ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮೌಲ್ಯಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಎಲ್ಲರಲ್ಲಿ ಶರಣ ಭಾವನೆ ಬೆಳೆದರೆ ಅದು ನಮ್ಮೊಳಗೆ ಸಮಾನತೆಯನ್ನು ವೃದ್ಧಿಸುತ್ತದೆ ಎಂದು ಚಿಕ್ಕಮಗಳೂರು ಶ್ರೀ ಬಸವತತ್ವ ಪೀಠದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.ನಗರದ ಬಸವ ಕೇಂದ್ರದಲ್ಲಿ ನಡೆಯುತ್ತಿರುವ 13ನೇ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಶರಣರು ಪ್ರತಿಪಾದಿಸಿದ ಜೀವನ ಮೌಲ್ಯಗಳು ವಿಚಾರ ಕುರಿತು ಚಿಂತನ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಧೈರ್ಯ ಅತಿ ದೊಡ್ಡ ಮೌಲ್ಯ. ಅದು ನಮ್ಮೆಲ್ಲರಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ. ಸಮಯ ಪಾಲನೆ, ಧೈರ್ಯ ಮತ್ತು ಶಿವರೂಪಿ ಮೌಲ್ಯಗಳನ್ನು ಅಳವಡಿಸಿಕೊಂಡರೆ ಎಲ್ಲವೂ ಸಿದ್ಧಿಯಾಗುತ್ತದೆ ಎಂದರು.ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮೈಸೂರು ಕರಾಮುವಿವಿ ಕುಲಸಚಿವ ಡಾ.ಎಚ್.ವಿಶ್ವನಾಥ್ ಮಾತನಾಡಿ, ಭಕ್ತಿ, ಜೀವನ ಮೌಲ್ಯಗಳು ನಶಿಸುತ್ತಿವೆ. ಶರಣ ಸಾಹಿತ್ಯ ಪರಂಪರೆಯು ಅನೇಕ ಮಠಮಾನ್ಯಗಳ ಮಖಾಂತರ ಶೈಕ್ಷಣಿಕ, ಧಾರ್ಮಿಕ, ಆರ್ಥಿಕ, ದಾಸೋಹ ಕ್ಷೇತ್ರಕ್ಕೆ ಕಲ್ಯಾಣ ಕ್ರಾಂತಿಗೆ ಬುನಾದಿಯಾಗಿದೆ. ಶರಣ ಸಂಸ್ಕೃತಿಯಲ್ಲಿ ಮಹಿಳೆಯರಿಗೂ ಪೂರಕವಾದ ಸನ್ನಿವೇಶಗಳನ್ನು ಸೃಷ್ಟಿ ಮಾಡಿತ್ತು. ಮಹಿಳಾ ಸಮಾಜಕ್ಕೆ ಸಮಾನತೆಯನ್ನು ಅಕ್ಕಮಹಾದೇವಿ, ಬಸವಾದಿ ಶರಣರು ನೀಡಿದ್ದಾರೆ ಎಂದರು.
ಹಂಪಿ ವಿಶ್ರಾಂತ ಪ್ರಾಧ್ಯಾಪಕ ಡಾ.ಅಮರೇಶ ನುಗಡೋಣಿ ಮಾತನಾಡಿ, 900 ವರ್ಷದುದ್ದಕ್ಕೂ ವಚನ ಸಾಹಿತ್ಯವನ್ನು ಕೇಳುತ್ತಾ ಬಂದಿದ್ದೇವೆ. ಜನಸಾಮಾನ್ಯರು ಉದ್ದಾರ ಮಾಡುವುದಕ್ಕೆ ಸಮಾಜದಂಚಿನಿಂದ ಹುಟ್ಟಿನ ವ್ಯಕ್ತಿಯವರೆಗೆ ಸಂಚಲನ ಮೂಡಿಸುವ ಶಕ್ತಿ ವಚನಗಳು ಹೊಂದಿವೆ. ಸಮಾನರಾಗಿ ಬಾಳುವುದಕ್ಕೆ ಅನುವು ಮಾಡಿಕೊಡಲು ವಚನ ಸಾಹಿತ್ಯ ಪ್ರಾಮುಖ್ಯತೆ ಹೊಂದಿದೆ. ಯಾವುದೇ ಧರ್ಮಗಳಲ್ಲಾಗಲೀ ಸ್ತ್ರೀಯರಿಗೆ ಸ್ಥಾನಮಾನಗಳಿರಲಿಲ್ಲ ಅಂತಹ ಸಮಯದಲ್ಲಿ ಮಹಿಳಾ ಸ್ವಾತಂತ್ರಕ್ಕೆ ಬಸವಾದಿ ಶರಣರು 9ನೇ ಶತಮಾನದಲ್ಲಿ ಶ್ರಮಿಸಿದ್ದಾರೆ ಎಂದರು.ಕರ್ನಾಟಕ ರಾಜ್ಯ ಸಂಶೋಧನಾ ವೈಜ್ಞಾನಿಕ ಪರಿಷತ್ ಅಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ವೈಚಾರಿಕ ಪ್ರಜ್ಞೆ ಕುರಿತು ಉಪನ್ಯಾಸ ನೀಡುತ್ತಾ 12ನೇ ಶತಮಾನಗಳ ಹಿಂದೆ ವೈಚಾರಿಕ ಮೌಢ್ಯತೆ ತಾಂಡವವಾಡುತ್ತಿತ್ತು, ಬಸವಣ್ಣನವರ ಕಳಬೇಡ ಕೊಲಬೇಡ ಎಂಬ ಒಂದು ವಚನವನ್ನು ಅನುಸರಿಸಿದ್ದರೇ ಇಂದು ಕಾನೂನಿನಡಿ ಅನೇಕ ಸೆಕ್ಷನ್‌ಗಳು ಬರುತ್ತಿರರಲಿಲ್ಲ. ಶೂನ್ಯದಿಂದ ಏನನ್ನು ಸೃಷ್ಠಿಮಾಡಲು ಸಾಧ್ಯವಿಲ್ಲ ಎಂದು ವಿಜ್ಞಾನದಿಂದ ಸಾಬಿತಾಗಿದೆ.
ಇಂದಿನ ಮಕ್ಕಳಿಗೆ ವೈಜ್ಞಾನಿಕ ಅರಿವು ಮೂಡಿಸಬೇಕು. ವಾಮಾಚಾರಗಳಿಂದ ದೂರವಿರುವುದನ್ನು ಕಲಿಸಿ, ಮನೆಗಳಲ್ಲಿ ಟಿವಿ ಮಾಧ್ಯಮಗಳನ್ನು ಮೊಬೈಲ್ ಬಳಕೆಯನ್ನು ದೂರ ಮಾಡಿಸಿ, ಸಂಸ್ಕೃತಿ, ಸಾಹಿತ್ಯ ಮತ್ತು ಪುಸ್ತಕ ಓದುವ ಹವ್ಯಾಸ ಮೂಡಿಸಿ ಎಂದು ಕರೆ ನೀಡಿದರು.ಪ್ರಾಧ್ಯಾಪಕ ಡಾ.ಯತೀಶ್ವರ ಮತನಾಡಿ, ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೈಸೂರು ಸಿದ್ಧರಹಳ್ಳಿ ಪಾರಮಾರ್ಥ ಗವಿಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಸಮ್ಮೇಳನಾಧ್ಯಕ್ಷರಾದ ಡಾ.ಸಿದ್ದರಾಮ ಬೆಲ್ದಾಳ ಶರಣರು, ಮರ್ಚೆಂಟ್ಸ್ ಬ್ಯಾಂಕ್ ಅಧ್ಯಕ್ಷ ಶ್ರೀ ಎಸ್.ಆರ್.ಲಕ್ಷ್ಮಿಕಾಂತ್‌ರೆಡ್ಡಿ, ಸಾಹಿತಿ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಜೆ.ಎಂ.ಜಯಕುಮಾರ್, ಸಾಹಿತಿ ಚಂದ್ರಶೇಖರ ತಾಳ್ಯ, ಹಿರಿಯ ಪತ್ರಕರ್ತ ಶ್ರೀಟಿ.ಕೆ.ಬಸವರಾಜ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್‌ಗೌಡಗೆರೆ, ಲಿಂಗರಾಜು, ಪ್ರಗತಿಪರ ಚಿಂತಕ ಎಚ್.ಆನಂದಕುಮಾರ್, ಪಾಲನೇತ್ರ, ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ್ಷ ಡಾ.ಸಿ.ಸೋಮಶೇಖರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೆ.ಎಂ.ವೀರೇಶ್ ಉಪಸ್ಥಿತರಿದ್ದರು.
ಲಾಸಿಕ ಫೌಂಡೇಶನ್ ಶ್ವೇತಾ ಭಟ್ ಮತ್ತು ತಂಡದವರು ರೂಪಕ, ಎಸ್.ಎಸ್.ಹಿರೇಮಠ್ ತಂಡದವರಿಂದ ವಚನದಲ್ಲಿ ಜನಪದಗೀತೆ ಕಾರ್ಯಕ್ರಮ ನಡೆಸಿಕೊಟ್ಟರು.