ಪರಿಸರ ಸಮತೋಲನ ಕಾಪಾಡಬೇಕು

| Published : Nov 18 2025, 03:15 AM IST

ಸಾರಾಂಶ

ಪ್ರಕೃತಿಯಲ್ಲಿನ ಏರುಪೇರುಗಳಿಂದ ಭೂಮಿಯ ತಾಪಮಾನ ಹೆಚ್ಚಾಗಿದ್ದು ಅದರಿಂದ ಪ್ರಾಕೃತಿಕ ಅಸಮತೋಲನ ಏರ್ಪಟ್ಟಿದೆ. ತಾಪಮಾನವನ್ನು ನಿಯಂತ್ರಿಸಿ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಮರಗಿಡಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಭಾವಿಸಿ ಕಾಡನ್ನು ಉಳಿಸಿ, ಬೆಳೆಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಪ್ರಕೃತಿ ನಮಗೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಶುದ್ಧ ನೀರು, ಗಾಳಿ, ಆಹಾರ ಸೇರಿದಂತೆ ಇನ್ನು ಅನೇಕ ಅಗತ್ಯ ವಸ್ತುಗಳನ್ನು ನೀಡುತ್ತಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸ್ವ ಇಚ್ಛೆಯಿಂದ ಗಿಡ, ಮರಗಳನ್ನು ಬೆಳೆಸಿ, ಪರಿಸರ ಸಂರಕ್ಷಿಸಬೇಕೆಂದು ಶ್ರೀರಾಮಚಂದ್ರ ಸಂಸ್ಥೆಯ ಹಾರ್ಟ್‌ಫುಲ್‌ನೆಸ್ ಮಿಷನ್‌ನ ತರಭೇತುದಾರ ಹಾಗೂ ಮಕ್ಕಳ ತಜ್ಞ ಡಾ.ಪ್ರಕಾಶ್ ಅಭಿಪ್ರಾಯಪಟ್ಟರು.

ತಾಲೂಕಿನ ಅರೂರು ಬಳಿಯ ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಭಾನುವಾರ ಸಂಸ್ಥೆ ಹಮ್ಮಿಕೊಂಡಿದ್ದ ನಮ್ಮ ಗ್ರಹ ಮತ್ತು ಅದರ ಪರಿಸರ ಸಂರಕ್ಷಿಸಿ ಕಾರ್ಯಕ್ರಮದಡಿ ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ತಾಪಮಾನ ಹೆಚ್ಚಳದಿಂದ ಅಪಾಯ

ಪ್ರಕೃತಿಯಲ್ಲಿನ ಏರುಪೇರುಗಳಿಂದ ಭೂಮಿಯ ತಾಪಮಾನ ಹೆಚ್ಚಾಗಿದ್ದು ಅದರಿಂದ ಪ್ರಾಕೃತಿಕ ಅಸಮತೋಲನ ಏರ್ಪಟ್ಟಿದೆ. ತಾಪಮಾನವನ್ನು ನಿಯಂತ್ರಿಸಿ ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರತಿಯೊಬ್ಬರೂ ಮರಗಿಡಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಭಾವಿಸಿ ಕಾಡನ್ನು ಉಳಿಸಿ, ಬೆಳೆಸಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಭೂಮಿಯನ್ನು ಜೋಪಾನ ಮಾಡಿ

ಸರ್ಕಾರಿ ನಂದಿ ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ.ನರಸಿಂಹ ಮಾತನಾಡಿ, ಭೂಮಿ ನಮ್ಮ ಪೂರ್ವಿಕರಿಂದ ಪಡೆದ ಉಡುಗೊರೆಯಲ್ಲ, ಬದಲಾಗಿ ಇನ್ನೂ ಹುಟ್ಟಿ ಬರಲಿರುವ ಜನಾಂಗದಿಂದ ಪಡೆದಿರುವ ಋಣಭಾರ. ಆದ್ದರಿಂದ ಪರಿಸರ ಸಂರಕ್ಷಣೆ ಮೂಲಕ ಭೂಮಿಯನ್ನು ಜೋಪಾನವಾಗಿಡುವುದು ಪ್ರತಿಯೊಬ್ಬ ವ್ಯಕ್ತಿಯ ಜೀವನಧರ್ಮವಾಗಬೇಕು ಎಂದರು.

ಈ ಸಂದರ್ಭದಲ್ಲಿ ಡಾ.ಶಶಿಕುಮಾರ್, ಶ್ರೀರಾಮಚಂದ್ರ ಸಂಸ್ಥೆಯ ಮಂಜುಳ, ಉಮಾ, ವಿಶ್ವನಾಥ್ , ಸಂಪತ್ ಕುಮಾರ್, ಹಾರ್ಟ್ ಪುಲ್ ನೆಸ್ ಮಿಷನ್ ನ ಸದಸ್ಯರು, ವಿದ್ಯಾರ್ಥಿಗಳು ಇದ್ದರು.