ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಜೀತ ಪದ್ಧತಿ ನಿರ್ಮೂಲನೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಜಿ. ಪ್ರಭು ಹೇಳಿದರು.ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ‘ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಮತ್ತು ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು.
ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷಗಳು ಕಳೆದರೂ ಜೀತ ಪದ್ಧತಿ ಇನ್ನೂ ಜೀವಂತವಾಗಿರುವುದು ಶೋಚನೀಯ. ಆರ್ಥಿಕವಾಗಿ ಹಿಂದುಳಿದವರು ಜೀತ ಪದ್ಧತಿಗೆ ಒಳಗಾಗುತ್ತಾರೆ. ಜೀತ ಪದ್ಧತಿಯಿಂದ ಮಾನವ ಹಕ್ಕುಗಳಿಗೆ ಚ್ಯುತಿಯುಂಟಾಗುತ್ತದೆ. ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ನಂತರ ಜೀತ ಪದ್ಧತಿ, ಸತಿ ಸಹಗಮನ, ಅಸ್ಪೃಶ್ಯತೆ, ಮಾನವ ಕಳ್ಳಸಾಗಾಣಿಕೆ, ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್‌ಗಳಂತಹ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆಗೊಳಿಸುವಲ್ಲಿ ಯಶಸ್ವಿ ಹೆಜ್ಜೆಗಳನ್ನು ಹಾಕುತ್ತಿದ್ದೇವೆ ಎಂದು ತಿಳಿಸಿದರು.ಜೀತ ಪದ್ಧತಿ ನಿರ್ಮೂಲನೆ ಕಾಯ್ದೆಯನ್ನು 1976ರಲ್ಲಿ ಜಾರಿಗೆ ತರಲಾಗಿದ್ದು, ಕಾಯ್ದೆಯ ಅನುಷ್ಟಾನದ ಜವಾಬ್ದಾರಿಯನ್ನು ಎಲ್ಲ ಅಧಿಕಾರಿಗಳಿಗೆ ನೀಡಲಾಗಿದೆ. ಜೀತ ಪದ್ಧತಿಗೆ ಬಡತನವೇ ಮುಖ್ಯ ಕಾರಣ. ಜೀತ ಕಾರ್ಮಿಕರನ್ನು ಮುಖ್ಯ ವಾಹಿನಿಗೆ ತರುವ ಹೊಣೆಗಾರಿಕೆ ಎಲ್ಲ ಅಧಿಕಾರಿಗಳ ಮೇಲಿದೆ. ಜೀತ ವಿಮುಕ್ತರಿಗೆ ಕಾಯ್ದೆಗಳ ಮೂಲಕ ಭದ್ರತೆ ಒದಗಿಸಿ ಪುನರ್ವಸತಿ ಕಲ್ಪಿಸಬೇಕು. ಜೀತ ನಿರ್ಮೂಲನಾ ಕಾಯ್ದೆಯಿಂದ ಜೀತ ಪದ್ಧತಿಯನ್ನು ತಡೆಯುವುದಷ್ಟೇ ಅಲ್ಲದೆ ಜೀತ ವಿಮುಕ್ತ ವ್ಯಕ್ತಿಗೆ ಜೀವನ ನಿರ್ವಹಣೆಗಾಗಿ ಉದ್ಯೋಗ ನೀಡಿ ಆರ್ಥಿಕವಾಗಿ ಸಬಲರನ್ನಾಗಿಸುವುದು ನಮ್ಮೆಲ್ಲರ ಹೊಣೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಎನ್. ತಿಪ್ಪೇಸ್ವಾಮಿ, ಮನುಷ್ಯನ ಹುಟ್ಟು- ಸಾವಿನ ನಡುವೆ ದುಡಿಮೆ ಅನಿವಾರ್ಯ. ಮನುಷ್ಯನು ಹೇಗೆ ದುಡಿಯಬೇಕು? ಯಾವಾಗ ದುಡಿಯಬೇಕು? ಎಷ್ಟು ದುಡಿಯಬೇಕು? ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಯಾವುದೇ ಚಲನ- ವಲನಕ್ಕೆ ಸ್ವತಂತ್ರವಿಲ್ಲದೆ ಒಬ್ಬ ವ್ಯಕ್ತಿಯನ್ನು ಹಿಡಿತದಲ್ಲಿಟ್ಟುಕೊಂಡು ಬದುಕಿಗೆ ನಿರ್ಬಂಧ ಹೇರುವುದೇ ಜೀತ ಪದ್ಧತಿ. ಮನುಷ್ಯನ ದುಡಿಮೆಯಲ್ಲಿ ಇತಿಮಿತಿ ಇರಬೇಕು. ನಿರಂತರ ಸೇವೆಯ ನಡುವೆ ವಿಶ್ರಾಂತಿ ನೀಡುವುದು ಅವಶ್ಯ. ಸಾಯುವವರೆಗೆ ಯಜಮಾನನ ಕಪಿಮುಷ್ಠಿಯಲ್ಲಿ ದುಡಿಯುವ ಜೀತ ಕಾರ್ಮಿಕರನ್ನು ಮುಖ್ಯವಾಹಿನಿಗೆ ತರಲು ಹಾಗೂ ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸರ್ಕಾರದೊಂದಿಗೆ ಹಲವಾರು ಸಂಘಟನೆಗಳು ಕೈಜೋಡಿಸುತ್ತಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಮುಕ್ತಿ ಅಲೆಯನ್ಸ್ ನ ಸಂಚಾಲಕಿ ಬೃಂದ ಅಡಿಗ ಮಾತನಾಡಿ, ಜೀತ ಪದ್ಧತಿ ರಾಜ್ಯದಲ್ಲಿ ಇನ್ನೂ ಚಾಲ್ತಿಯಲ್ಲಿರುವುದು ನೋವಿನ ಸಂಗತಿ. ಸಾಲದಾತ ಸಾಲಗಾರನನ್ನು ಜೀತಕ್ಕಿಟ್ಟುಕೊಳ್ಳುವುದು ಕಾನೂನು ಅಪರಾಧವಾಗುತ್ತದೆ. ನಮ್ಮ ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ಗೌರವಯುತವಾಗಿ ಬದುಕಲು ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಮಾನವ ಹಕ್ಕುಗಳು ಉಲ್ಲಂಘನೆಯಾದರೆ ಕಾನೂನು ನೆರವು ಪಡೆಯಬೇಕು ಎಂದು ಸಲಹೆ ನೀಡಿದರು.
ಜೀತ ವಿಮುಕ್ತ ಕರ್ನಾಟಕ(ಜೀವಿಕ) ಸಂಘಟನೆಯ ಜಿಲ್ಲಾ ಸದಸ್ಯೆ ಚಿಕ್ಕಮ್ಮ ಮಾತನಾಡಿದರು. ಜೀತ ಪದ್ಧತಿ ಕುರಿತು ಕಾರ್ಯಕ್ರಮದಲ್ಲಿ ಜೀತ ಪದ್ಧತಿಯಲ್ಲಿ ತೊಡಗಿಕೊಂಡಿದ್ದ ಕುಟುಂಬದವರು ಅಭಿನಯಿಸಿದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಇದಕ್ಕೂ ಮುನ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಅವರ ಭಾವಚಿತ್ರಗಳಿಗೆ ಗಣ್ಯರಿಂದ ಪುಷ್ಪ ನಮನ ಸಲ್ಲಿಸಲಾಯಿತು.ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಮಧುಗಿರಿ ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ ವಂದಿಸಿದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಹಾಲಸಿದ್ದಪ್ಪ ಪೂಜೇರಿ ಹಾಗೂ ಸಂಜೀವಪ್ಪ, ಯೋಜನಾ ನಿರ್ದೇಶಕ(ಡಿ.ಆರ್.ಡಿ.ಎ) ಎನ್. ನಾರಾಯಣ ಸ್ವಾಮಿ, ತಿಪಟೂರು ಉಪ ವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ರಾಜೇಶ್ವರಿ ಪಿ.ಎಸ್., ಮಧುಗಿರಿ ಡಿಡಿಪಿಐ ಗಿರಿಜಮ್ಮ, ಜಿಲ್ಲಾ ಕಾರ್ಮಿಕ ಅಧಿಕಾರಿ ತೇಜಾವತಿ, ವಿವಿಧ ತಾಲೂಕಿನ ತಹಸೀಲ್ದಾರರು, ತಾಪಂ ಇಒಗಳು, ಜೀವಿಕ ಸಂಘಟನೆಯ ಜಿಲ್ಲಾ ಸದಸ್ಯರು ಉಪಸ್ಥಿತರಿದ್ದರು.