ಸಾರಾಂಶ
ಬ್ಯಾಡಗಿ: ಪರಿಸರ ರಕ್ಷಣೆ ದೇಶದ ಯುವಕರ ಬಹುದೊಡ್ಡ ಜವಾಬ್ದಾರಿಯಾಗಿದ್ದು, ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.
ತಾಲೂಕಿನ ಮೋಟೆಬೆನ್ನೂರು ಗ್ರಾಮದ ಬಸವೇಶ್ವರ ದೇವಸ್ಥಾನದ ಟ್ರಸ್ಟ್ ಆಶ್ರಯದಲ್ಲಿ ಜರುಗಿದ ಸಾಮೂಹಿಕ ವಿವಾಹದಲ್ಲಿ ನೂತನ ವಧುವರರಿಗೆ ಮದುವೆ ಪ್ರಮಾಣಪತ್ರದೊಂದಿಗೆ ಸಸಿಗಳನ್ನು ವಿತರಿಸಿ ಅವರು ಮಾತನಾಡಿದರು. ಅಭಿವೃದ್ಧಿಯ ನೆಪದಲ್ಲಿ ಪರಿಸರಕ್ಕೆ ಸಾಕಷ್ಟು ಹಾನಿಯಾಗುತ್ತಿದ್ದು, ಅತಿವೃಷ್ಟಿ ಮತ್ತು ಅನಾವೃಷ್ಟಿಯಂತಹ ತೊಂದರೆಗಳನ್ನು ಈಗಾಗಲೇ ಅನುಭವಿಸುತ್ತಿದ್ದೇವೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡಬೇಕಾದ ಜವಾಬ್ದಾರಿ ಯುವ ಸಮೂಹದ ಮೇಲಿದೆ ಎಂದರು.ಮಾನವ ಹಾಗೂ ಕಾಡುಪ್ರಾಣಿ ಸೇರಿದಂತೆ ಎಲ್ಲರ ಜೀವನವೂ ಪರಿಸರದ ಮೇಲೆ ಅವಲಂಬಿಸಿದೆ. ಪರಿಸರ ಒಂದಿಲ್ಲೊಂದು ರೀತಿಯಲ್ಲಿ ನಾಶವಾಗುತ್ತಿದೆ. ನಿರ್ಲಕ್ಷಿಸಿದಲ್ಲಿ ಒಂದಿಲ್ಲೊಂದು ಪರಿಣಾಮ ಎದುರಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕಳೆದ 10 ವರ್ಷಗಳಿಂದ ನಡೆದುಕೊಂಡು ಬಂದಿರುವ ಗ್ರಾಮದ ದೇವಸ್ಥಾನ ಸಮಿತಿ ವತಿಯಿಂದ ಬಸವೇಶ್ವರ ಜಯಂತ್ಯುತ್ಸವದ ಅಂಗವಾಗಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನೂತನ ವಧು-ವರರಿಗೆ ಟ್ರಸ್ಟ್ ವತಿಯಿಂದ ತಾಳಿ, ಬಟ್ಟೆ, ಬಾಸಿಂಗ್ ಸೇರಿದಂತೆ ಕೆಲವು ಉಡುಗೊರೆಗಳನ್ನು ಉಚಿತವಾಗಿ ನೀಡಿದ್ದೇವೆ. ಇದರೊಂದಿಗೆ ಪರಿಸರ ರಕ್ಷಣೆ ಮಾಡಬೇಕೆಂಬ ಉದ್ದೇಶದಿಂದ ದಂಪತಿಗಳಿಗೆ ಸಸಿಗಳನ್ನು ನೀಡುವ ಸಂಕಲ್ಪ ಮಾಡಿದ್ದು, ಮದುವೆಯ ಸವಿನೆನಪಿಗಾಗಿ ಮನೆ, ಹೊಲ ತಮಗೆ ಅನುಕೂಲವಾಗುವ ಕಡೆಯಲ್ಲಿ ಸಸಿಗಳನ್ನು ನೆಟ್ಟು ಬೆಳೆಸಿ, ಭವಿಷ್ಯದಲ್ಲಿ ನಿಮ್ಮ ಮಕ್ಕಳಂತೆ ಅವುಗಳನ್ನು ರಕ್ಷಿಸುವಂತೆ ತಿಳಿವಳಿಕೆ ನೀಡಿದರು.
ಬಸವೇಶ್ವರ ದೇವಸ್ಥಾನ ಟ್ರಸ್ಟ್ ಪ್ರಮುಖರಾದ ಮಲ್ಲಿಕಾರ್ಜುನ ಹಾವನೂರು, ದಾನಪ್ಪ ಬಳ್ಳಾರಿ, ಈರಪ್ಪ ಹಾದರಗೇರಿ, ಶಿವಪ್ಪ ಗುಂಡೇನಹಳ್ಳಿ, ಮಂಜುನಾಥ ಬೆನಕನಕೊಂಡ, ಶಿವಬಸಪ್ಪ ಕುಳೇನೂರು, ನಾಗರಾಜ ಹಾವನೂರು, ವಿಜಯ ಬಳ್ಳಾರಿ ಇದ್ದರು.;Resize=(128,128))
;Resize=(128,128))