ಸಂವಿಧಾನದಿಂದ ಎಲ್ಲರಿಗೂ ಸಮಾನತೆ: ಬನ್ನಾಡಿ

| Published : Apr 07 2024, 01:46 AM IST

ಸಾರಾಂಶ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಏರ್ಪಡಿಸಿದ್ದ ಡಿ.ಮಂಜುನಾಥ ಅವರು ನೀಡಿದ್ದ ದಿ.ಎಚ್.ಇಬ್ರಾಹಿಂ ಸ್ಮಾರಕ ದತ್ತಿ ನಿಧಿ ಕಾರ್ಯಕ್ರಮವನ್ನು ಕಸಾಪ ಅಧ್ಯಕ್ಷ ಡಿ.ಮಂಜುನಾಥ್‌ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಮ್ಮ ನಡುವೆ ಇದ್ದ ಅಸ್ಪೃಶ್ಯತೆ ಹೋಗಲಾಡಿಸಿ ಎಲ್ಲರನ್ನೂ ಸಮಾನಗೊಳಿಸಿದ್ದು ಸಂವಿಧಾನ ಎಂದು ಪ್ರಾಧ್ಯಾಪಕ ಡಾ.ಸಬಿತಾ ಬನ್ನಾಡಿ ಅಭಿಪ್ರಾಯಪಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಶಂಕರಘಟ್ಟದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸ್ನಾತಕೋತ್ತರ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ಡಿ.ಮಂಜುನಾಥ ಅವರು ನೀಡಿದ್ದ ದಿ.ಎಚ್.ಇಬ್ರಾಹಿಂ ಸ್ಮಾರಕ ದತ್ತಿ ನಿಧಿ ಕಾರ್ಯಕ್ರಮದ ಆಶಯದಂತೆ ಸಂವಿಧಾನ-ಭಾವೈಕ್ಯತೆ ವಿಚಾರವಾಗಿ ಉಪನ್ಯಾಸ ನೀಡಿದರು.

ಸಂವಿಧಾನ ವೈಯುಕ್ತಿಕ ಕಾನೂನುಗಳನ್ನು ಎಲ್ಲರಿಗೂ ನೀಡಿದೆ. ಹೆಣ್ಣು ಮಕ್ಕಳಿಗೆ ಸಮಾನತೆ ಅವಕಾಶ ನೀಡಿದೆ. ಸಾಮರಸ್ಯದ ಮೂಲಕ ಸರಿಪಡಿಸಿಕೊಳ್ಳಬೇಕು ಹಾಗೂ ಅಪರಾಧವನ್ನು ಮನ್ನಿಸಬಾರದು. ಒಡೆದಾಳುವ ನೀತಿ ಅನುಸರಿಸುವುದು ಸರಿಯಲ್ಲ. ಜಗತ್ತಿನಲ್ಲಿ ಹೆಣ್ಣು, ಗಂಡು ಸಮಾನ ಸಂಖ್ಯೆಯಲ್ಲಿದ್ದೇವೆ. ಜಗತ್ತು ಬದುಕಿದ್ದರೆ ಅದು ಹೆಂಗಸರಿಂದ. ವಿವೇಕ ಇಬ್ಬರಲ್ಲೂ ಇರಬೇಕು. ಇಬ್ಬರಲ್ಲಿರುವ ಹೆಣ್ಣುತನದಿಂದ ಸಹಬಾಳ್ವೆ, ಭಾವೈಕ್ಯತೆ ಉಳಿದಿದೆ ಎಂದು ವಿವರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ದೂರದೃಷ್ಟಿ ಹಾಗೂ ಡಿ.ದೇವರಾಜ ಅರಸು ಭೂ ಸುಧಾರಣೆ ಕಾನೂನು ತಂದು ಉಳುವವನೆ ಹೊಲದೊಡೆಯ ಎನ್ನುವ ನೀತಿ ಮೂಲಕ ಅನೇಕರಿಗೆ ಭೂಮಿ ಒಡೆತನ ದೊರೆಯಿತು ಎಂದು ಹೇಳಿದರು.

ಬಡತನ ದೂರವಾಗಿಸಿ ಮಕ್ಕಳಿಗೆ ಶಿಕ್ಷಣ ದೊರೆಯಬೇಕು ಎಂದು ಆಲೋಚಿಸಿ ವಿದ್ಯಾರ್ಥಿ ನಿಲಯ ಸ್ಥಾಪಿಸಿದರು. ನಮ್ಮೊಳಗಿದ್ದ ಸಾಮರಸ್ಯ, ಭಾವೈಕ್ಯತೆ ಕದಡಲು ಕಾರಣವೇನು. ಕುರುಡಾಗಿ ಯೋಚಿಸದೆ, ಮೊಬೈಲ್‌ನಲ್ಲಿ ಬರುವುದೇ ಸರಿ ಎಂದು ತೀರ್ಮಾನಿಸದೆ ನಿಮ್ಮ ಅರಿವನ್ನು ಹೆಚ್ಚಿಸಿಕೊಳ್ಳಿ ಎಂದು ವಿವರಿಸಿದರು.

ಭದ್ರಾವತಿ ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಧಿಕಾರಿ ಡಿ.ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಿಲಯ ಪಾಲಕರಾದ ಸಿ.ಎಂ.ರಮೇಶ್, ದಾಕ್ಷಾಯಿಣಿ, ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಞಯ್ಯ, ಎನ್. ಚಂದ್ರಕಲಾ, ಅಸ್ಮತ್, ಎಂ.ಎಂ. ಸ್ವಾಮಿ, ಭೈರಾಪುರ ಶಿವಪ್ಪಗೌಡ, ಎಚ್.ತಿಮ್ಮಪ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪುಷ್ಪಾ ಪ್ರಾರ್ಥಿಸಿ, ನಂದಿನಿ ಸ್ವಾಗತಿಸಿ, ಯೋಗಿತಾ ನಿರೂಪಿಸಿ, ಮಮತಾ ವಂದಿಸಿದರು.