ಪ್ರತಿಷ್ಠಿತ ಶಾಲೆಗೆ ಕಳುಹಿಸಿದ ತಕ್ಷಣ ಮಕ್ಕಳ ಜವಾಬ್ದಾರಿ ಮುಗಿಯಿತು. ಅದೇನಿದ್ದರೂ ಶಿಕ್ಷಕರದ್ದು ಎಂದು ಪಾಲಕರು ಬೇಜವಾಬ್ದಾರಿ ಮಾಡುವಂತೆ ಇಲ್ಲ
ಕೊಪ್ಪಳ: ಮಕ್ಕಳನ್ನು ಶಾಲೆಗೆ ಕಳುಹಿಸಿದ ತಕ್ಷಣ ಪಾಲಕರ ಜವಾಬ್ದಾರಿ ಮುಗಿಯುವುದಿಲ್ಲ. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರು ಮತ್ತು ಪಾಲಕರ ಸಮಾನ ಹೊಣೆಗಾರಿಕೆ ಇದೆ ಎಂದು ಕೊಪ್ಪಳ ವಿಶ್ವವಿದ್ಯಾಲಯ ಕುಲಪತಿ ಡಾ. ಬಿ.ಕೆ.ರವಿ ಹೇಳಿದರು.
ಎಸ್.ಎಫ್.ಎಸ್.ಶಾಲೆಯ ಐಸಿಎಸ್ಇ ವಿಭಾಗದ 21 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಪ್ರತಿಷ್ಠಿತ ಶಾಲೆಗೆ ಕಳುಹಿಸಿದ ತಕ್ಷಣ ಮಕ್ಕಳ ಜವಾಬ್ದಾರಿ ಮುಗಿಯಿತು. ಅದೇನಿದ್ದರೂ ಶಿಕ್ಷಕರದ್ದು ಎಂದು ಪಾಲಕರು ಬೇಜವಾಬ್ದಾರಿ ಮಾಡುವಂತೆ ಇಲ್ಲ. ಶಿಕ್ಷಕರು ತಮ್ಮ ಹೊಣೆಗಾರಿಕೆ ನಿಭಾಯಿಸುತ್ತಾರೆ ಮತ್ತು ಅದರ ಜತೆ ಜತೆಗೆ ಪಾಲಕರು ಮಕ್ಕಳ ಮೇಲೆ ನಿಗಾ ಇಡಬೇಕು. ಮಗುವಿನ ಪ್ರತಿ ಚಲನವಲನ ಗಮನಿಸುತ್ತಾ ಅದಕ್ಕೆ ಪೂರಕವಾಗಿ ಮನೆಯಲ್ಲಿ ಸೂಕ್ತ ವಾತಾವರಣ ನೀಡುವ ಮೂಲಕ ಮಗುವಿನ ಸರ್ವೋತೋಮುಖ ಬೆಳವಣಿಗೆಗೆ ಶ್ರಮಿಸಬೇಕು. ಪಾಲಕರು ಶಿಕ್ಷಣ ಮತ್ತು ಮಗುವಿನ ಬೆಳವಣಿಗೆಗೆ ದಾರಿ ತೋರಿದರೆ ಆ ದಾರಿಯಲ್ಲಿ ಮಗು ಸಾಗುತ್ತಿದೆಯೇ ಎನ್ನುವುದನ್ನು ಪಾಲಕರು ನೋಡಬೇಕು ಎಂದರು.
ಎಸ್ ಎಸ್ ಎಫ್ ಶಾಲೆ ಕೊಪ್ಪಳದಂತಹ ಹಿಂದುಳಿತದ ಪ್ರದೇಶದಲ್ಲಿ ಇಂತಹ ಗುಣಮಟ್ಟದ ಶಾಲೆ ಪ್ರಾರಂಭಿಸಿ, ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಶಾಲೆಯಲ್ಲಿ ಎಷ್ಟು ಶಿಸ್ತುಬದ್ಧವಾಗಿ ಕಲಿಸುತ್ತಾರೆ ಎನ್ನುವುದು ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ನೋಡಿದಾಗಲೇ ಗೊತ್ತಾಗುತ್ತದೆ. ಅದು ಇಲ್ಲಿಯ ಅನಾವರಣವಾಗುತ್ತಿದೆ ಎಂದರು.ಮಕ್ಕಳಿಗೆ ತಂತ್ರಜ್ಞಾನ ಬೇಕು, ಮೊಬೈಲ್ ಸಹ ಬೇಕು. ಆದರೆ, ಮಗು ಅಳುತ್ತದೆ, ಹಠ ಮಾಡುತ್ತದೆ ಎಂದಾಕ್ಷಣ ಮೊಬೈಲ್ ಕೊಟ್ಟು ಕುಳ್ಳಿರಿಸುವುದಲ್ಲ. ಆ ಮೊಬೈಲ್ ನಲ್ಲಿ ಮಗು ಏನು ನೋಡುತ್ತದೆ ಎನ್ನುವುದನ್ನು ಅರಿಯಬೇಕು ಎಂದರು.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಡಿಡಿಪಿಐ ಸೋಮಶೇಖರಗೌಡ ಬಿ. ಮಾತನಾಡಿ, ಮಕ್ಕಳಿಗೆ ಪಾಠದ ಜತೆ ನೈತಿಕ ಶಿಕ್ಷಣ ಹೇಳಿಕೊಡಬೇಕು. ನೈತಿಕ ಶಿಕ್ಷಣ ಇಂದಿನ ಅಗತ್ಯ ಶಿಕ್ಷಣವಾಗಿದೆ ಎಂದರು.ಮಕ್ಕಳಿಗೆ ಪಾಠ ಮಾಡುವುದರ ಜತೆಗೆ ವಾಸ್ತವಿಕ ನೆಲೆಗಟ್ಟನ್ನು ಸಹ ಪಾಠ ಮಾಡಬೇಕು. ಪಾಲಕರ ಜೋಪಾನ ಮಾಡುವುದು ಸೇರಿದಂತೆ ಬದುಕಿನುದ್ದಕ್ಕೂ ಆತ ಸಾಗಬೇಕಾದ ದಾರಿ ಸಹ ಮಕ್ಕಳಿಗೆ ಹೇಳಿಕೊಡಬೇಕು. ಅಂದಾಗಲೇ ಮಗುವಿನ ಸರ್ವೋತೋಮಖ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದರು.
ಎಸ್ ಎಫ್ ಶಾಲೆಗಳ ದಕ್ಷಿಣ ಭಾರತದ ಮುಖ್ಯಸ್ಥರಾದ ಫಾದರ್ ಥಾಮಸ್ ಕಲರಿಪರಂಬಿಲ್ ಮಾತನಾಡಿ,ಮಕ್ಕಳಿಗೆ ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆ,ಅವುಗಳ ಜತೆ ಸಾಗುವ ಪರಿ ಹೇಳಿಕೊಡುವ ಮೂಲಕ ಮಕ್ಕಳನ್ನು ಸಮಾಜದ ಉನ್ನತ ಸ್ಥಾನಕ್ಕೇರಿಸುವ ಶಿಕ್ಷಣ ದೊರೆಯಬೇಕಾಗಿದೆ. ಮಕ್ಕಳನ್ನು ಕೇವಲ ಅಂಕಗಳಿಂದ ಮಾತ್ರ ಅಳೆಯದೇ ಅವರು ನೈತಿಕ ಶಿಕ್ಷಣದ ಜತೆಗೆ ಅವರ ಬೆಳವಣಿಗೆ ಗಮನಿಸಬೇಕು. ಅಂಥ ಶಿಕ್ಷಣಕ್ಕೆ ಆದ್ಯತೆ ನೀಡುವ ಮೂಲಕ ಕೊಪ್ಪಳದಲ್ಲಿ ಎಸ್ ಎಫ್ ಎಸ್ ಐಸಿಎಸ್ ಇ ಶಾಲೆಯ ಅತ್ಯುತ್ತಮ ಹೆಸರು ಮಾಡಿರುವುದಕ್ಕೆ ನೀವೆಲ್ಲ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೇರಿರುವುದು ಹಾಗೂ ಇಷ್ಟು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲಿ ಅಭ್ಯಾಸ ಮಾಡುತ್ತಿರುವುದೇ ಸಾಕ್ಷಿ ಎಂದು ಹೇಳಿದರು.ಫಾದರಗಳಾದ ಮ್ಯಾಥಿವ್ ಇ.ಶಾಲೆಯ ಪ್ರಾಂಶುಪಾಲ ಜಬಾಮಲೆ, ಆಡಳಿತಾಧಿಕಾರಿ ಫಾದರ್ ಮ್ಯಾಥಿವ್ ಮಾಮ್ಲಾ, ಎಸ್. ಎಫ್ ಹೈಸ್ಕೂಲ್ ನ ಪ್ರಾಂಶುಪಾಲ ಫಾದರ್ ಜೋ. ಜೋ, ಹೆಡ್ ಬಾಯ್ ರಣವೀರ್, ಹೆಡ್ ಗರ್ಲ್ ಶ್ರಾವಣಿ ಪಾಟೀಲ್ ಜ್ಯುನಿಯರ್ ಹೆಡ್ ಬಾಯ್ ಜೀವನ್ ಜ್ಯುನಿಯರ್ ಹೆಡ್ ಗರ್ಲ್ ದೀಕ್ಷಾ ಇದ್ದರು.