ ಹೋರಾಟ ಹತ್ತಿಕ್ಕಲು ನಡೆದ ಪ್ರಯತ್ನಕ್ಕೆ ಸಂಬಂಧ ಪಟ್ಟಂತೆ ಅಖಿಲಭಾರತ ಕಾರ್ಮಿಕ ಸಂಘಗಳ ಕೇಂದ್ರೀಯ ಮಂಡಳಿಯು, ನ್ಯಾಯವಾದಿಗಳ ವಿಶೇಷ ತನಿಖಾ ತಂಡವೊಂದನ್ನು ರಚಿಸಿತ್ತು. ತನಿಖಾ ತಂಡದ ವರದಿಯ ಶಿಫಾರಸ್ಸುಗಳನ್ನು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ಪಾಟ್ಕರ್ ತರಲಿದ್ದಾರೆ.

ನಂತರ ಸ್ಥಳೀಯರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಂದರ ಪರಿಸರವಿದೆ. ಕರ್ನಾಟಕ ಸುಂದರ ಕಡಲತೀರಗಳನ್ನು ಸೂಕ್ಷ್ಮ ಪರಿಸರ ಮತ್ತು ಶುದ್ಧ ಆಮ್ಲಜನಕ ಪೂರೈಸುವ ಹರಿದ್ವರ್ಣದ ಕಾಡುಗಳಿಂದ ಕೂಡಿರುವ ಪಶ್ಚಿಮಘಟ್ಟವನ್ನು ಹೊಂದಿದೆ. ಮುಂದಿನ ಪೀಳಿಗೆಯ ಜನರಿಗಾಗಿ ಅವುಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ. ಜಿಲ್ಲೆಯ ಜನರು ಸಂಘಟಿತರಾಗಿ ಅದನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಉತ್ತರ ಕನ್ನಡದಲ್ಲಿ ಕೇಣಿ, ಪಾವಿನಕುರ್ವೆಯಲ್ಲಿ ಬೃಹತ್ ಬಂದರುಗಳನಿರ್ಮಾಣಕ್ಕೆ ಶತಾಯಗತಾಯ ಪ್ರಯತ್ನ ಆಗುತ್ತಿದೆ. ಇತ್ತೀಚೆಗೆ ಶರಾವತಿ ಪಂಪ್ಡ ಸ್ಟೋರೇಜ್ ಎಂಬ ಅರಣ್ಯ ಪರಿಸರ ಜನಜೀವನ ನಾಶ ಮಾಡುವ ಮತ್ತು ತೀರ ಅವೈಜ್ಞಾನಿಕವಾದ ಯೋಜನೆಯ ಅನುಷ್ಠಾನಕ್ಕೂ ಸರ್ಕಾರ ಆತುರಪಡಿಸುತ್ತಿದೆ ಎನ್ನುವ ಬಗ್ಗೆ ಕೇಳಿದ್ದೇನೆ. ಜನರ ನೆಮ್ಮದಿಯನ್ನು ಕೆಡಿಸುವ ಇಂತಹ ಪರಿಸರ ನಾಶಮಾಡುವ ಯೋಜನೆಗಳ ವಿರುದ್ಧ ಸಂಘಟಿತ ಹೋರಾಟ ಕಟ್ಟುವ ಅಗತ್ಯವಿದೆ. ಟೊಂಕಾ ಪ್ರದೇಶಕ್ಕೆ ಭೇಟಿ ಮಾಡಿ ಇಲ್ಲಿನ ಜನರಿಗೆ ಆಗುತ್ತಿರುವ ಅನ್ಯಾಯ ನೋಡಿ ನನಗೆ ನೋವು ಉಂಟಾಗಿದೆ. ಜನರ ಬಂದರು ವಿರೋಧಿ ಹೋರಾಟದಲ್ಲಿ ನ್ಯಾಯವಿದೆ. ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ನ್ಯಾಯ ಸಿಗುವವರೆಗೆ ನಾನು ಮತ್ತು ನಮ್ಮ ವಿವಿಧ ಸಂಘಟನೆಗಳು ನಿಮ್ಮೊಂದಿಗೆ ಇದ್ದೇವೆ. ಹೋರಾಟವನ್ನು ಹತ್ತಿಕ್ಕುವ ಸ್ಥಾಪಿತ ಹಿತಾಸಕ್ತಿಗಳ ಷಡ್ಯಂತ್ರಕ್ಕೆ ನೀವು ಬಲಿಪಶುಗಳಾಗಬಾರದು. ಶಾಂತಿಯುತ ಸಂಘಟಿತ ಹೋರಾಟವನ್ನು ಮುಂದುವರಿಸಿ ಎಂದು ಕರೆ ನೀಡಿದರು.

ಜೀಯೇಂಗೇ, ಔರ್ ಜೀತೆಂಗೆ ಎನ್ನುವ ಘೋಷಣೆಯೊಂದಿಗೆ ಸ್ಥಳೀಯರೊಂದಿಗೆ ಧ್ವನಿಗೂಡಿಸಿದ್ದು ಹೋರಾಟಕ್ಕೆ ಮರುಹುಟ್ಟು ನೀಡಿದಂತಿತ್ತು. ಅವರೊಂದಿಗೆ ರಾಷ್ಟ್ರೀಯ ಮೀನುಗಾರರ ಸಂಘಟನೆಯ ರಾಜ್ಯ ಕಾರ್ಯದರ್ಶಿ ಚಂದ್ರಕಾಂತ ಕೊಚರೇಕರ, ಬಂದರು ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೇಶ ಜಿ. ತಾಂಡೇಲ, ಮೀನುಗಾರರ ಕಾರ್ಮಿಕರ ಸಂಘದ ಕಾರ್ಯದರ್ಶಿ ರಾಜು ತಾಂಡೇಲ, ಹಡಗು ಮಾಲೀಕರ ಸಂಘದ ಕಾರ್ಯದರ್ಶಿ ವಿವನ್ ಫರ್ನಾಂಡಿಸ್ ,ಮಹಿಳಾ ಪ್ರಮುಖರಾದ ಪಾರ್ವತಿ ತಾಂಡೇಲ, ರೇಖಾ ತಾಂಡೇಲ, ಪರಿಸರ ಸಂಘಟನೆಗಳ ವಿದ್ಯಾ ದಿನಕರ ಮಂಗಳೂರು,ನ್ಯಾಯವಾದಿ ಸಂಪ್ರೀತಾ, ರಜನಿ ಸಂತೋಷ ರಾವ್, ಎನ್‌ಎಫ್‌ಎಫ್‌ ಸಂಘಟನೆಯ ರಾಜು ತಾಂಡೇಲ, ರಮೇಶ ತಾಂಡೇಲ, ಮಹಮ್ಮದ್ ಕೋಯಾ, ರಜಾಕ್ ಸಾಬ, ರಿಯಾನಾ ಶೇಖ್ ಮತ್ತಿತರ ಪ್ರಮುಖರು ಇದ್ದರು.