ಸಾರಾಂಶ
ತುಮಕೂರು: ಮನುಷ್ಯ ಮತ್ತು ಸಕಲ ಜೀವಸಂಕುಲಗಳು ಬದುಕುಳಿಯಬೇಕಾದರೆ ಪರಿಸರವನ್ನು ಸಂರಕ್ಷಣೆ ಮಾಡುವ ಅಗತ್ಯವಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಿಳಿಸಿದರು. ನಗರದ ಎಂಪ್ರೆಸ್ ಶಾಲೆ ಸಭಾಂಗಣದಲ್ಲಿಂದು ನಡೆದ ೭೦ನೇ ವನ್ಯಜೀವಿ ಸಪ್ತಾಹ ಕಾರ್ಯ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನು ನಾಶಮಾಡಿರುವ ಪರಿಣಾಮ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಶೇಕಡಾ 15 ರಷ್ಟು ಮಾತ್ರ ಹಸಿರು ಪದರವಿದ್ದು, ಹೆಚ್ಚಿನ ಗಿಡ-ಮರಗಳನ್ನು ಬೆಳೆಸಿ ಸಂರಕ್ಷಿಸಿ ಹಸಿರು ಪದರದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಅರಣ್ಯ ಪ್ರದೇಶ ವಿಸ್ತರಣೆ ಮಾಡಬೇಕು. ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ನೆಡಲಾಗುವ ಲಕ್ಷಾಂತರ ಗಿಡಗಳನ್ನು ಸಂರಕ್ಷಿಸಿ ಬೆಳಸುವುದರ ಮೂಲಕ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವನ್ನು ವಿಸ್ತರಿಸಬೇಕು ಎಂದು ತಿಳಿಸಿದರು.
ವನ್ಯಜೀವಿ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ವನ್ಯ ಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಗಳಿಸಿದ ಶಿವಕುಮಾರ್ ನಟರಾಜನ್, ದ್ವಿತೀಯ ಸ್ಥಾನ ಗಳಿಸಿದ ಪ್ರಶಾಂತ್ ಬಿ. ನರ್ವಾಣಿ ರಾವ್, ತೃತೀಯ ಸ್ಥಾನ ಗಳಿಸಿದ ಕಿರಣ್ ವಾಸುದೇವ್ ಮತ್ತು ಉಮಾಶಂಕರ್ ಅವರಿಗೆ ಬಹುಮಾನ ವಿತರಿಸಲಾಯಿತು.ಅರಣ್ಯ ಸಂರಕ್ಷಿಸುವ ಹಾಗೂ ಅರಣ್ಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವನ್ಯ ಜೀವಿ ಛಾಯಾಗ್ರಾಹಕರಾದ ಬಿ.ವಿ. ಗುಂಡಪ್ಪ, ಡಾ: ಅಭಿಜಿತ್, ಡಾ: ಕೆ.ವಿ.ನಟರಾಜ್, ಹೇಮಂತ್, ಪ್ರೊ. ರುದ್ರಮೂರ್ತಿ ಹಾಗೂ ಜಿ.ಎ. ಚಂದುಬಾಬು; ಮಕ್ಕಳ ತಜ್ಞ ಹಾಗೂ ವನ್ಯ ಜೀವಿ ಛಾಯಾಗ್ರಾಹಕ ಡಾ: ಎಂ.ಎಲ್. ರಜಿತ್; ಹವ್ಯಾಸಿ ಪಕ್ಷಿ ಛಾಯಾಗ್ರಾಹಕ ಡಾ: ಬಿ. ಉಮಾಶಂಕರ್; ವಾರ್ಕೋ ಸಂಸ್ಥಾಪಕ ಕಾರ್ತಿಕ್ ಸಿಂಗ್; ವೈಲ್ಡ್ಲೈಫ್ ಅವೇರ್ ನೇಚರ್ ಕ್ಲಬ್ ಸದಸ್ಯ ಎಂ. ಮಲ್ಲಿಕಾರ್ಜುನ್, ವಿಪಿನ್ ರಾಯ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಸ್ವಾಗತಿಸಿದರು. ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವರಾಜ್ ವಂದಿಸಿದರು. ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಎನ್‌ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.