ಸರ್ವ ದಾರ್ಶನಿಕರ ಸ್ಮರಣೆಯಲ್ಲಿ ಸಮಾನತೆಯಿದೆ. ಈ ಕಾರ್ಯಕ್ರಮದ ಮೂಲಕ ಎಲ್ಲರನ್ನೂ ಒಗ್ಗೂಡಿಸಿರುವುದು ಉತ್ತಮ ಬೆಳವಣಿಗೆ ಎಂದು ಸಿದ್ದಗಂಗಾ ಶ್ರೀಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ

ಸರ್ವ ದಾರ್ಶನಿಕರ ಸ್ಮರಣೆಯಲ್ಲಿ ಸಮಾನತೆಯಿದೆ. ಈ ಕಾರ್ಯಕ್ರಮದ ಮೂಲಕ ಎಲ್ಲರನ್ನೂ ಒಗ್ಗೂಡಿಸಿರುವುದು ಉತ್ತಮ ಬೆಳವಣಿಗೆ ಎಂದು ಸಿದ್ದಗಂಗಾ ಶ್ರೀಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ನಡೆದ ಸರ್ವ ದಾರ್ಶನಿಕರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ತಮ್ಮ ಜೀವನವನ್ನೇ ಸಮಾಜದ ಏಳಿಗೆಗಾಗಿ ಮುಡುಪಾಗಿಟ್ಟಂತಹ ಈ ನೆಲದ ಎಲ್ಲ ದಾರ್ಶನಿಕರು ಸೋದರತ್ವ, ಕರುಣೆ, ಪ್ರೀತಿ, ಶಾಂತಿಯನ್ನೇ ಸಾರಿದ್ದಾರೆ, ಸಮಾಜವನ್ನು ತಿದ್ದುವ, ಮನುಜನ ಜೀವನದ ಸಾರ್ಥಕತೆಯ ಮಾರ್ಗವನ್ನು ಬೋಧಿಸಿ ಅಮರರಾಗಿರುವ ಎಲ್ಲಾ ಧರ್ಮದ ದಾರ್ಶನಿಕರು, ಮಹನೀಯರ ಜಯಂತಿಯನ್ನು ಒಟ್ಟಾಗಿ ಆಚರಿಸುತ್ತಿರುವುದು ಸಾರ್ಥಕತೆಯೆನಿಸಿದೆ ಎಂದರು.

ಸಲಾಂ ಸಂವಿಧಾನ ಸಲಾಂ ಇಂಡಿಯ ಕಿರುಚಿತ್ರ ಬಿಡುಗಡೆಗಳಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ , ಶಾಸಕ ಕೆ.ಎನ್.ರಾಜಣ್ಣ, ವಿವಿಧ ಸಮುದಾಯದಿಂದ ದಾರ್ಶನಿಕರ ಜಯಂತಿ ಆಚರಣೆಗಳು ಬಹುಸಂಖ್ಯಾತ ಜನಾಂಗದ ವೈಭೋವೋಪೇತ ಆಚರಣೆಯಲ್ಲಿ ಮರೆಯಾಗುತ್ತಿವೆ. ಇಂದು ಇಲ್ಲಿ ನಡೆದಿರುವ ಸರ್ವ ಮಹನೀಯರ ಜಯಂತ್ಯುತ್ಸವ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಡೆ ವಿಸ್ತರಿಸಬೇಕಿದೆ. ಇಂತಹ ಕಾರ್ಯಗಳಿಗೆ ರಾಜಕೀಯ ಕಾರಣಕ್ಕೆ ಕೆಲವರು ವಿರೋಧಿಸಿದ್ದರೂ ಸಮಾಜಮುಖಿ ಕೆಲಸಗಳಿಗೆ ಸರ್ವರ ಬೆಂಬಲ ಇದ್ದೇ ಇರುತ್ತದೆ. ವಿರೋಧಿಗಳ ಟೀಕೆಗಳಿಗೆ ಕಿವಿಕೊಡದೆ ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ ಎಂದು ಶಾಸಕ ಸಿ.ಬಿ.ಸುರೇಶ್‌ಬಾಬುಗೆ ಸಲಹೆ ನೀಡಿದರು.

"ಸಾಧಕರು ದಾರ್ಶನಿಕರು'''''''' ೬೦೦ ಪುಟಗಳ ಮಹಾಗ್ರಂಥವನ್ನು ಬಿಡುಗಡೆಗೊಳಿಸಿದ ಹಿರಿಯ ಸಂಶೋಧಕ ನಾಡೋಜ ಡಾ. ಹಂಪನಾಗರಾಜಯ್ಯ ಮಾತನಾಡಿ ಇಂತಹ ಕಾರ್ಯಕ್ರಮವನ್ನು ನೋಡಿ ನಾನು ಮೂಕಸ್ಮಿತನಾದೆ. ಸಂವಿಧಾನದ ಕೇಂದ್ರ ಪ್ರಜ್ಞೆಯೇ ಈ ಸರ್ವ ದಾರ್ಶನಿಕರ ಜಯಂತ್ಯುತ್ಸವದಲ್ಲಿ ಅಡಗಿದೆ ಕೇವಲ ಸೀಮಿತ ಅವಧಿಯಲ್ಲಿ ಎಲ್ಲಾ ದಾರ್ಶನಿಕರ ಇತಿಹಾಸ, ಸಾಧನೆ, ಚಿಂತನೆಗಳನ್ನೊಳಗೊಂಡ ಸಮಗ್ರ ವಿವರಣೆಯನ್ನು ೬೦೦ ಪುಟಗಳ ಒಂದೇ ಪುಸ್ತಕದಡಿ ತಂದು ಬಿಡುಗಡೆಗೊಳಿಸಿರುವುದು ಕಾರ್ಯಕ್ರಮದ ಮೈಲಿಗಲ್ಲಾಗಿದೆ ಎಂದರು.

ಸಮಾರಂಭದಲ್ಲಿ ಕಾಗಿನೆಲೆ ಪೀಠದ ಶ್ರೀಈಶ್ವರಾನಂದಪುರಿಸ್ವಾಮಿಗಳು, ಶ್ರೀನೀಲಕಂಠಾಚಾರ್ಯರು, ಭೋವಿ ಪೀಠದ ಶ್ರೀ ಇಮ್ಮಡಿಸಿದ್ದರಾಮೇಶ್ವರ ಸ್ವಾಮಿಗಳು, ಮಾಚಿದೇವಮಠದ ಶ್ರೀಬಸವ ಮಾಚಿದೇವಸ್ವಾಮಿಗಳು, ಕುಂಬಾರಗುಮಡಯ್ಯಮಠದ ಶ್ರೀಬಸವಮೂರ್ತಿಸ್ವಾಮಿಗಳು ಬುದ್ದವಿಹಾರದ ಬೋಧಿತೇರೋ ನಳಂದಸ್ವಾಮಿಗಳು, ಫಾದರ್‌ಹ್ಯಾರಿ, ಡಾ. ಸೈಯದ್ ಷಾತಕ್ವಿಮಹಾನಗರ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಸಾಕೇತ್ ರಾಜ್ ಎಂ. ಭಾಗವಹಿಸಿದ್ದರು. ತಹಸೀಲ್ದಾರ್ ಕೆ.ಪುರಂದರ್‌ರವರು ಸ್ವಾಗತಿಸಿದರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಹಾತ್ಮಗಾಂಧೀಜಿ ಡಾ. ಬಿ.ಆರ್. ಅಂಬೇಡ್ಕರ್‌ರವರ ಕಂಚಿನ ಪುತ್ಥಳಿಗಳನ್ನು ಸಿದ್ದಗಂಗಾ ಶ್ರೀಗಳು ಅನಾವರಣಗೊಳಿಸಿದರು.