ಆಗಸ್ಟ್ ೨ರ ಪರಿಸರ ಸಾರ್ವಜನಿಕ ಸಭೆಗೆ ಪರಿಸರವಾದಿಗಳ ವಿರೋಧ

| Published : Jul 03 2024, 12:21 AM IST

ಆಗಸ್ಟ್ ೨ರ ಪರಿಸರ ಸಾರ್ವಜನಿಕ ಸಭೆಗೆ ಪರಿಸರವಾದಿಗಳ ವಿರೋಧ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದಾಗಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವ ಸಲುವಾಗಿ ಕರೆದಿರುವ ಪರಿಸರ ಸಾರ್ವಜನಿಕ ಸಭೆ ರದ್ದುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿ ಪರಿಸರವಾದಿಗಳು ಹಾಗೂ ಪರಿಸರಾಸಕ್ತರು ಮನವಿ ಮಾಡಿದ್ದಾರೆ.

ವಿ.ಎಂ. ನಾಗಭೂಷಣ

ಕನ್ನಡಪ್ರಭ ವಾರ್ತೆ ಸಂಡೂರು

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಅಡಿ ಬರುವ ವಿಐಎಸ್‌ಎಲ್ (ವಿಶ್ವೇಶ್ವರಯ್ಯ ಐರನ್ ಅಂಡ್ ಸ್ಟೀಲ್ ಲಿಮಿಟೆಡ್) ಸಂಸ್ಥೆಯವರು ತಾಲೂಕಿನ ರಾಮಘಡ ಅರಣ್ಯ ವಲಯದಲ್ಲಿ ಒಟ್ಟು ೬೦.೭೦ ಹೆಕ್ಟೇರ್ ಪ್ರದೇಶದಲ್ಲಿ ವಾರ್ಷಿಕ ೦.೯೦ ಮಿಲಿಯನ್ ಟನ್ ಕಬ್ಬಿಣ ಅದಿರು ಗಣಿಗಾರಿಕೆ ನಡೆಸುವ ಯೋಜನೆ ಕುರಿತಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಆ. ೨ರಂದು ಕರೆದಿರುವ ಪರಿಸರ ಸಾರ್ವಜನಿಕ ಸಭೆಗೆ ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ರಾಮಘಡ ಅರಣ್ಯ ವಲಯದಲ್ಲಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಸಂಸ್ಥೆಗೆ ಹೊಸದಾಗಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವ ಸಲುವಾಗಿ ಕರೆದಿರುವ ಪರಿಸರ ಸಾರ್ವಜನಿಕ ಸಭೆ ರದ್ದುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಒತ್ತಾಯಿಸಿ ಪರಿಸರವಾದಿಗಳು ಹಾಗೂ ಪರಿಸರಾಸಕ್ತರು ಆನ್‌ಲೈನ್ ಮೂಲಕ ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿ, ಅರಣ್ಯ ಸಚಿವರು, ಅರಣ್ಯ ಇಲಾಖೆ ಉನ್ನತಾಧಿಕಾರಿಗಳು ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಈ ಕುರಿತು ಪರಿಸರವಾದಿಗಳು ಆನ್‌ಲೈನ್ ಅಭಿಯಾನವನ್ನು ಆರಂಭಿಸಿದ್ದಾರೆ. ಇದಕ್ಕೆ ಜನರಿಂದ ಉತ್ತಮ ಸ್ಪಂದನೆಯೂ ದೊರೆತಿದೆ.

ಆತಂಕಕ್ಕೆ ಕಾರಣವಾದ ಅಂಶಗಳು:

ಪ್ರಸ್ತಾವಿತ ಗಣಿ ಪ್ರದೇಶದಲ್ಲಿನ ಗಣಿಗಾರಿಕೆಗೆ ಅವಕಾಶ ನೀಡಿದರೆ, ಅಲ್ಲಿನ ಸುಮಾರು ೨೯೪೦೦ ಮರಗಳಿಗೆ ಕೊಡಲಿ ಏಟು ಬೀಳಲಿದೆ. ಈಗಾಗಲೆ ಇಲ್ಲಿನ ಗಣಿಗಾರಿಕೆಯಿಂದ ಶೇ. ೩೦ರಷ್ಟು ಅರಣ್ಯ ಹಾಳಾಗಿದೆ. ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚುತ್ತಿದೆ. ಜೀವ ವೈವಿಧ್ಯಕ್ಕೆ ಕಂಟಕ ಎದುರಾಗಲಿದೆ. ಉತ್ತರ ಕರ್ನಾಟಕದ ಆಕ್ಸಿಜನ್ ಬ್ಯಾಂಕ್‌ನಂತಿರುವ ಸಂಡೂರು ಭಾಗದ ಅರಣ್ಯ ನಾಶವಾದರೆ, ಪರಿಸರ ಸಮತೋಲನ ಹದಗೆಡಲಿದೆ.

ಜಾಗತಿಕ ತಾಪಮಾನ, ಹವಮಾನ ಬದಲಾವಣೆ, ನೈಸರ್ಗಿಕ ವಿಕೋಪಗಳು ಹೆಚ್ಚಾಗುತ್ತಿರುವ ಇಂತಹ ಸಂದರ್ಭದಲ್ಲಿ ಅರಣ್ಯೀಕರಣ ಮಾಡುವ ಕಡೆಗೆ ಗಮನ ಕೊಡಬೇಕಿದೆ. ಆದರೆ, ಅರಣ್ಯ ನಾಶ ಮಾಡುವ ಯೋಜನೆಗಳಿಂದ ಪರಿಸರದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ಅರಣ್ಯ ನಾಶದ ದುಷ್ಪರಿಣಾಮವನ್ನು ಜೀವ ಜಗತ್ತು ಎದುರಿಸಬೇಕಾಗುತ್ತದೆ ಎಂಬ ಆತಂಕ ಪರಿಸರವಾದಿಗಳದ್ದಾಗಿದೆ.

ತಾಲ್ಲೂಕಿನ ಪ್ರಮುಖ ಅರಣ್ಯ ವಲಯಗಳಾದ ರಾಮಘಡದಲ್ಲಿ ವಿಐಎಸ್‌ಎಲ್ ಸಂಸ್ಥೆಗೆ ೬೦.೭೦ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿಣ ಅದಿರು ಗಣಿಗಾರಿಕೆಯ ಪ್ರಸ್ತಾವ ಹಾಗೂ ಸ್ವಾಮಿಮಲೈ ಅರಣ್ಯ ವಲಯದಲ್ಲಿ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಗೆ ೪೦೧ ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆಯ ಪ್ರಸ್ತಾವ ರಾಜ್ಯಾದ್ಯಂತ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೆ, ಪ್ರಾಸ್ತಾವಿತ ಯೋಜನೆಗಳಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ದಟ್ಟ ಅರಣ್ಯದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವ ಪ್ರಸ್ತಾವಗಳನ್ನು ವಿರೋಧಿಸಿ ಪರಿಸರಾಸಕ್ತರಿಂದ ಈಗಾಗಲೇ ಪತ್ರ ಚಳುವಳಿ, ಜನಾಂದೋಲವನ್ನಾಗಿಸುವ ಪ್ರಕ್ರಿಯೆ, ಕೆಲವರು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಿಗೆ ರಕ್ತದಲ್ಲಿ ಪತ್ರವನ್ನು ಬರೆದು ಒತ್ತಾಯಿಸುವ ಪ್ರಕ್ರಿಯೆಗಳು ಭರದಿಂದ ಸಾಗಿವೆ.

ಜನರ ವಿರೋಧದ ನಡುವೆಯೂ ರಾಮಘಡ ಅರಣ್ಯ ವಲಯದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವ ಸಂಬಂಧ ಕರೆದಿರುವ ಪರಿಸರ ಸಾರ್ವಜನಿಕ ಸಭೆಗೆ ಪರಿಸರವಾದಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಜನರ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರ ಯಾವ ತೀರ್ಮಾನವನ್ನು ತೆಗೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ. ಅರಣ್ಯ ನಾಶ

ರಾಮಘಡ ಅರಣ್ಯ ವಲಯದಲ್ಲಿ ಒಂದೆಡೆ ಅರಣ್ಯ ಇಲಾಖೆಯೇ ಪರಿಸರ ಪುನಃಶ್ಚೇನಕ್ಕಾಗಿ ಕೆಎಂಇಆರ್‌ಸಿ ಅನುದಾನದ ಅಡಿಯಲ್ಲಿ ಸಾಕಷ್ಟು ಹಣ ಖರ್ಚು ಮಾಡಿ ಸುಮಾರು ೭೦ ಸಾವಿರದಷ್ಟು ಗಿಡಗಳನ್ನು ನೆಡುವ ಕಾರ್ಯವನ್ನು ಕೈಗೊಂಡಿದೆ. ಇನ್ನೊಂದೆಡೆ ಅದೇ ಅರಣ್ಯ ವಲಯದಲ್ಲಿ ಅರಣ್ಯ ನಾಶಕ್ಕೆ ಅವಕಾಶ ಮಾಡಿಕೊಡುವ ಗಣಿಗಾರಿಕೆಗೆ ಅವಕಾಶ ಕಲ್ಪಿಸಲು ಸರ್ಕಾರ ಮುಂದಾಗಿದೆ. ಇದನ್ನು ನಾವು ಖಂಡಿಸುತ್ತೇವೆ

ಶ್ರೀಶೈಲ ಆಲ್ದಳ್ಳಿ, ಜನ ಸಂಗ್ರಾಮ ಪರಿಷತ್ ರಾಜ್ಯ ಸಮಿತಿ ಸದಸ್ಯ. ಹೋರಾಟ ತೀವ್ರ

ರಾಮಘಡ ಅರಣ್ಯ ವಲಯದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ಕೊಡಬಾರದು. ಒಂದುವೇಳೆ ಸರ್ಕಾರ ಇದಕ್ಕೆ ಅವಕಾಶ ಮಾಡಿಕೊಟ್ಟರೆ, ತೀವ್ರ ಸ್ವರೂಪದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು.

ಟಿ.ಎಂ. ಶಿವಕುಮಾರ್, ಉಪಾಧ್ಯಕ್ಷರು, ಜನ ಸಂಗ್ರಾಮ ಪರಿಷತ್ ರಾಜ್ಯ ಸಮಿತಿ.