ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಶಿಕ್ಷಣದಿಂದ ಮಾತ್ರ ಸಾಧ್ಯ: ಸಿದ್ದರಾಮ

| Published : Jun 17 2024, 01:33 AM IST

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಶಿಕ್ಷಣದಿಂದ ಮಾತ್ರ ಸಾಧ್ಯ: ಸಿದ್ದರಾಮ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನದ 21ನೇ ವಿಧಿ 6ರಿಂದ 14 ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕೆಂದು ಹೇಳುತ್ತದೆ. ಶಿಕ್ಷಣದಿಂದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯವಿದ್ದು, ಶಿಕ್ಷಣವು ಪ್ರತಿ ಮಗುವಿನ ಮೂಲಭೂತ ಹಕ್ಕು ಆಗಿದೆ.

ಕನ್ನಡಪ್ರಭ ವಾರ್ತೆ ಶಹಾಪುರ

ಶಿಕ್ಷಣದಿಂದ ಮಾತ್ರವೇ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯವಿದ್ದು, ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು ಎಂದು ಶಹಾಪುರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿದ್ದರಾಮ ಟಿ.ಪಿ. ಅವರು ತಿಳಿಸಿದರು.

ನಗರದ ಡಿ.ಡಿ.ಯು ಕೇಂದ್ರೀಯ ಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ, ಕಂದಾಯ ಇಲಾಖೆ, ಯಾದಗಿರಿ ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಕಚೇರಿ, ತಾಲೂಕು ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಡಿ.ಡಿ.ಯು ಕೇಂದ್ರೀಯ ಶಾಲೆ ಶಹಾಪುರ, ವರ್ಲ್ಡ್ ವಿಷನ್ ಸಂಸ್ಥೆ ಶಹಾಪುರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದ 21ನೇ ವಿಧಿ 6ರಿಂದ 14 ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸಬೇಕೆಂದು ಹೇಳುತ್ತದೆ. ಶಿಕ್ಷಣದಿಂದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡಲು ಸಾಧ್ಯವಿದ್ದು, ಶಿಕ್ಷಣವು ಪ್ರತಿ ಮಗುವಿನ ಮೂಲಭೂತ ಹಕ್ಕು ಆಗಿದೆ ಎಂದರು.

ಪ್ಯಾನಲ್ ವಕೀಲರು ಹಾಗೂ ವಿಶೇಷ ಸಂಪನ್ಮೂಲ ವ್ಯಕ್ತಿ ಮಲ್ಲಪ್ಪ ಕುರಿ ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ, ಗ್ಯಾರೇಜ್, ಕಾರ್ಖಾನೆ, ಹೋಟೆಲ್, ರೆಸ್ಟೋರೆಂಟ್, ಡಾಬಾ, ಮನೆಗೆಲಸ ಇತರೆ ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದರು.

ಸಹಾಯಕ ಶಿಶು ಯೋಜನಾಭಿವೃದ್ಧಿ ಅಧಿಕಾರಿ ಸಿದ್ದನಗೌಡ ಬಿರಾದಾರ್ ಮಾತನಾಡಿ, ಕಳೆದು ಹೋದ ಮಕ್ಕಳು, ದೌರ್ಜನ್ಯಕ್ಕೆ ಒಳಗಾದ ಮಕ್ಕಳು, ಓಡಿ ಹೋದ ಮಕ್ಕಳು, ವೈದ್ಯಕೀಯ ನೆರವಿಗಾಗಿ ಅಗತ್ಯ ಇರುವ ಮಕ್ಕಳು ಪೋಷಣೆ ಮತ್ತು ರಕ್ಷಣೆಯ ಅಗತ್ಯ ಇರುವ ಮಕ್ಕಳು, ಚಿಂದಿ ಆಯುವ ಮಕ್ಕಳು, ಭಿಕ್ಷೆ ಬೇಡುವ ಮಕ್ಕಳು ಹಾಗೂ ಸಂಕಷ್ಟದಲ್ಲಿರುವ ಎಲ್ಲಾ ಮಕ್ಕಳ ನೆರವಿಗಾಗಿ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡಬಹುದಾಗಿದೆ. ನಿಮ್ಮ ಒಂದು ಕರೆ ಒಬ್ಬ ಮಗುವಿನ ಜೀವನವನ್ನು ಬದಲಾಯಿಸುತ್ತದೆ ಎಂದರು.ವಕೀಲರ ಸಂಘದ ಉಪಾಧ್ಯಕ್ಷರಾದ ಜಯಲಾಲ್ ತೋಟದಮನಿ ಅವರು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ರಿಯಾಜ್ ಪಟೇಲ್ ವರ್ಕ್ನಳ್ಳಿ ಮಾತನಾಡಿದರು. ಸಹಾಯಕ ಸರಕಾರಿ ಅಭಿಯೋಜಕರಾದ ದಿವ್ಯಾರಾಣಿ, ತಾಲೂಕು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಮಶೇಖರ್ ಬಿರಾದಾರ್, ಶಹಾಪುರ ಕಾರ್ಮಿಕ ನಿರೀಕ್ಷಕ ಸಾಬೇರಾ ಬೇಗಂ, ಡಿ.ಡಿ.ಯು ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ದೇವೇಂದ್ರಪ್ಪ ಮೇಟಿ, ಡಿ.ಡಿ.ಯು ಶಿಕ್ಷಣ ಸಂಸ್ಥೆ ಪ್ರಾಂಶಪಾಲರಾದ ಮಥಾಯಿ, ಜಸ್ಟೀನ್, ವರ್ಲ್ಡ್ ವಿಷನ್ ಸಂಸ್ಥೆಯ ರೋಮ, ಕಾರ್ಮಿಕ ಇಲಾಖೆ ಸಿಬ್ಬಂದಿ ಜಾವೇದ್, ಎಥೇಶ್ಯಾಮ್ ಇತರರಿದ್ದರು.