ಸಾರಾಂಶ
ರೋಣ: ಆದಿ ಕವಿ ಮಹರ್ಷಿ ವಾಲ್ಮೀಕಿಯವರು ರಚಿಸಿದ ಮಹಾಕಾವ್ಯ ಆದರ್ಶದ ಪ್ರತೀಕವಾಗಿದೆ. ರಾಮಾಯಣ ಶ್ರೇಷ್ಠವಾದ ಮಾನವೀಯತೆಯ ಮೌಲ್ಯಗಳನ್ನು ಬೆಳೆಸುವ ಗ್ರಂಥವಾಗಿದ್ದು, ಅದರಲ್ಲಿನ ಸಂದೇಶ ಅರಿತುಕೊಳ್ಳಬೇಕು ಎಂದು ಪುರಸಭೆ ಸದಸ್ಯ ಮಿಥುನ ಜಿ. ಪಾಟೀಲ ಹೇಳಿದರು.
ಸೋಮವಾರ ಪಟ್ಟಣದ ಗುರುಭವನದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಸಂಘ ವತಿಯಿಂದ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತಿ ಉದ್ಘಾಟಿಸಿ ಮಾತನಾಡಿದರು.ರಾಮಾಯಣದಂತ ಮಹಾನ್ ಗ್ರಂಥವನ್ನು ಮಹರ್ಷಿ ವಾಲ್ಮೀಕಿ ನಮಗೆ ನೀಡಿದ್ದಾರೆ. ಅವರ ಆದರ್ಶ ಹಾಗೂ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಜಯಂತಿ ಆಚರಣೆ ಮಾಡುವುದರ ಹಿಂದೆ ಅದರದ್ದೆ ಆದ ಮಹತ್ವ ಇರುತ್ತದೆ. ಮಹಾನ್ ನಾಯಕರ, ದಾರ್ಶನಿಕರ ಜೀವನ ಚರಿತ್ರೆಯನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದೇ ಜಯಂತಿ ಆಚರಣೆಯ ಉದ್ದೇಶವಾಗಬೇಕು, ಶಿಕ್ಷಣದಿಂದಲೇ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯ. ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ನನೆಗುದಿಗೆ ಬಿದ್ದಿರುವ ವಾಲ್ಮೀಕಿ ಭವನ ನಿರ್ಮಾಣ ಕಾಮಗಾರಿಯನ್ನು ಮುಂಬರುವ ದಿನಮಾನಗಳ ಪೂರ್ಣಗೊಳಿಸಿ ವಾಲ್ಮೀಕಿ ಸಮಾಜದವರಿಗೆ ನೀಡುವಲ್ಲಿ ಶಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ನಾವೂ ಪುರಸಭೆಯಿಂದ ಬೇಕಿರುವ ಎಲ್ಲ ಸಹಾಯ, ಸಹಕಾರ ನೀಡಲು ಸಿದ್ದರಿದ್ದೆವೆ ಎಂದರು.
ಧಾರವಾಡ ಕರ್ನಾಟಕ ಕಲಾ ಮಹಾವಿದ್ಯಾಲಯ ಕನ್ನಡ ವಿಭಾಗ ಉಪನ್ಯಾಸಕ ಡಾ. ಶರಣು ಮುಷ್ಠಿಗೇರಿ ಮಾತನಾಡಿ, ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಭಾರತೀಯ ಸಂಸ್ಕೃತಿಯ ಎರಡು ಕಣ್ಣುಗಳಿದಂತೆ. ಆದ್ದರಿಂದ ನಮ್ಮ ಸಂಸ್ಕೃತಿಯ ಸಂದೇಶವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ರಾಮಾಯಣ ಆದರ್ಶದ ಪ್ರತೀಕವಾಗಿದೆ. ಮರ್ಯಾದಾ ಪುರುಷೊತ್ತಮ ಶ್ರೀರಾಮ ಆದರ್ಶ ನಮಗೆ ಮಾರ್ಗದರ್ಶಿಯಾಗಿವೆ. ಪ್ರಸ್ತುತ ಕಾಲಘಟ್ಟದಲ್ಲಿ ಸಂಬಂಧಗಳೇ ಹದಗೆಡುತ್ತಿವೆ. ಸಾಮರಸ್ಯ ಮಾಯವಾಗುತ್ತಿದೆ. ಸುಶಿಕ್ಷಿತ ಸಮಾಜ ನಿರ್ಮಾಣವಾಬೇಕು. ಈ ದಿಶೆಯಲ್ಲಿ ಮಹರ್ಷಿ ವಾಲ್ಮೀಕಿ ರಚಿಸಿದ ಮಹಾಕಾವ್ಯ ರಾಮಾಯಣ ಶ್ಲೋಕದ ಸಾರವನ್ನು ಅರಿಯಬೇಕು. ಪ್ರತಿಯೊಂದು ವಿಶ್ವವಿದ್ಯಾಲಯದಲ್ಲಿ ಮಹರ್ಷ ವಾಲ್ಮೀಕಿ ಅಧ್ಯಯನ ಪೀಠ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.ಸಾನಿಧ್ಯವನ್ನು ಹುಲಿಹೈದರ ವಾಲ್ಮೀಕಿ ಸಮಾಜದ ಗುರುಗಳಾದ ರಾಜಾ ಅಚ್ಚುತ್ ನಾಯಕ ವಹಿಸಿ ಆಶಿರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಮಹರ್ಷಿ ವಾಲ್ಮೀಕಿ ನಾಯಕ ಸಂಘದ ತಾಲೂಕಾಧ್ಯಕ್ಷ ಬಸವರಾಜ ತಳವಾರ ವಹಿಸಿದ್ದರು. ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಪಿ.ಎಚ್. ಕಡಿವಾಲ, ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಸುನಂದಾ ಕಣ್ಣಿ, ಡಾ. ಶರಣು ಮುಷ್ಠಿಗೇರಿ ಸೇರಿದಂತೆ ಅನೇಕ ಸಾಧಕರನ್ನು ಸನ್ಮಾನಿಸಲಾಯಿತು. 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಸಿದ್ಧಾರೂಢ ಮಠದಿಂದ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ವಿವಿಧ ಕಲಾ ತಂಡ ಹಾಗೂ ವಾದ್ಯಮೇಳಗಳೊಂದಿಗೆ ಗುರುಭವನ ವರೆಗೆ ಅದ್ಧೂರಿಯಾಗಿ ಜರುಗಿತು. ಕಾರ್ಯಕ್ರಮದಲ್ಲಿ ತಹಸೀಲ್ದಾರ್ ನಾಗರಾಜ ಕೆ., ತಾಪಂ ಇಒ ಮಂಜುಳಾ ಹಕಾರಿ, ಜಿಪಂ ಮಾಜಿ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಗೀತಾ ಆಲೂರ, ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಆರ್.ಸಿ. ನಾಯಕ, ಪಿಡಬ್ಲೂಡಿ ಎಇಇ ಬಲವಂತ ನಾಯಕ, ಸಂಘದ ಗೌರವಾಧ್ಯಕ್ಷ ಬಸವಂತಪ್ಪ ತಳವಾರ, ಗಜೇಂದ್ರಗಡ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಹನಮಂತಪ್ಪ ಹಟ್ಟಿಮನಿ, ಬಿಇಒ ರುದ್ರಪ್ಪ ಹುರಳಿ, ಪುರಸಭೆ ಸದಸ್ಯ ಸಂತೋಷ ಕಡಿವಾಲ, ಶೇಖಪ್ಪ ಜುಟ್ಲ, ವೀರಣ್ಣ ಗಾಡಗೋಳಿ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಬಿ.ಆರ್.ಕಟ್ಟಿಮನಿ ಸ್ವಾಗತಿಸಿದರು. ಶಿಕ್ಷಕ ಶರಣು ವಾಲ್ಮೀಕಿ ನಿರೂಪಿಸಿದರು.