ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

| Published : Dec 21 2023, 01:15 AM IST

ಸಾರಾಂಶ

ದೆಹಲಿಯಲ್ಲಿ ಉಂಟಾಗುವ ವಾಯುಮಾಲಿನ್ಯದಿಂದ ಜನರಿಗೆ ಉಸಿರಾಟಕ್ಕೆ ತೊಂದರೆಯಾಗುತ್ತಿದೆ. ರಾಜ್ಯ, ದೇಶಗಳಿಗೆ ಗಡಿ ಇದೆ, ಆದರೆ ಪರಿಸರಕ್ಕೆ ಯಾವುದೇ ಗಡಿ ಇರುವುದಿಲ್ಲ. ಪ್ರಪಂಚದ ಯಾವುದೇ ಭಾಗದಲ್ಲಿ ಪರಿಸರಕ್ಕೆ ಹಾನಿಯಾದರೂ ಸಹ ಹಲವು ಪ್ರದೇಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ವಾಯು ಮಾಲಿನ್ಯ, ಜಲ ಮಾಲಿನ್ಯದಿಂದ ಪರಿಸರ ಹಾಳಾಗುತ್ತಿದೆ. ನಾವು ಸೇವಿಸುವ ಆಹಾರ ಶುದ್ಧವಾಗಿಲ್ಲ. ಇಂದು ಎಲ್ಲರೂ ಸಾಮಾನ್ಯವಾಗಿ ಮಿನರಲ್ ವಾಟರ್ ಕುಡಿಯುತ್ತಿದ್ದೇವೆ. ಆದರೆ ಆ ನೀರಿನಲ್ಲಿ ಮಿನರಲ್ಸ್ ಇಲ್ಲ. ಗಾಳಿ, ನೀರು ಹಾಗೂ ಆಹಾರ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ದೇಶಿ ಆಹಾರ ಪದ್ಧತಿ ಅನುಸರಿಸಬೇಕು. ನೈಸರ್ಗಿಕವಾಗಿ ದೊರೆಯುವ ನೀರನ್ನು ಕುಡಿಯಬೇಕು. ನಾನು ನೈಸರ್ಗಿಕವಾಗಿ ದೊರೆಯುವ ನೀರು ಕುಡಿಯುತ್ತೇನೆ ಸದೃಢವಾಗಿದ್ದೇನೆ

ಕನ್ನಡಪ್ರಭ ವಾರ್ತೆ ಹಾವೇರಿ

ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಶಿಕ್ಷಣ, ಅಭಿವೃದ್ಧಿ ಹಾಗೂ ಸಬಲೀಕರಣಕ್ಕೆ ಆದ್ಯತೆ ನೀಡುವಂತೆ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವುದು ಬಹಳ ಮುಖ್ಯವಾಗಿದೆ ಎಂದು ಪರಿಸರಪ್ರೇಮಿ ರೊಬಿನ್‌ಸಿಂಗ್ ವಿಷ್ಣುಸಿಂಗ್ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಒಬ್ಬರಿಂದ ಸಾಧ್ಯವಿಲ್ಲ, ಪ್ರತಿಯೊಬ್ಬರೂ ಕೈಜೋಡಿಸಿದಾಗ ಪರಿಸರ ಸಂರಕ್ಷಣೆ ಸಾಧ್ಯ. ಸ್ವಚ್ಛ ಪರಿಸರ, ಶುದ್ಧ ಗಾಳಿ ಹಾಗೂ ಶುದ್ಧ ಆಹಾರದ ಜಾಗೃತಿ ಮೂಡಿಸಲು ದೇಶದಾದ್ಯಂತ ಸೈಕಲ್ ಜಾಥಾ ಕೈಗೊಳ್ಳಲಾಗಿದೆ ಎಂದರು.

ದೆಹಲಿಯಲ್ಲಿ ಉಂಟಾಗುವ ವಾಯುಮಾಲಿನ್ಯದಿಂದ ಜನರಿಗೆ ಉಸಿರಾಟಕ್ಕೆ ತೊಂದರೆಯಾಗುತ್ತಿದೆ. ರಾಜ್ಯ, ದೇಶಗಳಿಗೆ ಗಡಿ ಇದೆ, ಆದರೆ ಪರಿಸರಕ್ಕೆ ಯಾವುದೇ ಗಡಿ ಇರುವುದಿಲ್ಲ. ಪ್ರಪಂಚದ ಯಾವುದೇ ಭಾಗದಲ್ಲಿ ಪರಿಸರಕ್ಕೆ ಹಾನಿಯಾದರೂ ಸಹ ಹಲವು ಪ್ರದೇಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ವಾಯು ಮಾಲಿನ್ಯ, ಜಲ ಮಾಲಿನ್ಯದಿಂದ ಪರಿಸರ ಹಾಳಾಗುತ್ತಿದೆ. ನಾವು ಸೇವಿಸುವ ಆಹಾರ ಶುದ್ಧವಾಗಿಲ್ಲ. ಇಂದು ಎಲ್ಲರೂ ಸಾಮಾನ್ಯವಾಗಿ ಮಿನರಲ್ ವಾಟರ್ ಕುಡಿಯುತ್ತಿದ್ದೇವೆ. ಆದರೆ ಆ ನೀರಿನಲ್ಲಿ ಮಿನರಲ್ಸ್ ಇಲ್ಲ. ಗಾಳಿ, ನೀರು ಹಾಗೂ ಆಹಾರ ಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ದೇಶಿ ಆಹಾರ ಪದ್ಧತಿ ಅನುಸರಿಸಬೇಕು. ನೈಸರ್ಗಿಕವಾಗಿ ದೊರೆಯುವ ನೀರನ್ನು ಕುಡಿಯಬೇಕು. ನಾನು ನೈಸರ್ಗಿಕವಾಗಿ ದೊರೆಯುವ ನೀರು ಕುಡಿಯುತ್ತೇನೆ ಸದೃಢವಾಗಿದ್ದೇನೆ ಎಂದು ತಿಳಿಸಿದರು.

ನಮ್ಮಲ್ಲಿರುವ ನೈಸರ್ಗಿಕ ಸಂಪತ್ತು, ಅರಣ್ಯವನ್ನು ಕಾಪಾಡಿಕೊಳ್ಳಬೇಕು. ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಧ್ವನಿ ಎತ್ತಬೇಕು. ಪರಿಸರ ಸಂರಕ್ಷಣೆ ಸಂದೇಶ ದೇಶಕ್ಕೆ ನೀಡಬೇಕು. ಮಾಧ್ಯಮಗಳು ಪರಿಸರ ರಕ್ಷಿಸುವ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿಕೊಂಡರು.

ಇಲ್ಲಿಂದ ಗದಗ ಜಿಲ್ಲೆ ಲಕ್ಷ್ಮೇಶ್ವರಕ್ಕೆ ತೆರಳಲಿದ್ದು, ತೆಲಂಗಾಣ ಹಾಗೂ ಛತ್ತೀಸಗಢದ ಮೂಲಕ ಮಾರ್ಚ್ ೧೧, ೨೦೨೪ ರಂದು ಉತ್ತರ ಪ್ರದೇಶದ ಭೂಪಾಲ್‌ದಲ್ಲಿ ಸಮಾರೋಪಗೊಳ್ಳಲಿದೆ ಎಂದರು.

ನಾನು ಉತ್ತರ ಪ್ರದೇಶದ ಇಟಿವಾ ಗ್ರಾಮದನಾಗಿದ್ದು, ಸ್ನಾತಕೋತ್ತರ ಪದವೀಧರನಾಗಿದ್ದು, ಸಾಮಾನ್ಯ ಕೃಷಿಕನಾಗಿದ್ದಾನೆ. ದೇಶದ್ಯಾಂತ ಸಂಚರಿಸಿ ಅನೇಕ ವಿಷಯಗಳನ್ನು ಕಲಿತಿದ್ದೇನೆ. ಗ್ರಾಮಕ್ಕೆ ತೆರಳಿದನಂತರ ಹೊಸ ಹೊಸ ಪ್ರಯೋಗಗಳನ್ನು ಮಾಡುವುದಾಗಿ ತಿಳಿಸಿದರು.

ಸಂವಾದ:

ನಗರಕ್ಕೆ ಆಗಮಿಸಿದ ರೊಬಿನ್‌ಸಿಂಗ್ ವಿಷ್ಣುಸಿಂಗ್ ಜಿ.ಎಚ್. ಕಾಲೇಜಿನಲ್ಲಿ ಪರಿಸರ, ಕಾಡು, ನೀರು, ವಾಯು ಮಾಲಿನ್ಯದ ಕುರಿತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ವಿದ್ಯಾರ್ಥಿಗಳಿಗೆ ಪರಿಸರ, ನೀರು ಹಾಗೂ ಗಾಳಿಯ ಮಹತ್ವ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.

೨೬ ಸಾವಿರ ಕಿಮೀ ಪ್ರಯಾಣ:

ತಮಿಳುನಾಡಿನ ಕನ್ಯಾಕುಮಾರಿಯಿಂದ ಅಕ್ಟೋಬರ್ ೧೦, ೨೦೨೨ ರಿಂದ ಸೈಕಲ್ ಜಾಥಾ ಆರಂಭಿಸಲಾಗಿದ್ದು, ಈವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ಓಡಿಸ್ಸಾ, ಜಾರ್ಖಂಡ್‌, ಪಶ್ಚಿಮಬಂಗಾಳ, ಅಸ್ಸಾಂ, ಮೇಘಾಲಯ, ತ್ರಿಪುರಾ, ಮಿಜೋರಾಂ, ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಪಂಜಾಬ್‌, ದೆಹಲಿ, ರಾಜಸ್ಥಾನ, ಗುಜರಾತ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಲ್ಲಿ ಸಂಚರಿಸಲಾಗಿದೆ. ಈವರೆಗೆ ೨೬ಸಾವಿರ ಕಿಮೀ ಪ್ರಯಾಣಿಸಲಾಗಿದೆ. ಪ್ರತಿದಿನ ೧೧೦ರಿಂದ ೧೨೦ ಕಿಮೀ ಪ್ರಯಾಣಿಸಲಾಗುತ್ತಿದೆ ಎಂದರು.