ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಭವಿಷ್ಯದ ಉದ್ದೇಶದಿಂದ ಮುಂದಿನ ಪೀಳಿಗೆಗೂ ಶುದ್ಧ ಗಾಳಿ, ನೀರು ಲಭ‍್ಯವಾಗಿಸುವುದು ಸೇರಿದಂತೆ ಪರಿಸರ ಸಂರಕ್ಷಿಸುವ ಹೊಣೆ ಎಲ್ಲರ ಮೇಲಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಂಸ್ಥಾಪನೆಗೊಂಡು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭವಿಷ್ಯ ಕಾಲ ಉತ್ತಮವಾಗಿರಬೇಕಾದರೆ ಪರಿಸರ ಸಹ ಉಳಿಯಬೇಕು. ಎಲ್ಲರಿಗೂ ಪರಿಶುದ್ಧವಾದ ಗಾಳಿ ಮತ್ತು ನೀರು ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೆಲಸ ಮಾಡುತ್ತಿದೆ. ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ಎಲ್ಲರಿಗೂ ಅರಿವಾಗಿದೆ. ಇದರಿಂದ ಪಾಠ ಕಲಿತು ಆಮ್ಲಜನಕವನ್ನು ಕಾಪಾಡಿಕೊಳ್ಳಬೇಕಿದೆ. ಭೂಮಿ ಮತ್ತು ಅಂತರ್ಜಲಕ್ಕೆ ಮಾರಕವಾಗುತ್ತಿರುವ ರಾಸಾಯನಿಕ ವಸ್ತುಗಳ ಬಗ್ಗೆಯು ಅರಿವು ಉಂಟಾಗ ಬೇಕಿದೆ ಎಂದರು.ಕಾರ್ಖಾನೆ, ಉದ್ಯಮಗಳು ಉದ್ಯೋಗಕ್ಕೆ ಬೇಕು. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆ.ಐ.ಎ.ಡಿ.ಬಿ) ಮಂಡಳಿಯಿಂದ ಇಂದು ಸಾಕಷ್ಟು ಕೈಗಾರಿಕೆಗಳು ಬಂದಿವೆ. ಕಾರ್ಖಾನೆಗಳಿಂದ ಹೊರಸೂಸುವ ಮಾಲಿನ್ಯದ ಬಗ್ಗೆಯೂ ಎಚ್ಚರವಿರಬೇಕು. ಮುಂಜಾಗ್ರತಾ ಕ್ರಮಗಳು ಇರಬೇಕು ಎಂದು ತಿಳಿಸಿದರು.
ಕಾವೇರಿ ನದಿಗೆ ಒಳಚರಂಡಿ ನೀರು, ತ್ಯಾಜ್ಯಗಳು, ಇತರೆ ಸ್ವರೂಪದ ಮಲೀನಕಾರಕಗಳು ಸೇರ್ಪಡೆಗೊಂಡು ನೀರು ಕಲುಷಿತವಾಗುತ್ತಿದೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆಯಾ ಜಿಲ್ಲಾಡಳಿತ, ನಗರ ಸ್ಥಳೀಯ ಸಂಸ್ಥೆಗಳು ಮುನ್ನೆಚ್ಚರಿಕೆ ವಹಿಸಿ ತ್ಯಾಜ್ಯ ಸೇರ್ಪಡೆಯಾಗದಂತೆ ಕ್ರಮ ವಹಿಸಬೇಕು. ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ನದಿ ಮತ್ತು ಉಪ ನದಿಗಳ ನೀರಿನ ಗುಣಮಟ್ಟವನ್ನು ಮಾಪನ ಮಾಡಿ ವಿಶ್ಲೇಷಿಸಲಾಗುತ್ತಿದೆ. ಸತ್ತೇಗಾಲ ಗ್ರಾಮದಲ್ಲಿ ನಿರಂತರ ನೀರಿನ ಗುಣಮಟ್ಟ ಮಾಪನ ಕೇಂದ್ರವನ್ನು ಅಳವಡಿಸಲಾಗಿದೆ ಎಂದರು.ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಕಾವೇರಿ ವನ್ಯಜೀವಿ ವಲಯ ಅಭರಣ್ಯ, ಶ್ರೀ ಮಲೈ ಮಹದೇಶ್ವರ ವನ್ಯಜೀವಿ ಅಭಯ ಅರಣ್ಯ ಮತ್ತು ಬಿ.ಆರ್.ಟಿ ಸೂಕ್ಷ್ಮ ಪರಿಸರ ವಲಯಗಳಿವೆ. ಇಲ್ಲಿನ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ನಿರಂತರವಾಗಿ ಜಲ, ವಾಯು ಮತ್ತು ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಜಾಗೃತಿ ಮೂಡಿಸಲಾಗುತ್ತಿದೆ. ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಹನೂರು ತಾಲೂಕಿನ ಶ್ರೀ ಮಲೈಮಹದೇಶ್ವರ ಬೆಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ರಮ ಕೈಗೊಳ್ಳಲು ಎಲ್ಲ ನೆರವು ನೀಡಲಾಗುತ್ತದೆ ಎಂದರು.
1972ರಲ್ಲಿ ವಿಶ್ವಸಂಸ್ಥೆಯ ಸ್ಟಾಕ್ಹೋಮ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಇಂದಿರಾ ಗಾಂಧಿ ಅವರು ಇಡೀ ಜಗತ್ತಿಗೆ ಮೊದಲ ಬಾರಿಗೆ ಪರಿಸರ ಸಂರಕ್ಷಣೆಯ ಕುರಿತು ತಿಳಿಸಿದರು. ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಾರ್ವಜನಿಕರ ಮತ್ತು ಸಂಘ ಸಂಸ್ಥೆಗಳ ಸಹಕಾರ ಕೂಡ ಅತ್ಯಗತ್ಯವಾಗಿದೆ. ಪರಿಸರ ಉಳಿವಿಗಾಗಿ ಹಾಗೂ ಮಾಲಿನ್ಯ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಮತ್ತು ಸಂಘಸಂಸ್ಥೆಗಳನ್ನು ಗುರುತಿಸಿ ಇಂದಿರಾ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂ.ಎಸ್.ಐ.ಎಲ್. ಅಧ್ಯಕ್ಷ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು, ನದಿಗಳು ಕಲುಷಿತವಾಗಲು, ಪರಿಸರ ಮಾಲಿನ್ಯಗೊಳ್ಳಲು ಎಲ್ಲರೂ ಕಾರಣರಾಗುತ್ತಿದ್ದೇವೆ. ಶುದ್ದ ಗಾಳಿ, ನೀರು ಮುಂದಿನ ದಿನಗಳಲ್ಲಿಯೂ ಸಿಗಬೇಕಾದರೆ ಪರಿಸರ ಸಂರಕ್ಷಣೆ ಮಾಡುವತ್ತ ಎಲ್ಲರು ಗಮನಹರಿಸಬೇಕಿದೆ. ಗಿಡ ಮರಗಳನ್ನು ಬೆಳೆಸಿ ಪೋಷಿಸಬೇಕಿದೆ ಎಂದರು.
ಚಾಮರಾಜನಗರ ಜಿಲ್ಲೆಯು ಅರಣ್ಯ ಪ್ರದೇಶಗಳಿಂದ ಹೆಚ್ಚು ಕೂಡಿದ್ದು, ಉತ್ತಮ ಪರಿಸರ ಹೊಂದಿದೆ. ಪರಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಇಂದಿರಾ ಗಾಂಧಿಯವರು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪಿಸಿದರು. ಮಂಡಳಿ ಸ್ಥಾಪನೆಯಾಗಿ 50 ವರ್ಷಗಳು ಆಗಿರುವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಶುದ್ದ ಪರಿಸರದಿಂದ ಆರೋಗ್ಯವು ಉತ್ತಮವಾಗುತ್ತದೆ. ಈ ದಿಸೆಯಲ್ಲಿ ಮಂಡಳಿ ಜಾಗೃತಿ ಮೂಡಿಸುತ್ತಿದೆ ಎಂದು ತಿಳಿಸಿದರು.ಇದೇ ವೇಳೆ ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿ ಶ್ರಮಿಸುತ್ತಿರುವ ಸೋಲಿಗ ಬುಡಕಟ್ಟು ಸಮುದಾಯದೊಂದಿಗೆ ಸಾಂಪ್ರದಾಯಿಕ ಜ್ಞಾನ ಸಮೃದ್ದಗೊಳಿಸಿದ ಏಟ್ರಿ ಸಂಸ್ಥೆಯ ಡಾ. ಸಿದ್ದಪ್ಪ ಶೆಟ್ಟಿ, ಕೊಳ್ಳೇಗಾಲದಲ್ಲಿ ಪರಿಸರ ಸಂರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ರಂಗಜೋಳಿಗೆ ಸಂಸ್ಥಾಪಕರಾದ ಮುಡಿಗುಂಡ ಜಿ. ಮೂರ್ತಿ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಪ್ಲಾಸ್ಟಿಕ್ ಉಪಯೋಗಿಸದಂತೆ ಅರಿವು ಮೂಡಿಸಿರುವ ಇಕೋ ವೈಲ್ಡ್ ಫೌಂಡೇಶನ್ ನ ಭರತ್ ಮಹದೇವ್ ಅವರಿಗೆ ಇಂದಿರ ಪ್ರಿಯದರ್ಶಿನಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆಗೆ ಮುಂದಾಗಿರುವ ಪೌರಕಾರ್ಮಿಕ ಚಾಮರಾಜನಗರ ನಗರಸಭೆಯ ವರದರಾಜು, ಕಮಲಮ್ಮ, ಕೊಳ್ಳೇಗಾಲ ನಗರಸಭೆಯ ರಾಜು, ಜಗನ್ನಾಥ್, ಗುಂಡ್ಲುಪೇಟೆ ಪುರಸಭೆಯ ಮೂರ್ತಿಕುಮಾರ್, ರಾಧ, ಯಳಂದೂರು ಪಟ್ಟಣ ಪಂಚಾಯಿತಿಯ ನಾಗಮ್ಮ, ರಂಗಸ್ವಾಮಿ, ಹನೂರು ಪಟ್ಟಣ ಪಂಚಾಯಿತಿಯ ರಾಮಿ, ಸೋಮ ಅವರನ್ನು ಸನ್ಮಾನಿಸಲಾಯಿತು.ಸುವರ್ಣ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ತನುಷ್ಕಾ, ಚೇತನ್ ಗೌಡ, ಸೆರುಸಿನ್ ಜಾನ್, ಮಹಾಲಕ್ಷ್ಮಿ, ಅಮುದ. ಎಸ್, ರೋಹಿತ್. ಬಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಆಶಾ.ಎ, ತನ್ಮಯ್ ಶ್ರೀಕಾಂತ್, ಚೆರೀಶ್ ಎಂ., ಅನುಷಾ. ಸಿ.ಎಂ, ಆಯೇಷಾ ಅವರನ್ನು ಸಹ ಗೌರವಿಸಲಾಯಿತು.
ನಗರಸಭೆ ಅಧ್ಯಕ್ಷ ಎಸ್. ಸುರೇಶ್, ಉಪಾಧ್ಯಕ್ಷೆ ಮಮತ, ಸದಸ್ಯ ಚಂದ್ರಶೇಖರ್, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್.ಎಸ್. ಲಿಂಗರಾಜು, ಜಿಲ್ಲಾ ಪರಿಸರ ಅಧಿಕಾರಿ ಕೆ.ಎಲ್. ಸವಿತ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))