ಕನ್ನಡಪ್ರಭ ವಾರ್ತೆ ಬಾಗಲಕೋಟೆ ಧರ್ಮದ ಶಿಲ್ಪಿ ಬಸವಣ್ಣ, ಸಂವಿಧಾನ ಶಿಲ್ಪಿ ಅಂಬೇಡ್ಕರ. ಇಬ್ಬರ ಚಿಂತನೆ, ಆಲೋಚನೆಗಳು ಒಂದೇ ಆಗಿದ್ದವು. ಶೋಷಿತ ಸಮಾಜಕ್ಕೆ ನ್ಯಾಯ ಕೊಡಿಸುವ ಕಾರ್ಯವನ್ನು ಇಬ್ಬರು ಮಾಡಿದರು ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಮಹಾಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಧರ್ಮದ ಶಿಲ್ಪಿ ಬಸವಣ್ಣ, ಸಂವಿಧಾನ ಶಿಲ್ಪಿ ಅಂಬೇಡ್ಕರ. ಇಬ್ಬರ ಚಿಂತನೆ, ಆಲೋಚನೆಗಳು ಒಂದೇ ಆಗಿದ್ದವು. ಶೋಷಿತ ಸಮಾಜಕ್ಕೆ ನ್ಯಾಯ ಕೊಡಿಸುವ ಕಾರ್ಯವನ್ನು ಇಬ್ಬರು ಮಾಡಿದರು ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಮಹಾಸ್ವಾಮೀಜಿ ಹೇಳಿದರು.

ಅಂಬೇಡ್ಕರ ಜಯಂತಿ ನಿಮಿತ್ತ ಮಂಗಳವಾರ ಕೂಡಲಸಂಗಮದ ಸಂಗಮೇಶ್ವರ ದೇವಾಲಯ ಆವರಣದಲ್ಲಿ ಎಂಪಿಜಿಎಸ್ ತಂಡದವರಿಂದ ನಡೆದ ಭೀಮ ಸಂಕಲ್ಪ-ಬಸವ ಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿ ಅವರು, ಶ್ರೇಣಿಕೃತ ವ್ಯವಸ್ಥೆ ಕಿತ್ತೊಗೆಯದೇ ಸಮಾನತೆ ತರಲು ಸಾಧ್ಯವಿಲ್ಲ. ಎಲ್ಲರೂ ಜೀವನದಲ್ಲಿ ಸಮಾನತೆಯ ತತ್ವ ಅಳವಡಿಸಿಕೊಳ್ಳಬೇಕು. ಇಂದು ನಾವೆಲ್ಲರೂ ಜನಕಲ್ಯಾಣಕ್ಕೆ ದುಡಿದ ನಾಯಕರನ್ನು ಸಮಾಜ ನಡೆಸಿಕೊಂಡ ರೀತಿಯನ್ನು ಅರಿಯುವ ಅಗತ್ಯ ಇದೆ. ಸಮ ಸಮಾಜದೊಂದಿಗೆ ನವ ಸಮಾಜ ನಿರ್ಮಾಣಕ್ಕೆ ಬದ್ಧರಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಭಾಷಾ ಭಾರತಿ ಮುಖ್ಯಸ್ಥ ಡಾ.ಜಿ.ಪ್ರಶಾಂತ ನಾಯಕ ಮಾತನಾಡಿ, ಜಾತಿಯ ಹೆಸರಿನಲ್ಲಿ ಏನೇ ಮಾಡಿದರು ಅದು ಬಹುಕಾಲ ಉಳಿಯುವುದಿಲ್ಲ. ಮನುಷ್ಯರಾಗಿ ಮಾಡಿದ ಕೆಲಸ ಶಾಶ್ವತ. ಇಂದು ಚರಿತ್ರೆಯನ್ನು ತಿದ್ದುವ, ತೀಡುವ ಕಾರ್ಯ ನಡೆದಿದೆ. ಅದನ್ನು ಅರಿಯುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು. ಜಗತ್ತಿನಲ್ಲಿಯೇ ಮೊಟ್ಟ ಮೊದಲು ಸಾಂಘಿಕ ಚಳವಳಿ ಮಾಡಿದ್ದು ಬಸವಣ್ಣನ ನೇತೃತ್ವದಲ್ಲಿ. ಇಂದು ರಾಜ್ಯ ಸರ್ಕಾರ ಆಚರಣೆ ಮಾಡುವ ಶೇ.80ರಷ್ಟು ಮಹಾನ್ ನಾಯಕರ ಜಯಂತಿಗಳಿಗೆ ಮೂಲ 12ನೇ ಶತಮಾನದ ಬಸವಣ್ಣ ಎಂಬುದನ್ನು ಎಲ್ಲರೂ ಅರಿಯಬೇಕು ಎಂದರು.

ಆಳಂದ ಬೌದ್ಧ ಬಿಕ್ಕು ಅಮರ ಜ್ಯೋತಿ ಬಂತೇಜಿ ಮಾತನಾಡಿ, ಬುದ್ಧ-ಬಸವಣ್ಣನ ವಿಚಾರಗಳೇ ಇಂದು ಕಾನೂನುಗಳಾಗಿವೆ. ಇಬ್ಬರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನವ ಸಮಾಜ ನಿರ್ಮಾಣ ಮಾಡೋಣ ಎಂದು ಹೇಳಿದರು.

ಪ್ರಗತಿಪರ ಚಿಂತಕ ಎಂ.ಪಿ.ಗಿರೀಶ್ ಮಾತನಾಡಿ, ರಾಜಪ್ರಭುತ್ವದ ವಿರುದ್ಧ ಸಮಾನತೆಯ ಸಮಾಜ ಕಟ್ಟಿದವರು ಬಸವಣ್ಣ. ಈ ನೆಲದಿಂದಲೆ ಸಮಾಜದಲ್ಲಿನ ಜನರನ್ನು ಪರಿವರ್ತನೆ ಮಾಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾವು ಇದ್ದ ಸ್ಥಳ, ಜಾಗದಲ್ಲಿಯೇ ಮೊದಲು ಪರಿವರ್ತನೆ ತರಬೇಕು. ಅಂಬೇಡ್ಕರ ಮಹಾನ್ ದೇಶಭಕ್ತ. ಅವರನ್ನು ಜಾತಿಗೆ ಸೀಮಿತ ಮಾಡುವ ಕಾರ್ಯವನ್ನು ಯಾರು ಮಾಡಬಾರದು ಎಂದರು.

ಸಮಾರಂಭದಲ್ಲಿ ದೇವನಹಳ್ಳಿ ಮಾತಂಗ ಸಂಸ್ಕಾರ ಗುರುಪೀಠದ ಮನು ಸಿದ್ದಾರ್ಥ ಗುರೂಜಿ, ಹಾವೇರಿ ಸಮಾಜಿಕ ಚಿಂತಕ ಸೈಯದ್ ರೋಶನ್ ಮುಲ್ಲಾ, ಉದ್ಯಮಿ ಸಿ.ಎಂ.ಫೈಜ್, ಚಿತ್ರದುರ್ಗ ಜಿಲ್ಲೆ ಮಲ್ಲಾಡಿಹಳ್ಳಿ ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಎನ್.ಎಸ್.ರುದ್ರೇಶ್, ಮೈಸೂರು ಅಂಬೇಡ್ಕರ ವಿವಿಧೋದ್ದೇಶ ಸಹಕಾರಿ ಸಂಘದ ರಾಜ್ಯಾಧ್ಯಕ್ಷ ರಾಮಣ್ಣನವರು, ಚಿಕ್ಕಬಳ್ಳಾಪುರದ ಮಾತಾಜಿ ಮಂಜುಳಮ್ಮ ಮಾತನಾಡಿದರು.

ಇಲಕಲ್ಲ ಮಹಾಂತ ಕಿರಣ ಸಂಗೀತ ವಿದ್ಯಾಲಯದ ವಿನಯ ಹರಿಹರ ತಂಡದವರ ವಚನ ಗಾಯನ, ಬೆಂಗಳೂರು ಜಂಬೆ ಬಾಲು ತಂಡದವರ ಕ್ರಾಂತಿ ಗೀತೆ ಎಲ್ಲರ ಗಮನ ಸೆಳೆದವು. ಚಂದ್ರಹಾಸ ಹಿರೇಮಳಲಿ ಸ್ವಾಗತಿಸಿದರು. ಎಂ.ವಿ.ಆರ್.ಪ್ರಭಾಕರ ನಿರೂಪಿಸಿದರು. ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಯ ವಿವಿಧ ಸಮುದಾಯದ 300ಕ್ಕೂ ಅಧಿಕ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದುಶ್ಚಟಗಳನ್ನು ಬಿಡುವ, ಬಸವಣ್ಣ, ಅಂಬೇಡ್ಕರರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಿದರು.