ಎಲೆಚುಕ್ಕಿ ರೋಗ: ಹವಾಮಾನಕ್ಕೆ ತಕ್ಕಂತೆ ಔಷಧ ತಯಾರಿಸಿ

| Published : Oct 17 2023, 12:45 AM IST

ಎಲೆಚುಕ್ಕಿ ರೋಗ: ಹವಾಮಾನಕ್ಕೆ ತಕ್ಕಂತೆ ಔಷಧ ತಯಾರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಮಾರುಕಟ್ಟೆಯಲ್ಲಿ ಇರುವ, ತಜ್ಞರು ಸೂಚಿಸಿದ ಔಷಧ ಸಿಂಪಡಣೆ ಮಾಡಿದರೂ ಸಾಕಷ್ಟು ಅಡಕೆ ತೋಟಗಳನ್ನು ಕಳೆದುಕೊಂಡಿದ್ದೇವೆ. ಇಲ್ಲಿನ ಹವಾಮಾನ ಅನುಗುಣವಾಗಿ ಯಾವ ರೀತಿ ಔಷಧ ತಯಾರಿಸಿದರೆ ಪರಿಣಾಮ ಬೀರುತ್ತದೆ ಎಂದು ತಳಮಟ್ಟದಿಂದ ಅಧ್ಯಯನ ನಡೆಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಶಿರಸಿ: ಜಿಲ್ಲೆಯ ರೈತರನ್ನು ಕಾಡುತ್ತಿರುವ ಎಲೆಚುಕ್ಕಿ ರೋಗಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಸ್ಥಳೀಯ ತೋಟಗಳಲ್ಲಿ ಪ್ರಾಯೋಗಿಕ ಅಧ್ಯಯನ ನಡೆಸಿ, ಯಾವ ರೀತಿ ಔಷಧ ಸಿಂಪಡಣೆ ಮಾಡಿದರೆ ಸೂಕ್ತ ಎಂಬುದನ್ನು ತಜ್ಞರು ನಿರ್ಧರಿಸಬೇಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು. ನಗರದಲ್ಲಿ ಸೋಮವಾರ ಆಯೋಜಿಸಿದ್ದ ತೋಟಗಾರಿಕಾ ಇಲಾಖೆ ಅಧಿಕಾರಿಗಳು, ವಿಜ್ಞಾನಿಗಳ ಸಭೆಯಲ್ಲಿ ಮಾತನಾಡಿದರು. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ, ತಜ್ಞರು ಸೂಚಿಸಿದ ಔಷಧ ಸಿಂಪಡಣೆ ಮಾಡಿದರೂ ಸಾಕಷ್ಟು ಅಡಕೆ ತೋಟಗಳನ್ನು ಕಳೆದುಕೊಂಡಿದ್ದೇವೆ. ಇಲ್ಲಿನ ಹವಾಮಾನ ಅನುಗುಣವಾಗಿ ಯಾವ ರೀತಿ ಔಷಧ ತಯಾರಿಸಿದರೆ ಪರಿಣಾಮ ಬೀರುತ್ತದೆ ಎಂದು ತಳಮಟ್ಟದಿಂದ ಅಧ್ಯಯನ ನಡೆಸಬೇಕು. ರೈತರು ಸಾಕಷ್ಟು ಖರ್ಚು ಮಾಡಿ ಔಷಧ ಸಿಂಪಡಣೆ ಮಾಡುತ್ತಾರೆ. ಅವರಿಗೆ ಅನ್ಯಾಯವಾಗಬಾರದು. ಕಂಪನಿಯಿಂದ ಸಂಪೂರ್ಣ ಮಾಹಿತಿ ನೀಡಬೇಕು. ಸುಳ್ಳು ಹೇಳಿ ಔಷಧ ಮಾರಾಟ ಮಾಡಿದರೆ ಆ ಕಂಪನಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈಗಾಗಲೇ ಎಲೆಚುಕ್ಕೆ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಪ್ರಯೋಗ ಮಾಡುತ್ತ ಕುಳಿತರೆ ಬೆಳೆ ನಾಶವಾಗುತ್ತದೆ. ವಿಜ್ಞಾನಿಗಳು ಇಲ್ಲಿನ ತೋಟಗಳಿಗೆ ಭೇಟಿ ನೀಡಿ, ಪ್ರಯೋಗ ನಡೆಸಿ, ಔಷಧ ತಯಾರಿಕೆಯ ಬಗ್ಗೆ ಕಂಪನಿಗೆ ಸೂಕ್ತ ಸಲಹೆ ನೀಡಬೇಕು ಎಂದ ಅವರು, ರಾಜ್ಯಮಟ್ಟದ ತೋಟಗಾರಿಕಾ ವಿಜ್ಞಾನಿಗಳು ಮತ್ತು ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇನೆ. ಶಿರಸಿ-ಸಿದ್ದಾಪುರ ಭಾಗಕ್ಕೆ ಆಗಮಿಸಿ ರೋಗ ನಿಯಂತ್ರಕದ ಕುರಿತು ರೈತರಿಗೆ ಮಾರ್ಗದರ್ಶನ ಮಾಡಲು ವಿನಂತಿಸಲಾಗುತ್ತದೆ ಎಂದರು. ಶಿರಸಿಯ ಬಾಗಲಕೋಟ ತೋಟಗಾರಿಕಾ ಮಹಾವಿದ್ಯಾಲಯದ ವಿಜ್ಞಾನಿ ಡಾ. ಪ್ರಸಾದ ಮಾತನಾಡಿ, ಎಲೆಚುಕ್ಕೆ ಮತ್ತು ಹಳದಿರೋಗ ನಿಯಂತ್ರಣದ ಕುರಿತು ವಿಟ್ಲದ ವಿನಾಯಕ ಹೆಗ್ಡೆ ನೇತೃತ್ವದಲ್ಲಿ ಟಾಸ್ಕಪೋರ್ಸ್ ಸಮಿತಿ ರಚಿಸಲಾಗಿದೆ. ಅವರು ಸಾಕಷ್ಟು ಕಡೆಗಳ ಅಡಕೆ ತೋಟಗಳಿಗೆ ಭೇಟಿ ನೀಡಿ, ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕ್ರಮದ ಕುರಿತು ಸೂಕ್ತ ಮಾಹಿತಿ ನೀಡುತ್ತಿದ್ದಾರೆ. ಎಲೆಚುಕ್ಕೆ ರೋಗ ಹಳೆಯ ರೋಗವಾಗಿದ್ದು, ಇಂದಿನ ಹವಾಮಾನದ ವೈಪರೀತ್ಯದಿಂದ ಶಿಲೀಂಧ್ರದ ಪ್ರಮಾಣ ಹೆಚ್ಚಾಗಿ ರೋಗ ಉಲ್ಬಣಗೊಂಡಿದೆ. ಬೋರ್ಡೋ ದ್ರಾವಣವನ್ನು ಕೇವಲ ಸಿಂಗಾರಕ್ಕೆ ಮಾತ್ರವಲ್ಲದೇ, ಅಡಕೆ ಸುಳಿ, ಎಲೆಗೆ ಸಿಂಪಡಿಸಬೇಕು. ಕೇವಲ ಒಂದು ಬಾರಿ ಸಿಂಪಡಣೆಯಿಂದ ನಿಯಂತ್ರಣ ಸಾಧ್ಯವಿಲ್ಲ. ಮೇ ಕೊನೆ ಮತ್ತು ಜೂನ್ ಮೊದಲ ವಾರ ಹಾಗೂ ೨೫ ನಂತರ ಸ್ಪ್ರೇ ಮಾಡುವುದರಿಂದ ರೋಗ ಹತೋಟಿ ಸಾಧ್ಯ ಎಂದರು. ಪ್ರೋಪಿಕೊನಝೋಲ್, ಟೆಬುಕೊನಝೋಲ್ ಅಥವಾ ಹೆಕ್ಸಾಕೊನಝೋಲ್ ಶಿಲೀಂಧ್ರ ನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಮಿಲಿಲೀಟರ್ ಪ್ರಮಾಣದಲ್ಲಿ ಎಲೆಗಳಿಗೆ ಸಿಂಪಡಿಸಬೇಕು. ಪ್ರತಿ ಲೀಟರ್ ದ್ರಾವಣಕ್ಕೆ ಒಂದು ಮಿಲಿಲೀಟರ್ ಪ್ರಮಾಣದಲ್ಲಿ ಕಡ್ಡಾಯವಾಗಿ ಅಂಟ ಸೇರಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ. ಸತೀಶ, ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ, ಪ್ರಮುಖರಾದ ಎಸ್.ಕೆ. ಭಾಗ್ವತ್, ವೆಂಕಟೇಶ ಹೆಗಡೆ ಹೊಸಬಾಳೆ ಸೇರಿದಂತೆ ತೋಟಗಾರಿಕಾ ಇಲಾಖೆ ಅಧಿಕಾರಿಗಳು, ತಜ್ಞರು, ಪ್ರಾಧ್ಯಾಪಕರು ಇದ್ದರು. ಎಲೆಚುಕ್ಕಿ ರೋಗವನ್ನು ಇಷ್ಟರ ಒಳಗೇ ನಿಯಂತ್ರಣಕ್ಕೆ ತರಬೇಕಿತ್ತು. ತಜ್ಞರು ತೋಟಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಬೇಕು. ಯಾವ ಔಷಧ ಪರಿಣಾಮ ಬೀರುತ್ತದೆ ಎಂಬುದನ್ನು ವಿಜ್ಞಾನಿಗಳು ತಿಳಿದು, ರೈತರಿಗೆ ಮಾಹಿತಿ ಒದಗಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.