ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು

| Published : Jan 22 2024, 02:23 AM IST

ಸಾರಾಂಶ

49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು, 21 ವರ್ಷಗಳಿಂದ ದುಡಿಯುವ ಬಿಸಿಯೂಟ ನೌಕರರಿಗೆ, ಆಶಾ ಮತ್ತು ಇತರೆ ಸಿಬ್ಬಂದಿಗಳಿಗೆ 31 ಸಾವಿರ ಕನಿಷ್ಠ ವೇತನ ಜಾರಿ ಮಾಡಬೇಕು. ನಿವೃತ್ತಿ ಸೌಲಭ್ಯಗಳನ್ನು ನೀಡಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಆಹಾರ, ಆರೋಗ್ಯ ಶಿಕ್ಷಣ ಉಳಿಸಿ, ದೇಶವನ್ನು ಅಭಿವೃದ್ಧಿಪಡಿಸಲು ಮತ್ತು ಸಮಾನ ವೇತನ ನಿಗದಿಪಡಿಸಿ ಶ್ರಮಿಕರ ಬದುಕನ್ನು ಉಳಿಸಲು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜ.23 ರಂದು ಸಂಸದರ ಕಚೇರಿ ಬಳಿ ಅನಿರ್ದಿಷ್ಠಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಅಂಗನವಾಡಿ ನೌಕರರ ಸಂಘ(ಸಿಐಟಿಯು)ದ ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮೀದೇವಮ್ಮ ತಿಳಿಸಿದರು.ನಗರದ ಕಾರ್ಯ ನಿರತ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಆಹಾರ,ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಇರುವ ಯೋಜನೆಗಳ ಅಡಿಯಲ್ಲಿ ಕೆಲಸ ನಿರ್ವಹಿಸುವ ದಿನಗೂಲಿ ಕಾರ್ಮಿಕರಿಗೆ ಸರ್ಕಾರಗಳು ಉದ್ಯೋಗ ಭದ್ರತೆ ನೀಡಬೇಕು ಎಂದರು.

ಸರ್ಕಾರಿ ನೌಕರರೆಂದು ಪರಿಗಣಿಸಿ

ಭಾರತೀಯ ಕಾರ್ಮಿಕ ಸಮ್ಮೇಳನ(ಐಎಲ್ ಸಿ)ಯ ಶಿಫಾರಸ್ಸಿನಂತೆ ಈ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳು ಸೇರಿದಂತೆ 1 ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ಕೊಟ್ಟು ನೌಕರರು ಎಂದು ಪರಿಗಣಿಸಬೇಕು. 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಉಚಿತ. ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ನೀಡಲು ಕಾನೂನು ರಚಿಸಬೇಕು. ಎನ್ಇಪಿ ನಿಲ್ಲಿಸಬೇಕು. ಮತ್ತು ಈ ಯೋಜನೆಗಳಲ್ಲಿ ದುಡಿಯುವ ಗುತ್ತಿಗೆ, ಒಳಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು ಎಂದು ತಿಳಿಸಿದರು.49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರು, 21 ವರ್ಷಗಳಿಂದ ದುಡಿಯುವ ಬಿಸಿಯೂಟ ನೌಕರರಿಗೆ, ಆಶಾ ಮತ್ತು ಇತರೆ ಸಿಬ್ಬಂದಿಗಳಿಗೆ 31 ಸಾವಿರ ಕನಿಷ್ಠ ವೇತನ ಜಾರಿ ಮಾಡಬೇಕು. ನಿವೃತ್ತಿ ಸೌಲಭ್ಯಗಳನ್ನು ನೀಡಿ, ಮಾಸಿಕ ಕನಿಷ್ಟ 10.000 ರು. ಪಿಂಚಣಿ ಕೊಡಬೇಕು. ನಿವೃತ್ತಿ ಹೊಂದಿದ್ದ ಎಲ್ಲಾ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆಗೆ ಗ್ರಾಜ್ಯುಟಿ ಹಣ ಬಿಡುಗಡೆ ಮಾಡಬೇಕು. ಬಿಸಿಯೂಟ ನೌಕರರಿಗೆ ಪರಿಹಾರ ನೀಡದೇ ನಿವೃತ್ತಿ ಮಾಡಬಾರದು ಈಗಾಗಲೇ ನಿವೃತ್ತಿ ಆದವರಿಗೆ, ಆಗುವವರಿಗೆ ಇಡಿಗಂಟು ನೀಡಬೇಕು ಎಂದರು.ಹೆಚ್ಚುವರಿ ಕೆಲಸ ನಿಲ್ಲಿಸಬೇಕು

ರಾಜ್ಯದಲ್ಲಿ ಇಲಾಖೇತರ ಕೆಲಸಗಳಾದ ಬಿಎಲ್ಓ ಸರ್ವೆ, ಐಸಿಡಿಎಸ್ ಯೋಜನೇತರ ಕೆಲಸಗಳಾದ ಭಾಗ್ಯಲಕ್ಷ್ಮಿ, ಮಾತೃವಂದನಾ, ಗೃಹಲಕ್ಷ್ಮಿ ಮುಂತಾದ ಕೆಲಸಗಳಲ್ಲಿ ಅಂಗನವಾಡಿ ನೌಕರರ ಬಳಕೆ ನಿಲ್ಲಿಸಬೇಕು. ಶಾಲಾ ಪೂರ್ವ ಶಿಕ್ಷಣ ಕಲಿಕೆಗೆ ಸಮಯ ನೀಡಬೇಕು ಮತ್ತು ವಿದ್ಯುತ್, ರೈಲ್ವೆ ಸೇರಿದಂತೆ ಯಾವುದೇ ಸಾರ್ವಜನಿಕ ವಲಯಗಳ ಖಾಸಗೀಕರಣ ನಿಲ್ಲಬೇಕು ಹಾಗೂ 29 ಕಾರ್ಮಿಕ ಕಾನೂನುಗಳ ಸಂಹಿತೆಗಳಾಗಿ ಮಾಡಿರುವುದನ್ನು ಕೈಬಿಟ್ಟು ಕಾರ್ಮಿಕ ಪರವಾದ ನೀತಿಗಳನ್ನು ಜಾರಿ ಮಾಡಬೇಕು.ದೇಶದ ಎಲ್ಲಾ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ರಚಿಸಲಾಗಿರುವ ಸಾಮಾಜಿಕ ಭದ್ರತಾ ಮಂಡಳಿಯನ್ನು ಬಲಪಡಿಸಿ ಕೇಂದ್ರ ಸರ್ಕಾರ ವಾರ್ಷಿಕ ನಿವ್ವಳ ಆದಾಯದ ಶೇ. 3 ರಷ್ಟು ಅನುದಾನ ಅಂದರೆ 3 ಲಕ್ಷ ಕೋಟಿ ಹಣವನ್ನು ಅಸಂಘಟಿತ ಕಾರ್ಮಿಕರ ಕಾರ್ಯಕ್ರಮಗಳಿಗೆ ಘೋಷಿಸಬೇಕು. ಇ-ಶ್ರಮ್ ಯೋಜನೆಯಲ್ಲಿ ಗುರುತಿನ ಚೀಟಿ ಪಡೆದಿರುವ ಎಲ್ಲ ಅಸಂಘಟಿತ ಕಾರ್ಮಿಕರು ಹಾಗೂ ಅವರ ಕುಟುಂಬಗಳ ಸದಸ್ಯರಿಗೆ ಉಚಿತ ಶಿಕ್ಷಣ, ಆರೋಗ್ಯ, ಪಡಿತರ ಹಾಗೂ ವಸತಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಸರ್ಕಾರಗಳನ್ನು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಅಂಗನವಾಡಿ ನೌಕರರ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ ಮಂಜುಳ, ಮುನಿರತ್ನಮ್ಮ, ಎಸ್.ಎನ್.ಉಮಾದೇವಿ, ಜಿ.ಎಸ್.ಪದ್ಮ, ಲಕ್ಷ್ಮೀನರಸಮ್ಮ ಮತ್ತಿತರರು ಇದ್ದರು.