ಕನ್ನಡಪ್ರಭ ವಾರ್ತೆ ಮೈಸೂರು
18ನೇ ಆವೃತ್ತಿಯ ಈಶ ಗ್ರಾಮೋತ್ಸವ- ಕರ್ನಾಟಕ ವಿಭಾಗೀಯ ಪಂದ್ಯಗಳು ನಗರದ ಜಯಲಕ್ಷ್ಮೀಪುರಂ ಮಹಾಜನ ಕಾಲೇಜಿನ ಜಗದೀಶ್ ಪ್ರಸಾದ್ ಆಟದ ಮೈದಾನ ಭಾನುವಾರ ಜರುಗಿತು. ಈ ಭಾಗದ 300 ಹೆಚ್ಚು ಗ್ರಾಮೀಣ ಆಟಗಾರರು ಭಾಗವಹಿಸಿದ್ದರು.ಈಶ ಔಟ್ ರೀಚ್ ಆಯೋಜಿಸಿದ್ದ ಈ ವಿಭಾಗೀಯ ಪಂದ್ಯಗಳಲ್ಲಿ 20 ಪುರುಷರ ವಾಲಿಬಾಲ್ ತಂಡಗಳು ಮತ್ತು 12 ಮಹಿಳೆಯರ ಥ್ರೋಬಾಲ್ ತಂಡಗಳು ಪಾಲ್ಗೊಂಡಿದ್ದವು. ರಾಷ್ಟ್ರೀಯ ಹಂತದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಹಂಬಲವಿರುವ ತಂಡಗಳಿಗೆ ಈ ಪಂದ್ಯಾವಳಿಯು ಪ್ರಮುಖ ಅರ್ಹತಾ ಸುತ್ತಾಗಿತ್ತು.
ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಚಾಮರಾಜನಗರದ ರಾಮಾಪುರದ ಬುದ್ಧ ಸೂಪರ್ ಟೀಂ ತಂಡವು ವಿಭಾಗೀಯ ಚಾಂಪಿಯನ್ ಆಗಿ ಹೊರಹೊಮ್ಮಿತು. ನಂಜನಗೂಡಿನ ಕಡಕೋಳದ ಚಾಮುಂಡಿ ಬಾಯ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು. ಚಿಕ್ಕಬಳ್ಳಾಪುರದ ಮಾಸ್ತೇನಹಳ್ಳಿಯ ಅಪ್ಪು ಬಾಯ್ಸ್ ತಂಡ ತೃತೀಯ ಸ್ಥಾನ ಹಾಗೂ ಕೋಲಾರದ ಮಾರ್ಜೇನಹಳ್ಳಿಯ ಎಂ.ಆರ್.ಜೆ ಬ್ರೋಧೆರ್ಸ್ ತಂಡ ನಾಲ್ಕನೇ ಸ್ಥಾನ ಪಡೆಯಿತು.ಇನ್ನೂ ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ನಂಜನಗೂಡಿನ ಹೆಡತಲೆಯ ಚಾಮುಂಡಿ ಗರ್ಲ್ಸ್ ತಂಡ ವಿಭಾಗೀಯ ಚಾಂಪಿಯನ್ ಆಗಿ ಹೊರಹೊಮ್ಮಿತು. ಚಿಕ್ಕಬಳ್ಳಾಪುರದ ಬಲಿಗನಹಳ್ಳಿಯ ಸಿಎಸ್ಎ ತಂಡ ದ್ವಿತೀಯ ಸ್ಥಾನ, ಶಿವಮೊಗ್ಗದ ಗುಡ್ಡೆಕೊಪ್ಪದ ಕೊಡಚಾದ್ರಿ ತಂಡ ತೃತೀಯ ಮತ್ತು ಬೆಟ್ಟದಪುರದ ಚಿಕ್ಕನೇರಳೆಯ ಜೈ ಶ್ರೀರಾಮ್ ತಂಡ ನಾಲ್ಕನೇ ಸ್ಥಾನ ಗಳಿಸಿತು.
ಆರೋಗ್ಯದ ಮೇಲೆ ಪರಿಣಾಮ:
ಈ ಪಂದ್ಯಾವಳಿ ಉದ್ಘಾಟಿಸಿದ ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಗ್ರಾಮೀಣ ಕ್ರೀಡೋತ್ಸವದ ಪರಿಕಲ್ಪನೆಯು ಅತ್ಯಂತ ಸಂತೋಷದ ವಿಚಾರ. ಗ್ರಾಮೀಣ ಭಾಗದ ಜನರು ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಹಾಗೂ ವಾನಸಿಕ ಆರೋಗ್ಯ ಸುಧಾರಿಸುತ್ತದೆ. ವಾಕಿಂಗ್ ಹಾಗೂ ಇತರ ವ್ಯಾಯಮಗಳಿಗಿಂತ ಕ್ರೀಡೆಯಲ್ಲಿ ಮನಸ್ಫೂರ್ತಿಯಾಗಿ ತೊಡಗಿಸಿಕೊಂಡಾಗ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸೂಕ್ತ ವೇದಿಕೆ ಹಾಗೂ ಅವಕಾಶಗಳನ್ನು ಕಲ್ಪಿಸುವ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವ ಅಗತ್ಯವಿದೆ ಎಂದರು.ಖೇಲೋ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕಿ ಅಮರ್ ಜ್ಯೋತಿ, ಜೆಕೆ ಟೈರ್ಸ್ ಉಪಾಧ್ಯಕ್ಷ ಈಶ್ವರರಾವ್, ಜಾನಪದ ಗಾಯಕ ಅಮ್ಮಾ ರಾಮಚಂದ್ರ, ಟಿಬೆಟಿಯನ್ ಬೌದ್ಧ ಭಿಕ್ಷು ನವಾಂಗ್ ಲಾಮಾ ಮೊದಲಾದವರು ಇದ್ದರು.
ವಿಜೇತರಿಗೆ ಭಾರತದ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಹಾಗೂ ಕರ್ನಾಟಕದ ಮೊದಲ ಚೆಸ್ ಗ್ರ್ಯಾಂಡ್ ಮಾಸ್ಟರ್ ಎಂ.ಎಸ್. ತೇಜ್ ಕುಮಾರ್ ಬಹುಮಾನ ವಿತರಿಸಿದರು.