ಕನ್ನಡಪ್ರಭ ವಾರ್ತೆ ಮಂಡ್ಯ
ಅಪಸ್ಮಾರ ಅಥವಾ ಮೂರ್ಛೆ ರೋಗ ಮೆದುಳಿನ ನರಕ್ಕೆ ಸಂಬಂಧಿಸಿದ ವೈಜ್ಞಾನಿಕ ಕಾಯಿಲೆಯಾಗಿದೆ ಎಂದು ಜಿಲ್ಲಾ ಅಸಾಂಕ್ರಾಮಿಕ ರೋಗಗಳ ನಿಯಂತ್ರಣಾಧಿಕಾರಿ ಡಾ.ಸೋಮಶೇಖರ್ ಹೇಳಿದರು.ನಗರದಲ್ಲಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಅಪಸ್ಮಾರ (ಮೂರ್ಛೆ) ರೋಗ ದಿನಾಚರಣೆ, ಜಿಲ್ಲಾ ಮಟ್ಟದ ಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು.
ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ಜಗತ್ತಿನಲ್ಲಿ ಬರೋಬ್ಬರಿ ೫೦ ಮಿಲಿಯನ್ ಜನರು ಈ ಮೂರ್ಛೆ ರೋಗವನ್ನು ಹೊಂದಿದ್ದಾರೆ. ಆದರೆ, ಹೆಚ್ಚಿನವರು ಈ ರೋಗವನ್ನು ಶಾಪವೆಂದು ನಂಬುತ್ತಾರೆ. ಈ ನಿಟ್ಟಿನಲ್ಲಿ ಈ ರೋಗದ ಬಗ್ಗೆ ಇರುವ ಜನರ ತಪ್ಪು ಕಲ್ಪನೆಗಳನ್ನು ತೊಡೆದು ಹಾಕಲು, ಜಾಗೃತಿ, ಅರಿವು ಮೂಡಿಸುತ್ತಿದ್ದೇವೆ ಎಂದು ನುಡಿದರು.ಮೂರ್ಛೆ ರೋಗ ಹಾಗೂ ಅದರ ಚಿಕಿತ್ಸಾ ವಿಧಾದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು, ಅಪಸ್ಮಾರ ರೋಗಿಗಳಲ್ಲಿನ ಕೀಳರಿಮೆಯನ್ನು ಹೋಗಲಾಡಿಸಿ ಅವರಿಗೆ ಧೈರ್ಯವನ್ನು ತುಂಬಲು ಪ್ರತಿವರ್ಷ ಫೆಬ್ರವರಿ ತಿಂಗಳ ಎರಡನೇ ಸೋಮವಾರದಂದು ಅಂತಾರಾಷ್ಟ್ರೀಯ ಅಪಸ್ಮಾರ ಜಾಗೃತಿ ದಿನ ಆಚರಣೆ ಮಾಡಲಾಗುತ್ತಿದೆ ಎಂದರು.
ಭಾರತದಲ್ಲಿ ೧ ಕೋಟಿಗೂ ಹೆಚ್ಚು ಜನರು ಅಪಸ್ಮಾರದಿಂದ ಬಳಲುತ್ತಿದ್ದಾರೆ. ಇದು ಜನಸಂಖ್ಯೆಯ ಸುಮಾರು ಶೇ.1 ಕ್ಕಿಂತ ಹೆಚ್ಚಾಗಿದೆ. ವೆಬಿನಾರ್‌ಗಳು, ಜಾಗೃತಿ ಅಭಿಯಾನಗಳು, ಕಥೆಗಳನ್ನು ಹಂಚಿಕೊಳ್ಳುವುದು ಮತ್ತು ಮಾರ್ಗದರ್ಶನ ನೀಡುದುವು ದೈರ್ಯ ಹೇಳುವುದು ಬಹಳ ಮುಖ್ಯ ಎಂದರು.
ಈ ದಿನವು ಕೇವಲ ರೋಗದ ಬಗ್ಗೆ ತಿಳಿಸುವುದಲ್ಲದೇ, ಈ ಸ್ಥಿತಿಯೊಂದಿಗೆ ಬದುಕುತ್ತಿರುವ ಜನರಿಗೆ ಒಳಗೊಳ್ಳುವಿಕೆ ಮತ್ತು ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಮೂರ್ಛೆರೋಗ ಪ್ರತಿಜ್ಞೆ, ಕಥೆಗಳನ್ನು ಕಾರ್ಯರೂಪಕ್ಕೆ ತರುವುದು ಎಂಬ ಘೋಷವಾಕ್ಯದೊಂದಿಗೆ ಹೊರಟ ಜಾಗೃತಿ ಜಾಥಾಕ್ಕೆ ಡಿಎಚ್‌ಒ ಡಾ.ಮೋಹನ್ ಚಾಲನೆ ನೀಡಿದರು. ಜಾಗೃತಿ ಜಾಥಾವು ನಗರದ ಹೆದ್ದಾರಿಯ ಜಯಚಾಮರಾಜೇಂದ್ರ ವೃತ್ತದವರೆಗೆ ಸಾಗಿ, ಮಾನವ ಸರಪಳಿ ನಿರ್ಮಿಸಿ ಸಮಾಪ್ತಿಗೊಳಿಸಿದರು.ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಆಶಾಲತಾ, ಡಾ.ಬೆಟ್ಟಸ್ವಾಮಿ, ತರಬೇತಿಕೇಂದ್ರ ಪ್ರಾಂಶುಪಾಲೆ ಡಾ.ಮಮತಾ, ಮೇಲ್ವಿಚಾರಕರಾದ ಚಿಕ್ಕ ಅರಸೇಗೌಡ, ಕಭಿ, ಉಪೇಂದ್ರ, ಮಹಮದ್ ಸುಹೇಲ್ ಮತ್ತಿತರರಿದ್ದರು.