ಸಾರಾಂಶ
ರಾಂ ಅಜೆಕಾರುಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳದಿಂದ ಮಾಳ ವರೆಗಿನ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ವೇಗ ಪಡೆಯುತಿದ್ದು ಹೆದ್ದಾರಿ ಅಕ್ಕಪಕ್ಕದ ಕೆಲವು ಮರಗಳ ಸ್ಥಳಾಂತರಕ್ಕೆ ಹರಸಾಹಸ ನಡೆಯುತ್ತಿದೆ.ಒಟ್ಟು 1634 ಮರಗಳು ಅಗಲೀಕರಣಕ್ಕೆ ಬಲಿಯಾಗಲಿದ್ದು ಅದರಲ್ಲಿ1051 ಮರಗಳನ್ನು ಕಡಿಯಲಾಗಿದೆ. ಉಳಿದ 508 ಮರಗಳನ್ನು ಸ್ಥಳಾಂತರಕ್ಕೆ ಮಂಗಳೂರಿನ ಪರಿಸರವಾದಿ ಜೀತ್ ಮಿಲನ್ ರೋಚ್ ಹಾಗೂ ಬಜಗೋಳಿ ಆರತಿ ಅಶೋಕ್ ಅವರ ತಂಡ ಹಗಲಿರುಳು ಶ್ರಮಿಸುತ್ತಿದೆ.
ಮರಗಳ ಸ್ಥಳಾಂತರ: ಅರಣ್ಯ ಇಲಾಖೆ ಹಾಗೂ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಖಾಸಗಿ ಕಂಪೆನಿಯು ಕ್ರೈನ್ ಜೆಸಿಬಿ ಹಾಗೂ ಹಿಟಾಚಿ ಒದಗಿಸಿದ್ದು ಮಂಗಳೂರಿನ ಪರಿಸರವಾದಿ ಜೀತ್ ಮಿಲನ್ ರೋಚ್ ಹಾಗೂ ಬಜಗೋಳಿ ಅರತಿ ಅಶೋಕ್ ಅವರ ತಂಡ ಮರಗಳ ಸ್ಥಳಾಂತರದ ನೇತೃತ್ವ ಹೊತ್ತಿದ್ದಾರೆ. ಪೈಕಸ್ ಜಾತಿಯ ಐದು ವರ್ಷ ಮೇಲ್ಪಟ್ಟ ಮರಗಳನ್ನು ಸ್ಥಳಾಂತರಗೊಳಿಸಲಾಗುತ್ತಿದೆ. ಈಗಾಗಲೇ 20 ಅರಳಿಮರ ಸೇರಿದಂತೆ ಉಳಿದ ಪೈಕಸ್ ಜಾತಿಯ ಮರಗಳು ಹಾಗೂ ಪಾರಂಪರಿಕ ಮರಗಳನ್ನು ಸ್ಥಳಾಂತರ ಮಾಡುತಿದ್ದಾರೆ.ನಿರ್ವಣೆ ಕಷ್ಟ: ಈ ಬಾರಿ ಬಿಸಿಲಿನ ಝಳ ಹೆಚ್ಚುತಿದ್ದು ಮರಗಳಿಗೆ ನೀರಿನ ಲಭ್ಯ ತೆ ಕಷ್ಯ ಸಾಧ್ಯ. ಈಗಾಗಲೇ ಸ್ಥಳಾಂತರಿತ ಪೈಕಸ್ ಜಾತಿಯ ಮರಗಳು ಕೆಲವು ಪರಿಸರ ಪ್ರಿಯರು ದತ್ತು ತೆಗೆದುಕೊಂಡು ನೀರು, ಗೊಬ್ಬರ ವ್ಯವಸ್ಥೆಗಳನ್ನು ಕಲ್ಪಿಸುತಿದ್ದಾರೆ. ಈ ಮರಗಳು ಎರಡು ವರ್ಷಗಳ ಕಾಲ ನಿರ್ವಹಣೆ ಮಾಡಿದರೆ ಉಳಿಸಲು ಸಾಧ್ಯ. ಅದರಲ್ಲೂ ಸ್ಥಳಾಂತರಿತ ಮರಗಳ ಪೈಕಿ ಶೇ.90ರಷ್ಟು ಮರಗಳು ಜೀವಂತವಾಗಿ ಉಳಿಯುತ್ತವೆ .ಆದರೆ ಬಿರು ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಕಾಡುವುದರಿಂದ ನಿರ್ವಹಣೆ ವೆಚ್ಚ ಹೆಚ್ಚು.
ದತ್ತು ಪಡೆಯಲು ಪರಿಸರ ಪ್ರಿಯರ ಮನವಿ: ಸ್ಥಳಾಂತರಗೊಳಿಸಿದ ಮರಗಳು ಸೇರಿದಂತೆ ಇನ್ನೂ ಸ್ಥಳಾಂತರ ಗೊಳ್ಳಲಿರುವ 508 ಮರಗಳ ಪೈಕಿ ಐವತ್ತು ಮರಗಳನ್ನುಈಗಾಗಲೇ ಸ್ಥಳಾಂತರಗೊಳಿಸಲಾಗಿದೆ. ಉಳಿದ 458 ಮರಗಳನ್ನು ಸ್ಥಳಾಂತರಗೊಳಿಸಿ ನಿರ್ವಹಣೆ ಮಾಡಲು ದತ್ತು ಪಡೆಯುವಂತೆ ಸ್ಥಳೀಯ ಪರಿಸರ ಪ್ರಿಯರು ಹಾಗೂ ದೇವಾಲಯಗಳು, ಚರ್ಚ್‌ಗಳು, ಮಸೀದಿಗಳ ಆಡಳಿತ ಮಂಡಳಿ, ಸ್ಥಳೀಯ ಯುವಕರಲ್ಲಿ ಜೀತ್ ಮಿಲನ್ ರೋಚ್ ಹಾಗೂ ಬಜಗೋಳಿ ಆರತಿ ಅಶೋಕ್ ಮನವಿ ಮಾಡುತಿದ್ದಾರೆ.ಅರಣ್ಯ ಇಲಾಖೆ ಮಾಳ ಗೇಟ್‌ನಿಂದ ಕಾರ್ಕಳ ಬೈಪಾಸ್ ವರೆಗಿನ ಸುಮಾರು11 ಕಿಮೀ ವ್ಯಾಪ್ತಿಯಲ್ಲಿ ಒಟ್ಟು 1634 ಮರಗಳ ಬದಲಿಗೆ ಅದರ 10ರಷ್ಟು ಗಿಡಗಳು ಅಂದರೆ 16340 ಗಿಡಗಳನ್ನು ನೆಡಲು ಗಿಡವೊಂದರಂತೆ 411.21ರು. ದರ ನಿಗದಿಪಡಿಸಿದೆ. 1 ಕಿ ಮೀ ವ್ಯಾಪ್ತಿಗೆ 9, 06,050 ಹಣ ಪಾವತಿಸಿದ್ದು ,11 ಕಿಮೀ ಗೆ 1,07,92,868 ಹಣ ಪಾವತಿ ಮಾಡಲಾಗಿದೆ. 1051 ಮರ ಕಡಿದು ನಾಟ ಸಂಗ್ರಹಾಲಯಕ್ಕೆ ಸಾಗಿಸಲು ಒಟ್ಟು 4,52,369 ರು. ಪಾವತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಮರಗಳ ತೆರವು ಹಾಗೂ ನಿರ್ವಹಣೆ, ಹೊಸ ಗಿಡನೆಡಲು ಒಟ್ಟು 1,79,65,388 ರುಪಾಯಿ ಹಣ ಪಾವತಿಸಲಾಗಿದೆ.
ಮರಗಳ ಉಳಿಸಲು ವಿದ್ಯಾರ್ಥಿಗಳ ಸಾಥ್: ಮರಗಳ ಸ್ಥಳಾಂತರ ಸಂದರ್ಭದಲ್ಲಿ ಬಜಗೋಳಿ ಸರ್ಕಾರಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಕೈ ಜೋಡಿಸುತ್ತಿದ್ದು ಪರಿಸರ ಕಾಳಜಿ ಮೆರೆಯುತಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಶೋಕ್ ನಾಯರ್, ಆರ್ಯ ಅಶೋಕ್, ಶೈಲೇಶ್ ನೆಲ್ಲಿಕಾರ್, ಸ್ನೇಕ್ ಕಿರಣ್ ಮಂಗಳೂರು, ಶ್ರದ್ಧಾ, ಗಾಡ್ವಿನ್, ಭಗವಾನ್ ಜೈನ್ , ಅರಣ್ಯ ಇಲಾಖೆ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ಯೋಗಿ ಹಾಗೂ ಅವರ ತಂಡ ಸಹಕರಿಸುತ್ತಿದೆ.ರಾಜಕೀಯ ಇಚ್ಛಾಶಕ್ತಿ ಕೊರತೆ: ಪಶ್ಚಿಮ ಘಟ್ಟಗಳ ಸಾಲಿನ ಪರಿಸರ ಉಳಿಸಲು ರಾಜಕೀಯ ನಾಯಕರ ಇಚ್ಛಾಶಕ್ತಿ ಕೊರತೆ ಉಂಟಾಗಿದ್ದು ಅಭಿವೃದ್ಧಿ ಹೆಸರಿನಲ್ಲಿ ಅರಣ್ಯಗಳು ನಾಶವಾಗುತ್ತಿವೆ. ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಾಳ ಘಾಟ್ ಶೃಂಗೇರಿ ವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ 540 ಕೋಟಿ ರೂಪಾಯಿಗಳ ಡಿಪಿಆರ್ ಸಿದ್ಧಪಡಿಸಲಾಗಿದೆ. ಈ ರಸ್ತೆಯಲ್ಲಿ ಲಕ್ಷಾಂತರ ಮರಗಳು ಬಲಿಯಾಗಲಿವೆ.