ಸಂವಿಧಾನದಿಂದಾಗಿ ಸಮಾನತೆ ಆಶಯ ಸಾಕಾರ: ಡಾ.ಎಂ.ಚಂದ್ರಪ್ಪ

| Published : Jan 27 2024, 01:18 AM IST

ಸಾರಾಂಶ

ತಾನು ಬಡತನ, ನಿಷ್ಠುರಗಳನ್ನೆಲ್ಲಾ ದಾಟಿ ದೇಶದ ಎಲ್ಲರಿಗೂ ಸಮಾನತೆಯ ಸಂವಿಧಾನ ರೂಪಿಸಿದ ಡಾ.ಬಿ.ಆರ್‌. ಅಂಬೇಡ್ಕರ್‌ ಎಂದಿಗೂ ಸ್ಮರಣಾರ್ಹರು ಎಂದು ಶಾಸಕ ಡಾ.ಎಂ.ಚಂದ್ರಪ್ಪ ನೆನೆದರು.

ಕನ್ನಡಪ್ರಭವಾರ್ತೆ ಹೊಳಲ್ಕೆರೆ

ಪ್ರಪಂಚದಲ್ಲಿಯೇ ಅತ್ಯುತ್ತಮವಾದ ಸಂವಿಧಾನವನ್ನು ನೀಡಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರು ನಮ್ಮ ಕಣ್ಣ ಮುಂದೆ ಇಲ್ಲ. ಆದರೆ ಅವರು ಕೊಟ್ಟಿರುವ ಸಂವಿಧಾನದಿಂದ ಎಲ್ಲರೂ ಸಮಾನವಾಗಿ ಜೀವಿಸುತ್ತಿದ್ದೇವೆಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಸ್ಮರಿಸಿದರು.

ಪಟ್ಟಣದ ಕೊಟ್ರೆನಂಜಪ್ಪ ಪದವಿಪೂರ್ವ ಕಾಲೇಜು ಆವರಣದಲ್ಲಿ ಶುಕ್ರವಾರ 75 ನೇ ಗಣರಾಜ್ಯೋತ್ಸವವನ್ನು ಧ್ವಜಾರೋಹಣ ನೆರವೇರಿಸುವ ಮೂಲಕ ನೆರವೇರಿಸಿ ಮಾತನಾಡಿದ ಅವರು, 140 ಕೋಟಿ ಜನರು ಸಂವಿಧಾನದಡಿ ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಂಡು ಬದುಕುತ್ತಿದ್ದಾರೆ ಎಂದು ಹೇಳಿದರು.

ಹೊಳಲ್ಕೆರೆ ತಾಲೂಕಿನಲ್ಲಿ ಹಸಿರು ಪರಿಸರವಿರುವ ಜಾಗವನ್ನು ಗುರುತಿಸಿ ಗುಣಮಟ್ಟದ ಶಾಲಾ-ಕಾಲೇಜುಗಳನ್ನು ಕಟ್ಟಿಸಿ ಮೂಲಭೂತ ಸೌಲಭ್ಯ ನೀಡಿ ಮಕ್ಕಳಿಗೆ ಶಿಕ್ಷಣ ಕೊಡಲಾಗುತ್ತಿದೆ. ರಾಜ್ಯದಲ್ಲಿಯೇ ಯಾವ ಶಾಸಕರೂ ಸರ್ಕಾರಿ ಶಾಲೆಗಳಿಗೆ ಉಚಿತವಾಗಿ ಬಸ್ ನೀಡದ ಇಂತಹ ಕಾಲದಲ್ಲಿ ನನ್ನ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಯ ಬಡ ಮಕ್ಕಳ ಶಿಕ್ಷಣಕ್ಕಾಗಿ ಫ್ರೀ ಬಸ್‍ಗಳ ಸಂಚಾರ ಆರಂಭಿಸಿದ್ದೇನೆ ಎಂದು ತಿಳಿಸಿದರು.

ಮಹಾತ್ಮಗಾಂದಿ, ಸುಭಾಷ್‍ಚಂದ್ರಬೋಸ್, ನೆಹರು, ಬಾಲಗಂಗಾಧರನಾಥ್ ತಿಲಕ್ ಇವರುಗಳು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ್ದಾರೆ. ರಾಮರಾಜ್ಯದ ಗಾಂಧಿ ಕನಸು ನನಸಾಗುವತ್ತ ಭಾರತ ಸಾಗುತ್ತಿದೆ. ಕಟ್ಟ ಕಡೆಯ ವ್ಯಕ್ತಿಯ, ರೈತರ, ವಿದ್ಯಾರ್ಥಿಗಳ, ಕಾರ್ಮಿಕರ, ಬಡವರ ಸಮಸ್ಯೆಗಳನ್ನು ಅರ್ಥಮಾಡಿ ಕೊಂಡು ರಾಜಕಾರಣಿಗಳು ಕೆಲಸ ಮಾಡಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.

ತಹಶೀಲ್ದಾರ್ ಬೀಬಿ ಫಾತಿಮಾ, ಆರಕ್ಷಕ ವೃತ್ತ ನಿರೀಕ್ಷಕ ಮಾರ್ತಾಂಡಪ್ಪ ಬಿ.ಚಿಕ್ಕಣ್ಣವರ್, ಪುರಸಭೆ ಮುಖ್ಯಾಧಿಕಾರಿ ವಾಸೀಂ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಧಿಕಾರಿ ಎಸ್.ಶಿವಪ್ರಕಾಶ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಹೆಚ್. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಶಿವ ಮೂರ್ತಿ, ಪುರಸಭೆಯ ಎಲ್ಲಾ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದರು.