ಸಾರಾಂಶ
ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಿಟ್ಟು ಹೋದರೆ ಮಾತ್ರ ಮನುಕುಲದ ಉಳಿವು ಸಾಧ್ಯ.
ಕಾರವಾರ: ಪರಿಸರದ ನೈರ್ಮಲ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಹೊಣೆ ಎಂದು ಜಿಲ್ಲಾ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ. ಹೇಳಿದರು.
ಜಿಲ್ಲೆಯ ವಿವಿಧ ಬೀಚ್ ಗಳ ಸ್ವಚ್ಛತಾ ಅಭಿಯಾನಕ್ಕೆ ಕಾರವಾರದ ರವೀಂದ್ರನಾಥ ಟ್ಯಾಗೋರ್ ಬೀಚ್‌ನಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಬಿಟ್ಟು ಹೋದರೆ ಮಾತ್ರ ಮನುಕುಲದ ಉಳಿವು ಸಾಧ್ಯ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಾಗರಿಕರು ಪರಿಸರ ಸ್ವಚ್ಛತೆಗೆ ಗಮನ ಕೊಡಬೇಕು. ಪ್ಲಾಸ್ಟಿಕ್ ಫಾರ್ ಚೇಂಜ್ ಸಂಸ್ಥೆ ಜಿಲ್ಲೆಯ ಬೀಚ್‌ಗಳನ್ನು ಸ್ವಚ್ಛಗೊಳಿಸಿ ಜನ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಸರ್ಕಾರಿ ಪದವಿ ಕಾಲೇಜ್ ಕಾರವಾರದ ಎನ್ಎಸ್‌ಎಸ್ ಘಟಕದ ವಿದ್ಯಾರ್ಥಿಗಳು, ನಗರಸಭೆ ಸದಸ್ಯರು, ಪತಂಜಲಿ ಯೋಗ ಸಮಿತಿ ಸದಸ್ಯರು ಸೇರಿದಂತೆ ನೂರಕ್ಕೂ ಹೆಚ್ಚು ಜನ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಒಟ್ಟು 500 ಕಿಗ್ರಾಂಗೂ ಹೆಚ್ಚು ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಯಿತು.ಕುಮಟಾದ ವನ್ನಳ್ಳಿ ಬೀಚ್, ಗೋಕರ್ಣದ ಮುಖ್ಯ ಬೀಚ್, ಕಾಸರಕೋಡಿನ ಇಕೋ ಬೀಚ್ ನಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಪ್ಲಾಸ್ಟಿಕ್ ಫಾರ್ ಚೇಂಜ್ ನೇತೃದಲ್ಲಿ ಗಾರ್ನಿಯರ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.