ತಾಲೂಕಿನ ರೈತರು ಮಳೆಯಾಶ್ರಿಯ ಕೃಷಿ ಚಟುವಟಿಕೆಯನ್ನು ನೆಚ್ಚಿಕೊಂಡಿದ್ದಾರೆ. ಅಲ್ಲಲ್ಲಿ ಕೆಲ ರೈತರು ಪಂಪ್‌ಸೆಟ್ ಮೂಲಕ ಬೆಳೆಗಳಿಗೆ ನೀರು ಪೂರೈಸುತ್ತಾರೆ. ಆದರೆ ವಿದ್ಯುತ್ ಅಭಾವ, ಅನಿಯಮಿತ ಕಡಿತದಿಂದ ರೈತರು ಬೆಳೆ ನಷ್ಟದ ಜತೆಗೆ ಜೀವ ಭಯದಲ್ಲಿ ವಾಸಿಸುವಂತಾಗಿದೆ.
ಎಸ್.ಎಂ. ಸೈಯದ್
ಗಜೇಂದ್ರಗಡ: ಪಟ್ಟಣ ಸೇರಿ ತಾಲೂಕಿನಲ್ಲಿ ಜಮೀನುಗಳಿಗೆ ರಾತ್ರಿ ವೇಳೆ ವಿದ್ಯುತ್ತನ್ನು ಅವೈಜ್ಞಾನಿಕವಾಗಿ ಪೂರೈಸುತ್ತಿದ್ದು, ಜಮೀನಿನಲ್ಲಿ ವಾಸಿಸುವ ರೈತಾಪಿ ಕುಟುಂಬಗಳು ವನ್ಯ ಮೃಗಗಳ ದಾಳಿಯ ಭಯದಲ್ಲಿ ಬದುಕುವಂತಾಗಿದ್ದು ಸರ್ಕಾರದ ಹೊಸದಾಗಿ ಕತ್ತಲ ಭಾಗ್ಯ ನೀಡಿದೇಯಾ ಎಂದು ರೈತರು ಪ್ರಶ್ನಿಸುತ್ತಿದ್ದಾರೆ.ಹೆಸ್ಕಾಂ ತಾಲೂಕಿನ ರೈತರಿಗೆ ಈ ಹಿಂದೆ ೩ ಫೇಸ್ ದಿನಕ್ಕೆ ೭ ತಾಸು ಹಾಗೂ ಸಂಜೆ ೬ ಗಂಟೆಯಿಂದ ಬೆಳಿಗ್ಗೆ ೬ ಗಂಟೆವೆರೆಗೆ ೧ ಫೇಸ್ ವಿದ್ಯುತ್ ಸರಬರಾಜು ಮಾಡುತ್ತಿತ್ತು. ಆದರೆ ಈಗ ಮಳೆಯ ಅಭಾವ ಹಾಗೂ ಬರಗಾಲ ಹಿನ್ನಲೆ ವಿದ್ಯುತ್ ಉತ್ಪಾದನೆ ಕುಂಠಿತವಾಗಿದ್ದು, ಬೆಳಗ್ಗೆ ೬ ಗಂಟೆಯಿಂದ ಸಂಜೆ ಆರರ ವರೆಗೆ ಎರಡು ಬ್ಯಾಚ್‌ನಲ್ಲಿ ೬ ತಾಸು ನೀರಾವರಿ ಪಂಪ್‌ಸೆಟ್‌ಗೆ ವಿದ್ಯುತ್ ಪೂರೈಸಲಾಗುತ್ತಿದೆ. ಸಂಜೆ ೬ ರಿಂದ ರಾತ್ರಿ ೧೨ ರ ವರೆಗೆ ಅನಿರ್ದಿಷ್ಟವಾಗಿ ಸಿಂಗಲ್ ಫೇಸ್ ವಿದ್ಯುತ್ತನ್ನು ೩ ತಾಸು ಪೂರೈಕೆ ಮಾಡುತ್ತಿದೆ.
ತಾಲೂಕಿನ ರೈತರು ಮಳೆಯಾಶ್ರಿಯ ಕೃಷಿ ಚಟುವಟಿಕೆಯನ್ನು ನೆಚ್ಚಿಕೊಂಡಿದ್ದಾರೆ. ಅಲ್ಲಲ್ಲಿ ಕೆಲ ರೈತರು ಪಂಪ್‌ಸೆಟ್ ಮೂಲಕ ಬೆಳೆಗಳಿಗೆ ನೀರು ಪೂರೈಸುತ್ತಾರೆ. ಆದರೆ ವಿದ್ಯುತ್ ಅಭಾವ, ಅನಿಯಮಿತ ಕಡಿತದಿಂದ ರೈತರು ಬೆಳೆ ನಷ್ಟದ ಜತೆಗೆ ಜೀವ ಭಯದಲ್ಲಿ ವಾಸಿಸುವಂತಾಗಿದೆ.ಗಜೇಂದ್ರಗಡ ತಾಲೂಕಿನ ಕಾಲಕಾಲೇಶ್ವರ, ಜೀಗೇರಿ, ಭೈರಾಪೂರ, ಬೈರಾಪೂರ ತಾಂಡಾ, ದಿಂಡೂರು, ವದೆಗೋಳ, ಪ್ಯಾಟಿ, ಕಲ್ಲಿಗನೂರ, ಲಕ್ಕಲಕಟ್ಟಿ, ಕುಂಟೋಜಿ ಸೇರಿ ಇತರ ಗ್ರಾಮೀಣ ಭಾಗದಲ್ಲಿ ಚಿರತೆ ಓಡಾಟವಿದೆ. ಅರಣ್ಯ ಇಲಾಖೆ ಈಗಾಗಲೇ ೩ ಚಿರತೆಗಳನ್ನು ಬೋನಿಗೆ ಕೆಡವಿದೆ. ರೈತರು ಒಬ್ಬೊಬ್ಬರಾಗಿ ಓಡಾಡಬೇಡಿ ಎಂಬ ಎಚ್ಚರಿಕೆಯನ್ನು ಅರಣ್ಯ ಇಲಾಖೆ ರೈತರಿಗೆ ನೀಡಿದೆ. ಗ್ರಾಮೀಣ ಭಾಗದ ಜಮೀನಿನಲ್ಲಿ ದನ, ಕರು, ಕೋಳಿ ಸೇರಿ ಇತರ ಸಾಕುಪ್ರಾಣಿಗಳನ್ನು ಸಾಕಿಕೊಳ್ಳುವುದರ ಜತೆಗೆ ಅವುಗಳಿಗೆ ಬೇಕಾದ ಮೇವು ಮತ್ತಿತರ ಆಹಾರವನ್ನು ಸಂಗ್ರಹಿಸಿಟ್ಟಿಕೊಂಡಿದ್ದಾರೆ. ರಾತ್ರಿ ರೈತರು ಜಮೀನಿಗೆ ಹೋಗಲು ಸಹ ಸಾಧ್ಯವಿಲ್ಲದಂತಾಗಿದೆ. ಅನಿಯಮಿತ ವಿದ್ಯುತ್‌ನಿಂದ ವಿದ್ಯಾರ್ಥಿಗಳ ಓದು ಮತ್ತಿತರ ಕಾರ್ಯಗಳಿಗೂ ಇದರಿಂದ ತೊಂದರೆ ಆಗಿದೆ.ಜೀವಭಯ: ಲೋಡ್ ಶೆಡ್ಡಿಂಗ್ ನೆಪದಲ್ಲಿ ಯಾವಾಗ ವಿದ್ಯುತ್ ನೀಡುತ್ತಾರೆ ಎಂಬುದು ಗೊತ್ತಾಗುತ್ತಿಲ್ಲ. ಜಮೀನಿನಲ್ಲಿ ವಾಸ ಮಾಡುವ ರೈತರು ಜೀವ ಭಯದಲ್ಲೇ ವಾಸಿಸಬೇಕಾಗಿದೆ. ರೈತರು ರಾತ್ರಿ ಹೊಲಗಳತ್ತ ಹೋಗದಂತೆ ಆಗಿದೆ. ಇದರಿಂದ ಇಡೀ ರಾತ್ರಿ ಸಿಂಗಲ್ ಫೇಸ್ ವಿದ್ಯುತ್ ಪೂರೈಸಬೇಕು. ನಿಯಮಿತ ಅವಧಿಯಲ್ಲಿ ತ್ರಿಫೇಸ್ ವಿದ್ಯುತ್ ಪೂರೈಸಿ ಹೊಲಕ್ಕೆ ನೀರು ಹಾಯಿಸಲು ಅನುಕೂಲ ಕಲ್ಪಿಸಬೇಕು ಎಂದು ರಾಂಪೂರದ ರೈತ ಭಾಳಾಜಿರಾವ್ ಭೋಸಲೆ ತಿಳಿಸಿದರು.
೫ ತಾಸು ವಿದ್ಯುತ್ ಪೂರೈಕೆ: ಗಜೇಂದ್ರಗಡ ತಾಲೂಕಿನಲ್ಲಿ ಹಗಲು ೫ ತಾಸು ವಿದ್ಯುತ್ ಪೂರೈಕೆಯಾಗುತ್ತಿದೆ. ಆದರೆ ರಾತ್ರಿ ವೇಳೆ ಸಂಪೂರ್ಣವಾಗಿ ಸಿಂಗಲ್ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲದಿದ್ದರೆ ರೈತರೊಂದಿಗೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕಾಧ್ಯಕ್ಷ ಅನೀಲ ಕರ್ಣೆ ತಿಳಿಸಿದರು.ಹೋರಾಟ: ೨೪ ತಾಸು ವಿದ್ಯುತ್ ಪೂರೈಸುತ್ತೇವೆ ಎಂದು ಗಜೇಂದ್ರಗಡದಲ್ಲಿ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನದು ಬೋಗಸ್ ಘೋಷಣೆ. ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಮುಂದಿನ ದಿನಗಳಲ್ಲಿ ರೈತರಿಗೆ ವಿದ್ಯುತ್ ಪೂರೈಕೆ ಹಾಗೂ ಇತರ ಬೇಡಿಕೆಗಳನ್ನಿಟ್ಟಿಕೊಂಡು ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಬಿಜೆಪಿ ಮುಖಂಡ ಅಶೋಕ ವನ್ನಾಲ ತಿಳಿಸಿದರು.
ಉತ್ಪಾದನೆ ಕೊರತೆ: ಬರಗಾಲ ಹಾಗೂ ವಿದ್ಯುತ್ ಉತ್ಪಾದನೆ ಕೊರತೆ ಜತೆಗೆ ಬೇಡಿಕೆ ದುಪ್ಪಟ್ಟಾದ ಪರಿಣಾಮ ಈಗ ಬೆಳಗ್ಗೆ ೬ ಗಂಟೆಯಿಂದ ಸಂಜೆ ೬ರ ವರೆಗೆ ಎರಡು ಬ್ಯಾಚ್ ನಲ್ಲಿ ೬ ತಾಸು ನೀರಾವರಿ ಪಂಪ್‌ಸೆಟ್‌ಗೆ ಪೂರೈಸಲಾಗುತ್ತಿದೆ. ಸಂಜೆ ೬ ರಿಂದ ರಾತ್ರಿ ೧೨ ವರೆಗೆ ಅನಿರ್ದಿಷ್ಟವಾಗಿ ಸಿಂಗಲ್ ಫೇಸ್ ವಿದ್ಯುತ್ ೩-೪ ತಾಸು ಪೂರೈಸಲಾಗುತ್ತಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ವೀರೇಶ ಟಿ. ರಾಜೂರ ತಿಳಿಸಿದರು.