ಸಾರಾಂಶ
ಜಿಲ್ಲಾಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆ । ಈಶ್ವರ ಇಗ್ಗುತ್ತಪ್ಪ ‘ಎ’ ರನ್ನರ್ ಅಪ್
ಕನ್ನಡಪ್ರಭ ವಾರ್ತೆ ನಾಪೋಕ್ಲುಇಲ್ಲಿನ ಹಿಂದೂ ಮಲಯಾಳಿ ಸಂಘದ ವತಿಯಿಂದ ಹಿಂದೂ ಬಾಂಧವರಿಗಾಗಿ ಹಳೆ ತಾಲೂಕಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಈಶ್ವರ ಇಗ್ಗುತ್ತಪ್ಪ-ಬಿ ತಂಡ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ವಿಜೇತ ತಂಡಕ್ಕೆ 33,333 ರು. ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಈಶ್ವರ ಇಗ್ಗುತ್ತಪ್ಪ-ಎ ತಂಡಕ್ಕೆ 22,222 ರು. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು.ತೃತೀಯ ಸ್ಥಾನ ಪಡೆದ ಬೇಗೂರು ಮಹಾ ವಿಷ್ಣು ತಂಡಕ್ಕೆ 11,111 ರು. ನಗದು ಹಾಗೂ ಆಕರ್ಷಕ ಟ್ರೋಫಿ ಲಭಿಸಿತು.
ಮಹಿಳಾ ವಿಭಾಗದಲ್ಲಿ ಬಲಮುರಿಯ ಮಹಾದೇವ ಸ್ಪೋರ್ಟ್ಸ್ ಕ್ಲಬ್ ತಂಡ ಪ್ರಥಮ ಸ್ಥಾನ ಗಳಿಸಿತು. ದ್ವಿತೀಯ ಸ್ಥಾನ ನಾಪೋಕ್ಲು ಭಗವತಿ ತಂಡದ ಪಾಲಾಯಿತು. ವಿಜೇತ ತಂಡಕ್ಕೆ 11,111 ರು. ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ಎರಡನೇ ಸ್ಥಾನ ಪಡೆದ ತಂಡಕ್ಕೆ 5,555 ರು. ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಯಿತು.ಸಮಾರೋಪ ಸಮಾರಂಭ:ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ, ಇಂದು ನಮ್ಮ ಸಮಾಜ ವಿವಿಧ ಕಾರಣಗಳಿಂದ ಒಡೆಯುತ್ತಿದೆ. ಸಮಾಜವನ್ನು ಒಗ್ಗೂಡಿಸುವ ವಿಶೇಷ ಪ್ರಯತ್ನವನ್ನು ನಾನಾ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಸಂಘ ಸಂಸ್ಥೆಗಳು ಮಾಡುತ್ತಿವೆ. ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಆಯೋಜಿಸುವುದರ ಮೂಲಕ ಹಿಂದೂ ಮಲಯಾಳಿ ಸಂಘ ಸಮಾಜದ ಒಗ್ಗಟ್ಟಿಗೆ ಕಾರಣವಾಗಿದೆ ಎಂದರು.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಮಾತನಾಡಿ, ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಪೊನ್ನಣ್ಣ ಒಂದು ಕೋಟಿ ರುಪಾಯಿ ಕೊಡುವುದಾಗಿ ಭರವಸೆ ನೀಡಿದ್ದಾರೆ. ಸರ್ಕಾರಿ ಜಾಗ ಲಭ್ಯವಿಲ್ಲದ ಕಾರಣ ನಿವೇಶನಕ್ಕಾಗಿ ಜಾಗ ಖರೀದಿ ಮಾಡಬೇಕಾದ ಅವಶ್ಯಕತೆ ಇದೆ. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕು. ಸಂಘದ ಶ್ರೇಯೋಭಿವೃದ್ಧಿಗೆ ನಾನು ಒಂದು ಲಕ್ಷ ರುಪಾಯಿಗಳ ದೇಣಿಗೆ ನೀಡುವುದಾಗಿ ಘೋಷಿಸಿದರು.ಹಿಂದೂ ಮಲಯಾಳಿ ಸಂಘ ಮಡಿಕೇರಿ ತಾಲೂಕಿನ ಅಧ್ಯಕ್ಷ ಧರ್ಮೇಂದ್ರ ಮಾತನಾಡಿ, ಕ್ರೀಡೆ ಎನ್ನುವುದು ಕೇವಲ ಪ್ರಶಸ್ತಿಗೋಸ್ಕರ ಆಗಬಾರದು. ಗೆದ್ದವರು ಹಿಗ್ಗದೆ ಸೋತವರು ಕುಗ್ಗದೆ ಕ್ರೀಡಾ ಮನೋಭಾವನೆಯಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಕ್ರೀಡೆಯಿಂದ ಉತ್ತಮ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬಹುದು. ಕ್ರೀಡೆಯಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದರು.
ಮಡಿಕೇರಿ ಹಿಂದು ಮಲಯಾಳಿ ಸಂಘದ ಗೌರವಾಧ್ಯಕ್ಷ ರಮೇಶ್, ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ ಪ್ರದೀಪ್, ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಆಲಿ, ಮಡಿಕೇರಿ ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹರೀಶ್ ಪೂವಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಅರುಣ್ ಬೇಬಾ ಮಾತಣಾಡಿದರು.ನಾಪೋಕ್ಲು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಅನಿಲ್ ಕೆ.ಕೆ. ಅಧ್ಯಕ್ಷತೆ ವಹಿಸಿದ್ದರು. ನಾಪೋಕ್ಲು ಹಿಂದೂ ಮಲಯಾಳಿ ಸಂಘದ ಮಹಿಳಾ ಅಧ್ಯಕ್ಷೆ ಸುಮಿತ್ರ ವಿನೋದ್, ಹಿಂದೂ ಮಲಯಾಳಿ ಸಂಘದ ಖಜಾಂಚಿ ವಿಶ್ವನಾಥ್, ನಾಪೋಕ್ಲು ಶಕ್ತಿ ಕೇಂದ್ರದ ಅಧ್ಯಕ್ಷ ಅಂಬಿ ಕಾರಿಯಪ್ಪ, ಕಾಫಿ ಬೆಳೆಗಾರ ಎ.ಎಂ.ರತ್ನ ಪೆಮ್ಮಯ್ಯ, ಹಿಂದೂ ಮಲಯಾಳಿ ಸಂಘದ ಸಲಹೆಗಾರರಾದ ವಿನಿಲ್, ರಘು ಅಜ್ಜಿಮುಟ್ಟ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.ಕಾರ್ಯಕ್ರಮದಲ್ಲಿ ನಾಪೋಕ್ಲು ಹಿಂದೂ ಮಲಯಾಳಿ ಸಂಘದ ಮಹಿಳಾ ಘಟಕದ ವತಿಯಿಂದ ನಡೆದ ತಿರುವಾದಿರ ನೃತ್ಯ ಗಮನ ಸೆಳೆಯಿತು.
ರವಿ ಓಂಕಾರ್ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಶೈಲಾ ಸ್ವಾಗತಿಸಿದರು. ಅನಿಲ್ ಕೆ.ಕೆ. ವಂದಿಸಿದರು.