ಭಾರತದಲ್ಲಿ ಭ್ರಷ್ಟಾಚಾರ ಬ್ರಹ್ಮಾಂಡ ರೀತಿಯಲ್ಲಿ ವ್ಯಾಪಿಸಿದ್ದು, ಅದನ್ನು ಬೇರು ಸಮೇತ ನಿರ್ಮೂಲನೆ ಮಾಡುವುದು ಕಷ್ಟಕರ ಎನಿಸಿದರೂ ಅಸಾಧ್ಯವೇನಿಲ್ಲ ಎಂದು ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಕಲಬುರಗಿ ಭಾರತದಲ್ಲಿ ಭ್ರಷ್ಟಾಚಾರ ಬ್ರಹ್ಮಾಂಡ ರೀತಿಯಲ್ಲಿ ವ್ಯಾಪಿಸಿದ್ದು, ಅದನ್ನು ಬೇರು ಸಮೇತ ನಿರ್ಮೂಲನೆ ಮಾಡುವುದು ಕಷ್ಟಕರ ಎನಿಸಿದರೂ ಅಸಾಧ್ಯವೇನಿಲ್ಲ ಎಂದು ಹಿರಿಯ ಪತ್ರಕರ್ತ ಶ್ರೀನಿವಾಸ ಸಿರನೂರಕರ ಅಭಿಪ್ರಾಯಪಟ್ಟರು.ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಕಾರ್ಯಾಚರಣೆ ಸಮಿತಿಯ 3ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.ಭಾರತವು ಕರ್ಮಭೂಮಿ ಹಾಗೂ ಧರ್ಮದಿಂದ ಬಾಳಿ ಬದುಕುತ್ತಿರುವ ಭೂಮಿಯಾಗಿದೆ. ಆದರೆ ಇಂದು ಭಾರತ ಮಾತೆಯ ಮಡಿಲಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಭ್ರಷ್ಟಾಚಾರ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೂ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಯುವಕರಲ್ಲಿ ಭ್ರಷ್ಟಾಚಾರದ ಪರಿಣಾಮದ ಬಗ್ಗೆ ಅರಿವು ಮೂಡಿಸಬೇಕು. ಈಗಲೇ ಇದರ ನಿರ್ಮೂಲನೆಗೆ ಮುಂದಾಗದಿದ್ದರೆ ದೇಶದ ಭವಿಷ್ಯಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಕಳವಳ ವ್ಯಕ್ತಪಡಿಸಿದರು.ಮುಖ್ಯ ಅತಿಥಿಗಳಾಗಿದ್ದ ಲೋಕಾಯುಕ್ತ ಪೊಲೀಸ್ ಉಪಅಧಿಕ್ಷಕ ಡಾ.ಬಸವರಾಜ ಯಲಿಗಾರ ಮಾತನಾಡಿ, ಭ್ರಷ್ಟಾಚಾರ ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆದರೆ ಈಗ ಇಡೀ ಜಗತ್ತಿಗೆ ಮಾರಕವಾಗಿ ಪರಿಣಮಿಸಿದೆ. ಇದರ ನಿರ್ಮೂಲನೆಗೆ ಸಂಘಟನೆ ಸುಮಾರು 15 ವರ್ಷಗಳಿಂದ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಹಿಳಾ ಪೊಲೀಸ್ ಠಾಣೆಯ ಸಿಪಿಐ ಕುಬೇರ ರಾಯಮನೆ ಮಾತನಾಡಿ, ಯಾವುದೇ ಭ್ರಷ್ಟಾಚಾರ ಬಯಲಿಗೆಳೆಯ ಬೇಕಾದರೆ ಸೂಕ್ತ ದಾಖಲೆಗಳನ್ನು ಕಲೆ ಹಾಕಬೇಕು. ಭ್ರಷ್ಟ ಅಧಿಕಾರಿಗಳನ್ನು ಶಿಕ್ಷೆಗೆ ಗುರಿ ಪಡಿಸಬೇಕಾದರೆ ಸೂಕ್ತ ತನಿಖೆ ನಡೆಸಬೇಕು. ಅಂದಾಗ ಮಾತ್ರ ಭ್ರಷ್ಟಾಚಾರ ತಡೆಗಟ್ಟಲು ಸಾಧ್ಯ ಎಂದು ಹೇಳಿದರು.ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ದಳ ಮತ್ತು ಕಾರ್ಯಾಚರಣೆ ದಕ್ಷಿಣ ಭಾರತದ ಅಧ್ಯಕ್ಷ ಡಾ.ಎ.ಎಸ್.ಭದ್ರಶೇಟ್ಟಿ ಮಾತನಾಡಿ, ಭ್ರಷ್ಟಾಚಾರ ಎಂಬುದು ಒಂದು ಸಾಮಾಜಿಕ ಪಿಡುಗು. ಇದನ್ನು ತಡೆಗಟ್ಟಲು ಸಮಿತಿ ವಿವಿಧ ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ಹಗಲಿರುಳು ಶ್ರಮಿಸುತ್ತಿದೆ ಎಂದರು.

ಶ್ರೀನಿವಾಸ ಸರಡಗಿಯ ಚಿಕ್ಕ ವೀರೇಶ್ವರ ಹಿರೇಮಠ ಸಂಸ್ಥಾನದ ಡಾ.ರೇವಣಸಿದ್ಧ ಶಿವಾಚಾರ್ಯರು ಸಾನಿಧ್ಯ ಮಾತನಾಡಿ, ಇಂದು ಹಳ್ಳಿಯಿಂದ ದಿಲ್ಲಿವರೆಗೂ ಭ್ರಷ್ಟಾಚಾರ ನಾಯಿಕೊಡೆಯಂತೆ ಹಬ್ಬಿ ದೇಶಕ್ಕೆ ಕಂಟಕವಾಗಿದೆ. ಭ್ರಷ್ಟಾಚಾರ ವಿರುದ್ಧ ಹೋರಾಡಲು ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಮತ್ತು ಕಾರ್ಯಾಚರಣೆ ಸಮಿತಿ ನಿರಂತರ ಜಾಗೃತಿ ಸಭೆಗಳನ್ನು ಕೈಗೆತ್ತಿಕೊಂಡಿದ್ದು ಸಂತೋಷ ತಂದಿದೆ. ಭ್ರಷ್ಟಾಚಾರ ವಿರುದ್ಧ ಹೋರಾಡುತ್ತಿರುವ ಸಮಿತಿಯ ಕೈ ಬಲಪಡಿಸಲು ಸಾರ್ವಜನಿಕರು ಮುಂದಾಗಬೇಕು ಎಂದು ಕರೆ ನೀಡಿದರು.ಡಾ.ಶಿವರಾಜ ಪಾಟೀಲ ಪ್ರಸ್ತಾವನೆಗೈದು, ಈ ಸಂಘಟನೆ ರಾಷ್ಟ್ರೀಯ ಸಂಘಟನೆಯಾಗಿದೆ.ಇದರ ಕಾರ್ಯವ್ಯಾಪ್ತಿ ಪ್ರತಿ ಜಿಲ್ಲೆಯಲ್ಲಿ, ತಾಲ್ಲೂಕುಗಳಲ್ಲಿ ವಿಸ್ತರಿಸಲಾಗಿದೆ. ಎಲ್ಲಿಯಾದರೂ ಭ್ರಷ್ಟತೆ ಕಂಡು ಬಂದರೆ ತಕ್ಷಣ ಕಾರ್ಯಪಡೆ ಸನ್ನದ್ಧವಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಶ್ಲಾಘಿಸಿದರು.ಸಮಿತಿಯ ಕಲಬುರಗಿ ಜಿಲ್ಲಾಧ್ಯಕ್ಷ ಸುರೇಶ ಕಲಶೆಟ್ಟಿ, ದಭಾ ಪ್ರ. ಕಾರ್ಯದರ್ಶಿ ಶಾಮರಾವ್ ಪ್ಯಾಟಿ, ಶ್ರೀಶೈಲ್‌, ಶೇಷಾಧ್ರಿ ಕುಲಕರ್ಣಿ ಅನೇಕರಿದ್ದರು.