ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನ.16ರಂದು ಸುದೀರ್ಘ ಮನವಿ ಪತ್ರ ಸಲ್ಲಿಸಿರುವ ಚೌಡಪ್ಪ, ಚಿಕ್ಕಬಳ್ಳಾಪುರ- ಗೌರಿಬಿದನೂರು ಭಾಗದ ಒಟ್ಟು 2,285 ಕೆರೆಗಳಿಗೆ 98 ಟಿಎಂಸಿ ನೀರಿನ ಅಗತ್ಯವಿದೆ. ಆದರೆ 235 ಕೆರೆಗಳಿಗೆ ಮಾತ್ರ 4. 237 ಟಿಎಂಸಿ ನೀರು ತಲುಪಿದೆ. ಉಳಿದ 2,050 ಕೆರೆಗಳಿಗೆ ನೀರು ಹರಿಸುವ ಯೋಜನೆ ಏನಾಯಿತು ಎಂಬುದು ಅವರ ಪ್ರಶ್ನೆಯಾಗಿದೆ.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಕಳೆದ ಮೂರು ದಶಕಗಳಲ್ಲಿ ಈ ಭಾಗಕ್ಕೆ 900 ಟಿಎಂಸಿ ನೀರು ಹರಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದ್ದರೂ, ವಾಸ್ತವವಾಗಿ ತಲುಪಿರುವುದು ಕೇವಲ 24.08 ಟಿಎಂಸಿ ಮಾತ್ರ. ಹಾಗಾದರೆ ಉಳಿದ 875 ಟಿಎಂಸಿ ನೀರು ಎಲ್ಲಿ ಹೋಯಿತು, ನೀರಾವರಿ ಯೋಜನೆಗಳಿಗಾಗಿ ವೆಚ್ಚ ಮಾಡಿರುವ ಸಾವಿರಾರು ಕೋಟಿ ರುಪಾಯಿ ಹಣದ ಲೆಕ್ಕ ಕೊಡುವವರು ಯಾರು ಎಂದು ಪ್ರಶ್ನಿಸಿರುವ ಪರಿಸರವಾದಿ ಚೌಡಪ್ಪ, ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿನ ಅಕ್ರಮ ಹಾಗೂ ಭ್ರಷ್ಟಾಚಾರದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿ ನಗರದ ತಾಲೂಕು ಕಚೇರಿ ಎದುರು ಸೋಮವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.ತಾಲೂಕಿನ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸಬೇಕು, ನೀರಾವರಿ ಯೋಜನೆಗಳ ಹೆಸರಿನಲ್ಲಿ ನಡೆದಿರುವ ಕಾಮಗಾರಿಗಳ ಸಂಪೂರ್ಣ ಲೆಕ್ಕಪತ್ರವನ್ನು ಸಾರ್ವಜನಿಕರ ಮುಂದಿಡಬೇಕು ಎಂಬುದು ಪ್ರತಿಭಟನೆಯ ಪ್ರಮುಖ ಉದ್ದೇಶವಾಗಿದೆ. ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿರುವ ಚೌಡಪ್ಪ ಅವರ ಹೋರಾಟದ ಉದ್ದೇಶವನ್ನು ತಿಳಿದುಕೊಳ್ಳಲು ತಾಲೂಕು ಕಚೇರಿಗೆ ಆಗಮಿಸುತ್ತಿದ್ದ ಸಾರ್ವಜನಿಕರು ಸ್ಥಳದಲ್ಲಿ ನಿಂತು ಅವರೊಂದಿಗೆ ಮಾತುಕತೆ ನಡೆಸಿ, ನೀರಾವರಿ ಸಮಸ್ಯೆ ಹಾಗೂ ಹೋರಾಟದ ಆಶಯಗಳಿಗೆ ಬೆಂಬಲ ವ್ಯಕ್ತಪಡಿಸುತ್ತಿರುವುದು ಗಮನ ಸೆಳೆಯಿತು.
ಅಂಕಿ- ಅಂಶಗಳೊಂದಿಗೆ ಸರ್ಕಾರಕ್ಕೆ ಪ್ರಶ್ನೆ:ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನ.16ರಂದು ಸುದೀರ್ಘ ಮನವಿ ಪತ್ರ ಸಲ್ಲಿಸಿರುವ ಚೌಡಪ್ಪ, ಚಿಕ್ಕಬಳ್ಳಾಪುರ- ಗೌರಿಬಿದನೂರು ಭಾಗದ ಒಟ್ಟು 2,285 ಕೆರೆಗಳಿಗೆ 98 ಟಿಎಂಸಿ ನೀರಿನ ಅಗತ್ಯವಿದೆ. ಆದರೆ 235 ಕೆರೆಗಳಿಗೆ ಮಾತ್ರ 4. 237 ಟಿಎಂಸಿ ನೀರು ತಲುಪಿದೆ. ಉಳಿದ 2,050 ಕೆರೆಗಳಿಗೆ ನೀರು ಹರಿಸುವ ಯೋಜನೆ ಏನಾಯಿತು ಎಂಬುದು ಅವರ ಪ್ರಶ್ನೆಯಾಗಿದೆ.
ಗೌರಿಬಿದನೂರು ತಾಲೂಕಿನ 1,730 ಕೆರೆಗಳಿಗೆ 66 ಟಿಎಂಸಿ ನೀರು ಅಗತ್ಯವಿದ್ದರೆ, ಕೇವಲ 60 ಕೆರೆಗಳಿಗೆ 3. 936 ಟಿಎಂಸಿ ನೀರು ತಲುಪಿದೆ. ಶಿಡ್ಲಘಟ್ಟ ತಾಲೂಕಿನ 1,556 ಕೆರೆಗಳಿಗೆ 51 ಟಿಎಂಸಿ ನೀರು ಬೇಕಾಗಿದ್ದು, 272 ಕೆರೆಗಳಿಗೆ ಮಾತ್ರ 5.564 ಟಿಎಂಸಿ ನೀರು ಹರಿಸಲಾಗಿದೆ ಎಂದು ಅಂಕಿ- ಅಂಶಗಳನ್ನು ಉಲ್ಲೇಖಿಸಿದ್ದಾರೆ.ಕೋರ್ಟ್ ಆದೇಶಗಳಿದ್ದರೂ ನೀರಿಲ್ಲ:
ನೀರಾವರಿ ಸೌಲಭ್ಯ ಕಲ್ಪಿಸುವ ಸಂಬಂಧ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಆದೇಶಗಳಾಗಿದ್ದರೂ ಅವು ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ಚೌಡಪ್ಪ ಆರೋಪಿಸಿದ್ದಾರೆ.ನಾಲ್ಕು ಪ್ರಮುಖ ಬೇಡಿಕೆಗಳು:
ನೀರಾವರಿ ಯೋಜನೆಗಳಲ್ಲಿನ ಅಕ್ರಮಗಳ ಕುರಿತು ನ್ಯಾಯಾಂಗ ತನಿಖಾ ಆಯೋಗ ರಚಿಸಬೇಕು. ಕಳೆದ 40 ವರ್ಷಗಳಲ್ಲಿ ನಡೆದಿರುವ ಎಲ್ಲ ನೀರಾವರಿ ಕಾಮಗಾರಿಗಳ ಲೆಕ್ಕಪತ್ರಗಳನ್ನು ಮಹಾಲೇಖಪಾಲರ ತನಿಖೆಗೆ ಒಪ್ಪಿಸಬೇಕು. ಪ್ರತಿ ಕೆರೆಗೆ ಎಷ್ಟು ಪ್ರಮಾಣದ ನೀರು ಹರಿಸಲಾಗಿದೆ ಎಂಬುದರ ಕುರಿತು ವೈಜ್ಞಾನಿಕವಾಗಿ ವಾಟರ್ ಬಜೆಟಿಂಗ್ ನಡೆಸಿ ಶ್ವೇತಪತ್ರ ಹೊರಡಿಸಬೇಕು. ನೀರು ತಲುಪದೆ ಬಾಕಿ ಉಳಿದಿರುವ ಎಲ್ಲ ಕೆರೆಗಳಿಗೆ ತಕ್ಷಣ ನೀರು ತುಂಬಿಸುವ ಕ್ರಮ ಕೈಗೊಳ್ಳಬೇಕು ಎಂಬುದು ಅವರ ಪ್ರಮುಖ ನಾಲ್ಕು ಬೇಡಿಕೆಗಳಾಗಿವೆ.ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಕೆ.ಎಂ. ಅರವಿಂದ್ ಪ್ರತಿಭಟನಾಕಾರರ ಮನವಿ ಸ್ವೀಕರಿಸಿ, ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದಾರೆ. ಪೊಲೀಸ್ ಇಲಾಖೆ ಹಾಗೂ ತಾಲೂಕು ಆಡಳಿತದಿಂದ ಸ್ಥಳದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.