ಕೆ.ಮಲ್ಲಾಪೂರಕ್ಕೆ ತಾಪಂ ಇಒ ಭೇಟಿ, ಪರಿಶೀಲನೆ

| Published : Apr 03 2025, 12:32 AM IST

ಸಾರಾಂಶ

ಗ್ರಾಮದಲ್ಲಿ ಕಲುಷಿತ ನೀರಿನಿಂದ ಗ್ರಾಮಸ್ಥರು ಅಸ್ವಸ್ಥರಾಗಿಲ್ಲ. ಯುಗಾದಿ ಹಬ್ಬದ ಮರು ದಿನ ಊಟದಲ್ಲಿ ವ್ಯತ್ಯಾಸವಾಗಿ ಒಂದೇ ಕುಟುಂಬದ ೩೦ ಜನರ ಪೈಕಿ ೯ಜನರಿಗೆ ವಾಂತಿಬೇಧಿಯಾಗಿ ಅಸ್ವಸ್ಥರಾಗಿದ್ದಾರೆ

ಕನಕಗಿರಿ: ತಾಲೂಕಿನ ಕರಡೋಣ ಗ್ರಾಪಂ ವ್ಯಾಪ್ತಿಯ ಕೆ. ಮಲ್ಲಾಪೂರ ಗ್ರಾಮದ ಒಂದೇ ಕುಟುಂಬದ ೯ಜನ ಕಲುಷಿತ ಆಹಾರ ಸೇವಿಸಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಬುಧವಾರ ತಾಪಂ ಇಒ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.

ಮೊದಲಿಗೆ ಗ್ರಾಮದ ನಾನಾ ಬೀದಿಗಳಲ್ಲಿ ಸಂಚಿಸಿದ ಅವರು, ಸ್ವಚ್ಛತೆ, ಕುಡಿಯುವ ನೀರಿನ ಪೈಪ್‌ಲೈನ್ ವೀಕ್ಷಿಸಿದರು. ನಂತರ ಅಸ್ವಸ್ಥರಾದವರ ಮನೆಗೆ ತೆರಳಿದ ಇಒ, ರೋಗಿಗಳ ಕುಟುಂಬಸ್ಥರೊಂದಿಗೆ ಮಾಹಿತಿ ಪಡೆದರು. ನೀರಗಂಟಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಮಾಹಿತಿ ಸಂಗ್ರಹಿಸಿ ಗ್ರಾಮದಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕೆಂದು ಸೂಚಿಸಿದರು.

ನಂತರ ಇಒ ರಾಜಶೇಖರ ಪತ್ರಕರ್ತರೊಂದಿಗೆ ಮಾತನಾಡಿ, ಗ್ರಾಮದಲ್ಲಿ ಕಲುಷಿತ ನೀರಿನಿಂದ ಗ್ರಾಮಸ್ಥರು ಅಸ್ವಸ್ಥರಾಗಿಲ್ಲ. ಯುಗಾದಿ ಹಬ್ಬದ ಮರು ದಿನ ಊಟದಲ್ಲಿ ವ್ಯತ್ಯಾಸವಾಗಿ ಒಂದೇ ಕುಟುಂಬದ ೩೦ ಜನರ ಪೈಕಿ ೯ಜನರಿಗೆ ವಾಂತಿಬೇಧಿಯಾಗಿ ಅಸ್ವಸ್ಥರಾಗಿದ್ದಾರೆ. ನಿತ್ರಾಣರಾಗಿದ್ದ ರೋಗಿಗಳು ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆಯಲು ಮುಂದಾಗುತ್ತಾರೆ. ಬಳಿಕ ಹೆಚ್ಚಿನ ಚಿಕಿತ್ಸೆ ಅತ್ಯವಶ್ಯ ಇರುವುದರಿಂದ ಗಂಗಾವತಿ ತಾಲೂಕಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದು ಗುಣಮುಖರಾಗಿದ್ದಾರೆ. ಗ್ರಾಮದಲ್ಲಿ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.

ಎಇಇ ದೇವಣ್ಣ, ಆಶಾ,ಅಂಗನವಾಡಿ ಕಾರ್ಯಕರ್ತೆಯರು ಹಾಗೂ ರೈತ ಮುಖಂಡ ಸೋಮನಾಥ ನಾಯಕ ಇದ್ದರು.