ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು : ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆ
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ, ಮಂಗಳವಾರ ನಗರದಲ್ಲಿ ನಡೆದ ಮಹಾಸಭಾದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಎಲ್ಲ ಸದಸ್ಯರೂ ಸಹಮತ ವ್ಯಕ್ತಪಡಿಸಿದ್ದರಿಂದ ಈಶ್ವರ ಖಂಡ್ರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಳೆದ 13 ವರ್ಷದಿಂದ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಖಂಡ್ರೆ ಅವರು ಒಂದು ವರ್ಷದಿಂದ ಹಿರಿಯ ಉಪಾಧ್ಯಕ್ಷರ ಪ್ರಭಾರ ಹೊಣೆಯನ್ನೂ ನಿಭಾಯಿಸಿದ್ದರು ಎಂದು ವಿವರಿಸಿದರು.
ಶಾಮನೂರು ಶಿವಶಂಕರಪ್ಪ ಅವರ ನಿಧನನದ ಹಿನ್ನೆಲೆ ತೆರವಾಗಿದ್ದ ಹುದ್ದೆ
ಶಾಮನೂರು ಶಿವಶಂಕರಪ್ಪ ಅವರ ನಿಧನನದ ಹಿನ್ನೆಲೆಯಲ್ಲಿ ಮಹಾಸಭಾ ಅಧ್ಯಕ್ಷ ಗಾದಿಗೆ ರಾಜಕೀಯ ಮುಖಂಡರು, ಸ್ವಾಮೀಜಿಗಳ ಹೆಸರು ಕೇಳಿಬಂದಿತ್ತು. ಆದರೆ ಮಂಗಳವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈಶ್ವರ ಖಂಡ್ರೆ ಅವರಿಗೇ ಜವಾಬ್ದಾರಿ ವಹಿಸಲು ತೀರ್ಮಾನಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಗಣೇಶ್ ಶಾಮನೂರು, ಪ್ರಭಾಕರ ಕೋರೆ, ರಾಜಣ್ಣ, ವೀರಣ್ಣ ಚರಂತಿ ಮಠ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಘಟಕದ ಅಧ್ಯಕ್ಷರು, ಪ್ರತಿನಿಧಿಗಳು ಪಾಲ್ಗೊಂಡಿದ್ದರು.

