ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ಪರಿಸರ ಅನುಮತಿ ನೀಡುವಿಕೆಯ ಸಮಸ್ಯೆಯನ್ನು ಪರಿಹರಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ಶಿವಮೊಗ್ಗ: ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶದ ಕೈಗಾರಿಕೆಗಳಿಗೆ ಪರಿಸರ ಅನುಮತಿ ನೀಡುವಿಕೆಯ ಸಮಸ್ಯೆಯನ್ನು ಪರಿಹರಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.

ಇಲ್ಲಿನ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ದೇವಕಾತಿಕೊಪ್ಪ ಕೈಗಾರಿಕಾ ಪ್ರದೇಶಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಸರ್ಕಾರದ ಗಮನ ಸೆಳೆಯಲು ಹಾಗೂ ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಶನಿವಾರ ಏರ್ಪಡಿಸಿದ್ದ ದೇವಕಾತಿಕೊಪ್ಪ ಕೈಗಾರಿಕಾ ವಲಯದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಮಾತನಾಡಿದರು.

ದೇವಕಾತಿ ಕೈಗಾರಿಕಾ ಪ್ರದೇಶದಲ್ಲಿ 450 ಎಕರೆ ಪ್ರದೇಶದಲ್ಲಿ 200 ಜನಕ್ಕೆ ಕೈಗಾರಿಕಾ ಭೂಮಿ ಮಂಜೂರು ಮಾಡಿದ್ದು, 20 ಜನ ಕೈಗಾರಿಕೆ ಪ್ರಾರಂಭಿಸಿದ್ದಾರೆ. ಉಳಿದ 180 ಜನ ಕೈಗಾರಿಕೆ ಪ್ರಾರಂಭಿಸಲು ತಯಾರಿ ಮಾಡಿಕೊಂಡಿದ್ದಾರೆ. ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯಗಳಿಲ್ಲ. ಈವರೆಗೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ಮಂಜೂರು ಮಾಡಿರುವ ಕೈಗಾರಿಕೆಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರಿಸರ ಅನುಮತಿ ಕೊಡಿಸಿಲ್ಲ ಎಂದು ದೂರಿದರು.

ರಾಜ್ಯದ ಮೂರು ಕೈಗಾರಿಕಾ ಪ್ರದೇಶಗಳಿಗೂ ಪರಿಸರ ಅನುಮತಿ ಇಲ್ಲದೆ ಕೈಗಾರಿಕೆಗಳನ್ನು ಪ್ರಾರಂಭಿಸಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ಹಸಿರು ಪೀಠವು ಪರಿಸರ ಅನುಮತಿ ಇಲ್ಲದೆ ಇರುವ ಎಲ್ಲ ಕೈಗಾರಿಕೆಗಳನ್ನು ಮುಚ್ಚಲು ಆದೇಶ ನೀಡಿದೆ. ಕೋಟ್ಯಾಂತರ ರುಪಾಯಿ ಸಾಲ ಮಾಡಿ, ಅತಿ ಹೆಚ್ಚಿನ ಬೆಲೆಗೆ ಕೈಗಾರಿಕೆ ಭೂಮಿ ಪಡೆದು ಮೂಲ ಸೌಕರ್ಯಗಳನ್ನು ಮಾಡಿಕೊಂಡು ಕೈಗಾರಿಕೆಗಳನ್ನು ಪ್ರಾರಂಭಿಸಿರುವ ಕೈಗಾರಿಕೆಗಳಿಗೆ ಮುಚ್ಚುವ ಆತಂಕ ಎದುರಾಗಿದೆ ಎಂದು ಮಾಹಿತಿ ನೀಡಿದರು.

ದೇವಕಾತಿ ಕೈಗಾರಿಕಾ ವಲಯ 500 ಎಕರೆಗಿಂತ ಕಡಿಮೆ ಪ್ರದೇಶ ಇರುವುದರಿಂದ ರಾಜ್ಯ ವ್ಯಾಪ್ತಿಗೆ ಬರುತ್ತದೆ. ಕೈಗಾರಿಕಾ ಭೂಮಿಯನ್ನು ವಾಪಸ್ ಮಾಡುವ ಕೈಗಾರಿಕೋದ್ಯಮಿಗಳಿಗೆ ಶೇ. 20 ರಷ್ಟು ಕಡಿತ ಮಾಡಿದೆ ಪೂರ್ತಿ ಹಣ ವಾಪಸ್ ಕೊಡಬೇಕು. ದಂಡ, ಬಡ್ಡಿಯನ್ನು ಮನ್ನಾ ಮಾಡಬೇಕು. ಆಗಿರುವ ನಷ್ಟಕ್ಕೆ ಪರಿಹಾರವನ್ನು ಕೈಗಾರಿಕೋದ್ಯಮಿಗಳಿಗೆ ರಾಜ್ಯ ಸರ್ಕಾರ ತುಂಬಿಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಮಾತನಾಡಿ, ಶಿವಮೊಗ್ಗದಲ್ಲಿ ಕೈಗಾರಿಕೆ ಪ್ರಾರಂಭಿಸಲು ಕೈಗಾರಿಕಾ ಭೂಮಿ ಕೊರತೆ ಇದೆ. ಇಂತಹ ಸಮಯದಲ್ಲಿ ದೇವಕಾತಿ ಕೈಗಾರಿಕಾ ವಲಯ ಪ್ರದೇಶದಲ್ಲಿ ಕೈಗಾರಿಕೆಗಳು ಮುಚ್ಚುವ ಆತಂಕದಿಂದ ಶಿವಮೊಗ್ಗದ ಕೈಗಾರಿಕಾ ಅಭಿವೃದ್ಧಿಗೆ ಹೊಡೆತ ಕೊಟ್ಟಂತಾಗಿದೆ. ಸರ್ಕಾರ ಆದಷ್ಟು ಬೇಗ ವನ್ಯಜೀವಿ ಮಂಡಳಿಯಿಂದ ಪರಿಸರ ಅನುಮತಿ ಕೊಡಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರಮಾಣಿತ ಕಾರ್ಯ ವಿಧಾನ ಪ್ರಾರಂಭಿಸಿ ದೇವಕಾತಿ ಪ್ರದೇಶದ ಕೈಗಾರಿಕೋದ್ಯಮಿಗಳಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ದೇವಕಾತಿ ಕೈಗಾರಿಕಾ ವಲಯದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಈ ಸಮಸ್ಯೆಗೆ ಕೆಐಎಡಿಬಿ ನೇರ ಕಾರಣ ಎಂದು ದೂರಿದರು.

ಕೆಐಎಡಿಬಿ ವಿರುದ್ಧ ನ್ಯಾಯಯುತ ಹೋರಾಟಕ್ಕೆ ಕಾನೂನು ಮಾರ್ಗದ ಆಯ್ಕೆಯ ಬಗ್ಗೆಯು ಸಭೆಯಲ್ಲಿ ಚರ್ಚಿಸಲಾಯಿತು.ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ಕಾರ್ಯದರ್ಶಿ ಎ.ಎಂ.ಸುರೇಶ್, ಖಜಾಂಚಿ ಆರ್.ಮನೋಹರ, ನಿರ್ದೇಶಕರಾದ ಡಾ.ಲಕ್ಷ್ಮೀದೇವಿ ಗೋಪಿನಾಥ್, ಬಿ.ಸುರೇಶ್ ಕುಮಾರ್, ರವಿಪ್ರಕಾಶ್ ಜೆನ್ನಿ, ಜಿ.ವಿ.ಕಿರಣ್ ಕುಮಾರ್, ವಿನೋದ್ ಕುಮಾರ್, ಮಾಜಿ ಅಧ್ಯಕ್ಷ ಜೆ.ಆರ್.ವಾಸುದೇವ್, ಡಿ.ಎಂ.ಶಂಕರಪ್ಪ, ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಿಗಳು ಭಾಗವಹಿಸಿದ್ದರು.