ಸಾರಾಂಶ
೨೦೯ನೇ ಭಾನುವಾರ ಹಾಗೂ ವಿಶ್ವ ಪ್ಲಾಸ್ಟಿಕ್ ಮುಕ್ತ ದಿನದ ಅಂಗವಾಗಿ ಕೊಮೆ ಬೀಚ್ ಸ್ವಚ್ಛತಾ ಅಭಿಯಾನ ನಡೆಯಿತು. ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ್ ಪೂಜಾರಿ ಅಭಿಯಾನಕ್ಕೆ ಚಾಲನೆ ನಿಡಿದರು.
ಕನ್ನಡಪ್ರಭ ವಾರ್ತೆ ಕೋಟ
ಪರಿಸರದ ಜಾಗೃತಿ ಸಂಘಟನೆಗಳಲ್ಲಿ ಮಾತ್ರವಲ್ಲ, ಜನಸಾಮಾನ್ಯರಲ್ಲಿ ಮೂಡಬೇಕು, ಆಗ ಮಾತ್ರ ಪರಿವರ್ತನೆ ಸಾಧ್ಯ ಎಂದು ಕೊಮೆ ಕೊರವಡಿ ವಿವಿಧೋದ್ದೇಶ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲ್ ಪೂಜಾರಿ ಹೇಳಿದರು.ಅವರು ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ, ಗೀತಾನಂದ ಫೌಂಡೇಶನ್ ಮಣೂರು ಸಹಯೋಗದೊಂದಿಗೆ ತೆಕ್ಕಟ್ಟೆ ಗ್ರಾ.ಪಂ. ಎಸ್.ಎಲ್.ಆರ್.ಎಂ. ಘಟಕ ಇದರ ಸಂಯೋಜನೆಯೊಂದಿಗೆ ೨೦೯ನೇ ಭಾನುವಾರ ಹಾಗೂ ವಿಶ್ವ ಪ್ಲಾಸ್ಟಿಕ್ ಮುಕ್ತ ದಿನದ ಅಂಗವಾಗಿ ಕೊಮೆ ಬೀಚ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು.
ಪರಿಸರದ ಬಗ್ಗೆ ಕೀಳರಿಮೆ ಬಿಡಿ, ಅದರ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲಂದರಲ್ಲಿ ಎಸೆಯಬೇಡಿ, ಹೊಳೆ ತೊರೆ, ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್ ಜೀವ ಸಂಕುಲಗಳಿಗೆ ಸಂಕಷ್ಟ ತಂದೊಡ್ಡುತ್ತಿದೆ, ಸಮುದ್ರದ ಕಿನಾರೆಯಲ್ಲಿ ತ್ಯಾಜ್ಯದ ರಾಶಿ ನೋಡಲಾಸಾಧ್ಯವಾಗಿದೆ. ಈ ಬಗ್ಗೆ ಈಗಾಲೇ ಜಾಗೃತರಾಗುವುದು ಒಳಿತು. ಪಂಚವರ್ಣದ ಪರಿಸರ ಕಾಳಜಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಅಭಿನಂದಿಸಿದರು.ಕೋಟ ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಪ್ರಧಾನ ಕಾರ್ಯದರ್ಶಿ ವಸಂತಿ ಹಂದಟ್ಟು, ತೆಕ್ಕಟ್ಟೆ ಗ್ರಾ.ಪಂ. ಎಸ್.ಎಲ್.ಆರ್.ಎಂ. ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ, ಹಂದಟ್ಟು ಮಹಿಳಾ ಬಳಗದ ಸುಜಾತ, ಮಣೂರು ಫ್ರೆಂಡ್ಸ್‌ನ ದಿನೇಶ್ ಆಚಾರ್, ಪಂಚವರ್ಣ ಯುವಕ ಮಂಡಲದ ಸಂಚಾಲಕ ಅಮೃತ್ ಜೋಗಿ ಇದ್ದರು. ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.