ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೂಡಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪತ್ರಕರ್ತರಾದ ವನಿತಾ ಚಂದ್ರಮೋಹನ್, ಮನೆಯಂಗಳದಲ್ಲಿ ಬೆಳೆಯಬಹುದಾದ ಜೌಷಧಿಯ ಸಸ್ಯಗಳ ಬಗ್ಗೆ ಅರಿವು ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ಒದಗಿಸಿದರು. ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ತೆರಳು ಸಂದರ್ಭ ಬಟ್ಟೆ ಬ್ಯಾಗ್ ಒಯ್ಯುವ ಮೂಲಕ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಸ್ವಚ್ಛವಾಗಿ ಹರಿಯುತ್ತಿರುವ ಕಾವೇರಿ ನದಿ ಕಲುಷಿತ ಆಗದಂತೆ ಎಚ್ಚರ ವಹಿಸಬೇಕು. ಯಾವುದೇ ರೀತಿಯ ತ್ಯಾಜ್ಯಗಳನ್ನು ನದಿಯಲ್ಲಿ ಹಾಕಬಾರದು. ಜಲ ಮೂಲಗಳು ಹಾಗೂ ನದಿಯಲ್ಲಿ ಕಸವನ್ನು ಬಿಸಾಡಬಾರದು. ನದಿ ನೀರು ಕಲುಷಿತಗೊಂಡಲ್ಲಿ ಅದನ್ನು ನೇರವಾಗಿ ಬಳಕೆ ಮಾಡುವ ಮೂಲಕ ರೋಗ ರುಜಿನಗಳು ತಕ್ಷಣ ಸೃಷ್ಟಿಯಾಗುವ ಸಾಧ್ಯತೆ ಉಂಟಾಗುತ್ತದೆ ಎಂದರು. ಕಲುಷಿತ ನೀರು ಬಳಕೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ತಕ್ಷಣ ಉಂಟಾಗುತ್ತದೆ ಎಂದು ಅವರು ತಿಳಿಸಿದರು.

ವಿಶೇಷ ಔಷಧೀಯ ಗಿಡ ಮರಗಳಾದ ದಾಳಿಂಬೆ, ತುಳಸಿ, ಅರಳಿಮರ, ಸೊರೆಕಾಯಿ ಕುಂಬಳ ಬಳ್ಳಿಗಳು, ಸೀಬೆ ಗಿಡ ನೆಲ್ಲಿ ಮತ್ತಿತರ ಔಷಧೀಯ ಸೊಪ್ಪು ಗಿಡಗಳಿಂದ ಮನೆಮದ್ದು ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಈ ಸಂದರ್ಭ ಶಾಲೆಯ ಶಿಕ್ಷಕರಾದ ನಾಗರಾಜು, ಶೈಲಜಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಮೇಲ್ವಿಚಾರಕ ಹರೀಶ್, ಸೇವಾ ಪ್ರತಿನಿಧಿ ಸುನಿತಾ, ಒಕ್ಕೂಟದ ಉಪಾಧ್ಯಕ್ಷರಾದ ಮೀರಾ ಇದ್ದರು.