ಸಾರಾಂಶ
ಕನ್ನಡಪ್ರಭ ವಾರ್ತೆ ಕಲಾದಗಿ
ಜಗತ್ತಿನ ಅತೀ ಶ್ರೇಷ್ಠ, ಪ್ರಮುಖ, ವಿಶೇಷವಾದ ಸಂವಿಧಾನ ನಮ್ಮ ದೇಶದ್ದಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.ಖಜ್ಜಿಡೋಣಿ ಗ್ರಾಪಂನ ಅರಿವು ಕೇಂದ್ರದಲ್ಲಿ ಸಂವಿಧಾನ ದಿನ ಅಂಗವಾಗಿ ಸಂವಿಧಾನ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ಮಗುವಿನ ಹಕ್ಕು, ಕರ್ತವ್ಯಗಳ ಬಗ್ಗೆ ಸಂವಿಧಾನದಲ್ಲಿ ಹೇಳಲಾಗಿದೆ. ಸಂವಿಧಾನದಲ್ಲಿ ಪ್ರತಿಯೊಬ್ಬರೂ ಹಂತ ಹಂತವಾಗಿ ಸೌಲಭ್ಯ, ಸೌಕರ್ಯ, ಶಿಕ್ಷಣ ಪಡೆದುಕೊಳ್ಳಬಹುದಾಗಿದೆ. ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಸಮಾನ ಅವಕಾಶ ಕೊಡಲಾಗಿದೆ. ದೇಶ ಸೇವೆ ಮಾಡಲು ಮೂಲಭೂತ ಕರ್ತವ್ಯಗಳಿವೆ. ಪ್ರತಿಯೊಬ್ಬರಿಗೂ ಸಿಗಬೇಕಾದ ಮೂಲಭೂತ ಹಕ್ಕುಗಳು ಎರಡೂ ಆಶಯಗಳು ಸಂವಿಧಾನದಲ್ಲಿದೆ. ಶಿಕ್ಷಣದ ಜೊತೆಗೆ ಹೆಚ್ಚುವರಿಯಾಗಿ ಜ್ಞಾನಾರ್ಜನೆ, ವಿದ್ಯಾಬ್ಯಾಸ ಮಾಹಿತಿ ತಿಳಿದುಕೊಳ್ಳಲು ಗ್ರಾಪಂನಲ್ಲಿ ಅರಿವು ಕೇಂದ್ರಗಳಿವೆ. ಅವುಗಳ ಸದುಪಯೋಗ ಪಡೆಯಬೇಕು. ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ರೂಡಿಸಿಕೊಳ್ಳಬೇಕು ಎಂದರು.
ಚೆಸ್ ಆಟವಾಡಿದ ಸಿಒ:ಶಾಲಾ ಮಕ್ಕಳಿಗೆ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ಸಂವಿಧಾನ ಕುರಿತು ಆಯೋಜಿಸಿದ್ದ ರಸಪ್ರಶ್ನೆ, ಭಾಷಣ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಸಿಇಒ ಗ್ರಾಪಂ ಅರಿವು ಕೇಂದ್ರದಲ್ಲಿ ವಿದ್ಯಾರ್ಥಿಗಳೊಂದಿಗೆ ಚೆಸ್ ಆಟವಾಡಿದರು.
ಜಿಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ರಾಮೇಶ್ವರ ಉಕ್ಕಲಿ, ಬಾಗಲಕೋಟೆ ತಾಪಂ ಇಒ ಸುಭಾಸ್ ಸಂಪಗಾವಿ, ತಾಪಂ ಸಹಾಯಕ ನಿರ್ದೇಶಕರು ಪರಮೇಶ್ವರ ಚೆಲವಾದಿ, ಪಿಡಿಒ ಕೆ.ಎಚ್.ಮುಲ್ಲಾ, ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಮಾದರ, ಉಪಾದ್ಯಕ್ಷೆ ಮಂಜುಳಾ ಕೆಂಜೋಡಿ, ಪ್ರವೀಣ ಅರಕೇರಿ, ಗಿರೀಶ ತುಪ್ಪದ, ಲಕ್ಷ್ಮಣ ಆನಂದಿ, ಅಂಬಿಕಾ ಸಾಬನ್ನವರ್ ಇನ್ನಿತರರು ಇದ್ದರು.