ಸಾರಾಂಶ
ಕಾರಟಗಿ: ತಾಲೂಕಿನ ಸಿದ್ದಾಪುರ ಗ್ರಾಮದ ಆರಾಧ್ಯ ದೈವ ಈಶ್ವರ ದೇವರ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿ, ವಿಜೃಂಭಣೆಯಿಂದ ನಡೆಯಿತು.ಬೆಳಗಿನಜಾವ ಈಶ್ವರ, ವೆಂಕಟೇಶ್ವರ, ಮಾರುತೇಶ್ವರ ದೇವರಿಗೆ ಪೂಜೆ, ಅಭಿಷೇಕ, ಪುಷ್ಪಾರ್ಚನೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ವಿಧಿ ವಿಧಾನಗಳೊಂದಿಗೆ ವಿನಯಕುಮಾರ ಹಿರೆಮಠ, ಸಿದ್ಧಾರ್ಥ ಹಿರೆಮಠ ಹಾಗೂ ಸಾಲಗುಂದಿ ಗವಿಮಠದ ಗಾದಿಲಿಂಗಸ್ವಾಮಿ ನೆರವೇರಿಸಿದರು.
ನಂತರ ಕುಂಭ ಕಳಸ, ಕನ್ನಡಿ ಹೊತ್ತ ಸುಮಂಗಲೆಯರೊಂದಿಗೆ ಹಾಗೂ ಭಾಜಾ ಭಜಂತ್ರಿಯೊಂದಿಗೆ ಗಂಗೆಸ್ಥಳದಲ್ಲಿ ಪೂಜೆ ಸಲ್ಲಿಸಿ ಈಶ್ವರ ದೇವರ ಮೂರ್ತಿಯ ಪಲ್ಲಕ್ಕಿ ಮೆರವಣಿ ನಡೆಯಿತು.
ಮಹಿಳೆಯರಿಂದ ಕುಂಭ, ಕಳಸದೊಂದಿಗೆ ಈಶ್ವರ ದೇವಸ್ಥಾನದಿಂದ ಉಚ್ಛಾಯ ಆರಂಭವಾಗಿ ಗೂಳಿಬಸವೇಶ್ವರ ಸರ್ಕಲ್ ಮೂಲಕ ಪವಾಡ ಪುರುಷ ವೀರಪ್ಪಯ್ಯತಾತ ಹಾಗೂ ಬಸವಣ್ಣಯ್ಯತಾತನ ದೇವಸ್ಥಾನದವರೆಗೆ ತೆರಳಿ ಅಲ್ಲಿ ವಿಶೇಷ ಪೂಜೆ ಸಲ್ಲಿಸಿ ಮರಳಿ ಈಶ್ವರ ದೇವಸ್ಥಾನಕ್ಕೆ ವಾಪಸಾಯಿತು.
ಮೆರವಣಿಗೆಯಲ್ಲಿ ವೀರಗಾಸೆ ಕುಣಿತ ಹಾಗೂ ೧೦೧ ಕುಂಬೋತ್ಸವ ಮೆರವಣಿಗೆ ನೋಡುಗರ ಗಮನ ಸೆಳೆದರೆ ಝಾಂಜ ಮೇಳಕ್ಕೆ ಯುವಕರು ಕುಣಿದು ಕುಪ್ಪಳಿಸಿದರು.
ಜಾತ್ರಾ ಮಹೋತ್ಸವದ ನಿಮಿತ್ತ ಈ ಬಾರಿ ವಿಶೇಷವಾಗಿ ಇಲಕಲ್ ಸಮೀಪದ ಕನಸಾವಿ ಗ್ರಾಮದ ಭೀಮಣ್ಣ ನೇತೃತ್ವದ ತಂಡ ಮಾದಲಿ ತಯಾರಿಸಿದ್ದರು. ಸಿದ್ದಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.