ಹಾವೇರಿ: ಪರಿಸರವು ಮಾನವ ಜೀವನದ ಮೂಲ ಆಧಾರವಾಗಿದೆ. ಗಾಳಿ, ನೀರು, ಮಣ್ಣು, ಸಸ್ಯಗಳು ಮತ್ತು ಜೀವಜಾಲಗಳ ಸಮತೋಲನದಿಂದ ಪರಿಸರ ನಿರ್ಮಾಣವಾಗಿದ್ದು, ಇವುಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.ಸ್ಥಳೀಯ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಶುಕ್ರವಾರ ಜಿಲ್ಲಾ ಆಡಳಿತ, ಸಾಮಾಜಿಕ ಅರಣ್ಯ ವಿಭಾಗದಿಂದ ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ನಗರೀಕರಣ, ಕೈಗಾರಿಕೀಕರಣ, ಅರಣ್ಯ ನಾಶ ಮತ್ತು ಮಾಲಿನ್ಯದಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಹವಾಮಾನ ಬದಲಾವಣೆ, ಅನಿಯಮಿತ ಮಳೆ, ಬರಗಾಲ, ಪ್ರವಾಹ ಹಾಗೂ ತಾಪಮಾನದ ಏರಿಕೆ ಮುಂತಾದ ಸಮಸ್ಯೆಗಳು ಪರಿಸರ ಅಸಮತೋಲನಕ್ಕೆ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.ಪರಿಸರ ಸಂರಕ್ಷಣೆಗೆ ಗಿಡ ನೆಡುವುದು ಅತ್ಯಂತ ಸರಳ ಹಾಗೂ ಪರಿಣಾಮಕಾರಿ ಮಾರ್ಗವಾಗಿದೆ. ಒಂದು ಗಿಡವು ಬೆಳೆಯುತ್ತಾ ದೊಡ್ಡ ಮರವಾದಾಗ ಪರಿಸರಕ್ಕೆ ಅನೇಕ ರೀತಿಯಲ್ಲಿ ಸಹಕಾರಿಯಾಗುತ್ತದೆ. ಮರಗಳು ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೆಡ್ ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಇದರಿಂದ ಗಾಳಿಯ ಗುಣಮಟ್ಟ ಸುಧಾರಿಸಿ ಜೀವಿಗಳ ಆರೋಗ್ಯ ಕಾಪಾಡಲು ಸಹಕಾರಿಯಾಗುತ್ತದೆ. ಒಂದು ಮರವು ತನ್ನ ಜೀವಿತಾವಧಿಯಲ್ಲಿ ಸಾವಿರಾರು ಕಿಲೋಗ್ರಾಂಗಳಷ್ಟು ಕಾರ್ಬನ್ ಅನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದ್ದು, ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಗಿಡಗಳು ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತವೆ. ಮರಗಳ ಬೇರುಗಳು ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಮಳೆ ಮತ್ತು ಗಾಳಿಯಿಂದ ಮಣ್ಣು ಕೊಚ್ಚಿಹೋಗುವುದನ್ನು ತಡೆಯುತ್ತವೆ. ಇದರಿಂದ ಕೃಷಿ ಭೂಮಿಯ ಫಲವತ್ತತೆ ಉಳಿಯುತ್ತದೆ. ಮರಗಳು ಮಳೆಯ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಅಂತರ್ಜಲ ಮಟ್ಟವನ್ನು ಕಾಪಾಡಲು ಸಹಕಾರಿಯಾಗುತ್ತವೆ. ನೆರಳು ನೀಡುವ ಮೂಲಕ ಪರಿಸರದ ತಾಪಮಾನವನ್ನು ಕಡಿಮೆ ಮಾಡಿ, ಸ್ಥಳೀಯ ಹವಾಮಾನವನ್ನು ಸಮತೋಲನದಲ್ಲಿಡುತ್ತವೆ ಎಂದರು.ಪ್ರತಿಯೊಬ್ಬ ವ್ಯಕ್ತಿಯ ತನ್ನ ಜೀವನದಲ್ಲಿ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದನ್ನು ಪೋಷಿಸುವ ಸಂಕಲ್ಪ ಮಾಡಬೇಕು. ಶಾಲೆಗಳು, ಕಾಲೇಜುಗಳು, ಸರ್ಕಾರಿ ಕಚೇರಿಗಳು, ಗ್ರಾಮ ಪಂಚಾಯಿತಿಗಳು ಹಾಗೂ ಸಂಘ-ಸAಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಗಿಡ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಗಿಡ ನೆಡುವುದಷ್ಟೇ ಅಲ್ಲದೆ, ಅವುಗಳನ್ನು ಸಂರಕ್ಷಿಸಿ ಬೆಳೆಸುವುದಕ್ಕೂ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ಪಾಟೀಲ ಮಾತನಾಡಿ, ಸಾಮಾಜಿಕ ಅರಣ್ಯ ವಿಭಾಗ ವತಿಯಿಂದ 2026-27ನೇ ಸಾಲಿನಲ್ಲಿ ಸಾರ್ವಜನಿಕರಿಗಾಗಿ/ ರೈತರಿಗೆ 1,22,000 ವಿವಿಧ ಜಾತಿಯ ಸಸಿಗಳನ್ನು ವಿತರಿಸಲಾಗುತ್ತಿದೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವಿವಿಧ ಜಾತಿಯ ಸಸಿ ನೆಡುವ ಕಾರ್ಯಕ್ರಮವನ್ನು ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಹಮ್ಮಿಕೊಳ್ಳಲಾಗಿದೆ. ರಸ್ತೆ ಬದಿ, ಶಾಲೆ ಕಾಲೇಜು ಆವರಣ, ಸರ್ಕಾರಿ ಜಮೀನುಗಳಲ್ಲಿ ಸಸಿನೆಡುವ ಕಾರ್ಯ ಆರಂಭವಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಡಾ. ಪುನೀತ್. ಬಿ. ಆರ್., ಮುಖ್ಯ ಯೋಜನಾಧಿಕಾರಿ ಎಸ್.ವೈ. ಮೀಶಿ, ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನವರ, ಯೋಜನಾ ಅಂದಾಜು ಮೌಲ್ಯಮಾಪನಾಧಿಕಾರಿ ಕುಮಾರ ಮಣ್ಣವಡ್ಡರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಖೇಮಸಿಂಗ್ ರಾಠೋಡ್ ಇತರರು ಉಪಸ್ಥಿತರಿದ್ದರು. ಪರಿಸರ ಸಂರಕ್ಷಣೆ ಒಂದು ದಿನದ ಕಾರ್ಯಕ್ರಮವಲ್ಲ, ಅದು ನಿರಂತರ ಜವಾಬ್ದಾರಿಯಾಗಿದೆ. ನಮ್ಮ ಪರಿಸರವನ್ನು ನಾವು ಇಂದು ಕಾಪಾಡಿದರೆ, ಮುಂದಿನ ಪೀಳಿಗೆಗೆ ಆರೋಗ್ಯಕರ ಮತ್ತು ಸುಸ್ಥಿರ ಭವಿಷ್ಯವನ್ನು ನೀಡಲು ಸಾಧ್ಯವಾಗುತ್ತದೆ. ಆದ್ದರಿಂದ ಎಲ್ಲರೂ ಕೈಜೋಡಿಸಿ ಪರಿಸರ ಸಂರಕ್ಷಣೆಗೆ ಮುಂದಾಗೋಣ. ಹೆಚ್ಚಿನ ಗಿಡಗಳನ್ನು ನೆಟ್ಟು ಹಸಿರು ಭೂಮಿಯ ನಿರ್ಮಾಣಕ್ಕೆ ಸಹಕರಿಸೋಣ ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.