ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಲಿಂಗತ್ವ ಅಲ್ಪಸಂಖ್ಯಾತ ಮತ್ತು ದಮನಿತ ಮಹಿಳೆಯರಿಗೂ ಸಮಾನ ಅವಕಾಶ ಹಕ್ಕುಗಳು ಸಿಗುವಂತಾಗಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒ ಗಿತ್ತೆ ಮಾಧವ ವಿಠಲ ರಾವ್ ಹೇಳಿದರು.ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕ, ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಲಿಂಗತ್ವ ಅಲ್ಪಸಂಖ್ಯಾತ ಮತ್ತು ದಮನಿತ ಮಹಿಳೆಯರಿಗೆ ಕಾನೂನು ಅರಿವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲಿಂಗತ್ವ ಅಲ್ಪಸಂಖ್ಯಾತರು ಎಂದಾಕ್ಷಣ ಸಮಾಜ ಅವರನ್ನು ನೋಡುವ ದೃಷ್ಟಿಕೋನವೇ ಬೇರೆ. ಈ ರೀತಿ ತಾರತಮ್ಯ ಮಾಡದೇ ಪ್ರತಿಯೊಬ್ಬರನ್ನು ಸಮಾನ ದೃಷ್ಟಿಯಲ್ಲಿ ಕಾಣಬೇಕು. ಅವರು ಕೂಡ ಈ ವ್ಯವಸ್ಥೆಯ ಒಂದು ಭಾಗ. ಎಲ್ಲರಂತೆ ಅವರಿಗೂ ಕೂಡ, ಸಮಾನತೆ, ಸ್ವತಂತ್ರ ಹಕ್ಕುಗಳಿವೆ. ಆದರೆ ಇಂದಿಗೂ ಅವರಿಗೆ ಸಮಾನ ಅವಕಾಶ, ಹಕ್ಕುಗಳು ದೊರೆಯುತ್ತಿಲ್ಲ ಎಂದು ಹೇಳಿದರು.ಯಾವುದೇ ಸಮಾಜದಲ್ಲಿ ಬಡವ, ಶ್ರೀಮಂತ, ಪುರುಷ ಮತ್ತು ಮಹಿಳೆಯರು ಮಕ್ಕಳೆನ್ನದೇ, ಲಿಂಗ ತಾರತಮ್ಯ ಮಾಡದೇ, ಸಮಾನ ದೃಷ್ಠಿಯಲ್ಲಿ ಕಾಣಬೇಕು. ಸರ್ಕಾರದ ಯೋಜನೆಗಳು ಅರ್ಹರಿಗೆ ಸಿಗುವಂತಾಗಬೇಕು. ಲಿಂಗತ್ವ ಅಲ್ಪಸಂಖ್ಯಾತ ಮತ್ತು ದಮನಿತ ಮಹಿಳೆಯರ ಹಿತದೃಷ್ಠಿಗಾಗಿ ಹಲವು ಕಾನೂನು ರೂಪಿಸಿದ್ದು, ತುಂಬಾ ಕಠಿಣವಾಗಿವೆ ಎಂದರು.
ದೇಶವನ್ನು ಸಂಸ್ಕೃತಿಯಲ್ಲಿ ಉನ್ನತ ಮಟ್ಟದಲ್ಲಿ ಕಾಣುವರು. ತಾರತಮ್ಯ ಮಾಡದೇ ಉತ್ತಮ ರೀತಿಯಲ್ಲಿ ಬಳಸಿಕೊಂಡಲ್ಲಿ ದೇಶದ ಅಭಿವೃದ್ಧಿಗೆ ಸಹಾಯವಾಗಲಿದ್ದಾರೆ. ಸರ್ಕಾರವು ಜನಸಾಮಾನ್ಯರಿಗೂ ಸಮಾನ ಹಕ್ಕು, ಮೂಲಭೂತ ಸೌಕರ್ಯಗಳನ್ನು ನೀಡಲು ಹಲವು ಯೋಜನೆ, ಕಾಯ್ದೆಗಳನ್ನು ರೂಪಿಸಿದೆ ಎಂದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ ಮಾತನಾಡಿ, ಸಾರ್ವಜನಿಕವಾಗಿ ಸಂಘರ್ಷ ಉಂಟಾದಲ್ಲಿ ಪೊಲೀಸ್ ಇಲಾಖೆ ಪಾಲುದಾರಿಕೆ ವಹಿಸುತ್ತದೆ. ಸಂಘರ್ಷಕ್ಕೆ ಎಡೆ ಮಾಡದ ರೀತಿಯಲ್ಲಿ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಂಡು ಕಾನೂನಿನ ಚೌಕಟ್ಟಿನಲ್ಲಿ ರಕ್ಷಣೆ ನೀಡಲಿದೆ. ಲಿಂಗತ್ವ ಅಲ್ಪಸಂಖ್ಯಾತ ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಹಲವಾರು ಭಾರಿ ಮಾತಿನ ಚಕಮಕಿ ನಡೆದಿರುವ ನಿದರ್ಶನಗಳಿವೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎಂ.ಪೂರ್ಣಿಮಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜನಾಯ್ಕ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ, ಅಭಯ ಸ್ವಂದನ ಸಂಸ್ಥೆ ಅಧ್ಯಕ್ಷೆ ಎಸ್.ಟಿ.ಚೈತ್ರ, ದುರ್ಗಾಶಕ್ತಿ ಏಡ್ಸ್ ತಡೆಗಟ್ಟುವ ಮಹಿಳಾ ಸಂಘದ ಅಧ್ಯಕ್ಷೆ ಶಾಂತಿಬಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಗುರುಪ್ರಸಾದ್, ಸಖಿ ಒನ್ ಸ್ಟಾಪ್ ಸೆಂಟರ್ ಕಾನೂನು ಸಲಹೆಗಾರರಾದ ತಂಜಿಮಾ ಕೌಸರ್, ಮಹಿಳಾ ಸಬಲೀಕರಣ ಘಟಕ ಜಿಲ್ಲಾ ಸಂಯೋಜಕ ಜಗದೀಶ್ ಮತ್ತಿತರರು ಹಾಜರಿದ್ದರು.